ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಅಲಖನೂರ ಕರಿಸಿದ್ದೇಶ್ವಸರ ದೇವಸ್ಥಾನದ ಧೃವ ಎಂಬ ಆನೆ ದಾಳಿಯಿಂದ ಮಾವುತ ಮೃತಪಟ್ಟಿದ್ದಾನೆ. ಅಲಖನೂರ ಗ್ರಾಮದ ಧರೆಪ್ಪ ಭೇವನೂರ (28) ಮೃತರು. ಇಂದು ಬೆಳಗ್ಗೆ 7 ಗಂಟೆಗೆ ಮೇವು ಹಾಕಲು ಬಂದ ಮಾವುತನನ್ನು ಆನೆ ತುಳಿದಿದೆ ಎಂದು ತಿಳಿದು ಬಂದಿದೆ.
ನಿನ್ನೆ ರಾತ್ರಿ ಧೃವ ಆನೆಗೆ ಮದ ಬಂದ ಹಾಗೆ ಆಗಿತ್ತು. ಇಂದು ಬೆಳಗ್ಗೆಯೂ ಕೂಡ ಮದವೇರಿದ ಸಂದರ್ಭದಲ್ಲಿ ಮೇವು ಹಾಕಲು ಬಂದ ಮಾವುತನ ಮೇಲೆ ದಾಳಿ ಮಾಡಿದೆ. ಕರಿಸಿದ್ದೇಶ್ವರ ದೇವಸ್ಥಾನದಲ್ಲಿ 30 ವರ್ಷದ ಗಂಡಾನೆ ಧೃವ ವಾಸವಾಗಿತ್ತು.
ಧರೆಪ್ಪ ಭೇವನೂರಗೆ 10 ದಿನದ ಹಿಂದಷ್ಟೇ ಗಂಡು ಮಗು ಜನಿಸಿತ್ತು. ಮೃತನ ಕುಟುಂಬಸ್ಥರಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.
ಹಾರೂಗೇರಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಾರೂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.