ಬೆಂಗಳೂರು:ಪ್ರೀಮಿಯಂ ಮದ್ಯದ ದರ ಇಳಿಸಿದ ಬೆನ್ನಲ್ಲೇ ರಮ್, ವಿಸ್ಕಿ,ಬ್ರಾಂಡಿ ಮದ್ಯಗಳ ಕೊರತೆಯಾಗಿದೆ.
ರಾಜ್ಯದಲ್ಲಿ 32ಗಿಂತ ಅಧಿಕ ಮದ್ಯ ತಯಾರಿಕಾ ಕಂಪನಿಗಳಿವೆ.ಪ್ರತಿ ನಿತ್ಯ ಆಯಾ ಕಂಪನಿಗಳು ತಮ್ಮ ಬ್ರ್ಯಾಂಡ್ ಅಡಿ ಮದ್ಯ ತಯಾರಿಸಿ ಸರ್ಕಾರಕ್ಕೆ ತೆರಿಗೆ ಪಾವತಿಸಿ ಮದ್ಯ ಮಾರಾಟ ಮಾಡುತ್ತಿವೆ.
ಆದರೆ, ಪ್ರೀಮಿಯಂ ಮದ್ಯದ ದರ ಇಳಿಸಿದ ಬೆನ್ನಲ್ಲೇ ಕೆಲ ತಯಾರಿಕಾ ಕಂಪನಿಗಳು ಸೂಕ್ತವಾಗಿ ಮದ್ಯವನ್ನು ಉತ್ಪಾದಿಸುತ್ತಿಲ್ಲ. ಇದರಿಂದಾಗಿ ಕರ್ನಾಟಕ ರಾಜ್ಯ ಪಾನೀಯ ನಿಗಮ ನಿಯಮಿತದಲ್ಲಿ (ಕೆಎಸ್ಬಿಸಿಎಲ್) ಸೂಕ್ತ ಮದ್ಯ ದಾಸ್ತಾನು ಇಲ್ಲದೆ ಮದ್ಯದಂಗಡಿ ಮಾಲೀಕರು ಪರದಾಡುತ್ತಿದ್ದಾರೆ.ಸರ್ಕಾರ ನಿಗದಪಡಿಸಿದ್ದ ಆದಾಯ ಗುರಿ ತಲುಪಲು ಇಲಾಖೆ ಅಧಿಕಾರಿಗಳು ಸಹ ಸಂಕಟ ಪಡುತ್ತಿದ್ದಾರೆ.
ರಾಜ್ಯದಲ್ಲಿ 3,988 ವೈನ್ಶಾಪ್(ಸಿಎಲ್2), 279 ಕ್ಲಬ್ (ಸಿಎಲ್4), 78 ಸ್ಟಾರ್ ಹೋಟೆಲ್ ( ಸಿಎಲ್6ಎ), 2,382 ಹೋಟೆಲ್ ಮತ್ತು ವಸತಿ ಗೃಹ (ಸಿಎಲ್-7), 68 ಮಿಲಿಟರಿ ಕ್ಯಾಂಟಿನ್ ಮಳಿಗೆ (ಸಿಎಲ್8), 3,634 ಬಾರ್ ಆಯಂಡ್ ರೆಸ್ಟೋರೆಂಟ್ (ಸಿಎಲ್9), 1,041 ಎಂಎಸ್ಐಎಲ್ (ಸಿಎಲ್11ಸಿ) ಮತ್ತು 745 ಆರ್ವಿಬಿ ಸೇರಿ ಒಟ್ಟು 12,614 ಮದ್ಯದಂಗಡಿಗಳಿವೆ. ಪ್ರತಿ ನಿತ್ಯ ಮದ್ಯ ಮಾರಾಟದಿಂದಾಗಿ 65-70 ಕೋಟಿ ರೂ.ಇಲಾಖೆ ಮೂಲಕ ಸರ್ಕಾರಕ್ಕೆ ಆದಾಯ ಬರುತ್ತಿದೆ.