ಉಡುಪಿ: ಕಿಡಿಗೇಡಿ ಕೊರೊನಾ ವಿಶ್ವದಲ್ಲಿ ಏನೇನೋ ಅವಾಂತರ ಸೃಷ್ಟಿ ಮಾಡಿದೆ. ಉಡುಪಿಯ ಕ್ಯಾಬಿನೆಟ್ ದರ್ಜೆಯ ಜಿಲ್ಲಾಪಂಚಾಯತ್ ಅಧ್ಯಕ್ಷರನ್ನು ಇದೇ ಕೊರೊನಾ ಕಂಡಕ್ಟರ್ ಮಾಡಿದೆ.
ಉಡುಪಿ ಜಿಲ್ಲಾಪಂಚಾಯತ್ ಅಧ್ಯಕ್ಷ ದಿನಕರ್ ಬಾಬು ಉಡುಪಿ ನಗರದಲ್ಲಿ ಸಿಟಿ ಬಸ್ಸಿನಲ್ಲಿ ಕಂಡಕ್ಟರ್ ಆಗಿ ರೈಟ್ ರೈಟ್ ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಶಾಸಕ ರಘುಪತಿ ಭಟ್ ನೇತೃತ್ವದ ಕಡಿಯಾಳಿ ಗಣೇಶೋತ್ಸವ ಸಮಿತಿ ಖಾಸಗಿ ಬಸ್ ಮಾಲೀಕರೊಂದಿಗೆ ಸೇರಿ ಏಳು ದಿನಗಳ ಕಾಲ ಉಚಿತ ಬಸ್ ವ್ಯವಸ್ಥೆ ಮಾಡಿದ್ದಾರೆ. ಇದಕ್ಕೆ ಬಿಜೆಪಿ ಕಾರ್ಯಕರ್ತರು, ಮುಖಂಡರು ಕಂಡಕ್ಟರ್ ಆಗಿರುತ್ತಾರೆ. ಹೀಗೆ ಕಾರ್ಯಕರ್ತರ ಸೇವೆ ನಡುವೆ ಜಿಲ್ಲಾಪಂಚಾಯತ್ ಅಧ್ಯಕ್ಷ ದಿನಕರ್ ಬಾಬು ಸಹ ಕಂಡಕ್ಟರ್ ಆಗಿ ಗಮನ ಸೆಳೆದಿದ್ದಾರೆ.
ಸಾರ್ವಜನಿಕರಿಗೆ ಸ್ಯಾನಿಟೈಸ್ ಮಾಡುವುದು, ಬಸ್ ಡ್ರೈವರಿಗೆ ರೈಟ್‍ರೈಟ್ ಹೇಳಿ ಸೂಚನೆ ನೀಡುವ ಕಾರ್ಯ ಮಾಡಿದ್ದಾರೆ. ಪಂಚಾಯತ್ ಅಧ್ಯಕ್ಷರಾಗುವ ಮೊದಲು ಸರ್ಕಾರಿ ವಾಹನಕ್ಕೆ ಚಾಲಕರಾಗಿ ಸೇವೆ ಸಲ್ಲಿಸಿದ ದಿನಕರ್ ಬಾಬು ಅಧ್ಯಕ್ಷರಾದ ಬಳಿಕವೂ ಸಾಮಾನ್ಯರಂತೆ ಓಡಾಡುತ್ತಿದ್ದಾರೆ.
ದಿನಕರ ಬಾಬು, ಕೊರೊನಾ ಸಮಯದಲ್ಲಿ ಹಲವಾರು ಸೇವೆ ಮಾಡಿದ್ದೇವೆ. ಇದು ಉಚಿತ ಬಸ್ ವ್ಯವಸ್ಥೆ. ಶಾಸಕ ರಘುಪತಿ ಭಟ್ ನೇತೃತ್ವದಲ್ಲಿ ಒಂದು ವಾರ ಫ್ರೀ ಬಸ್ ಓಡುತ್ತಿದೆ. ಪ್ರಯಾಣಿಕರಿಗೆ ಸ್ಯಾನಿಟೈಸರ್ ಕೊಡುವುದು, ಪ್ರಯಾಣಿಕರಿಗೆ ಊರುಗಳ ಮಾಹಿತಿ ಕೊಡುವುದನ್ನು ಮಾಡಿದ್ದೇನೆ. ಇದೊಂದು ಹೊಸ ಅನುಭವ. ಚಿಕ್ಕಂದಿನಲ್ಲಿ ಡ್ರೈವರ್ ಆಗಬೇಕೆಂಬ ಆಸೆ ಇತ್ತು. ಮುಂದೆ ಚಾಲಕನಾದೆ, ಈಗ ಜಿಲ್ಲಾ ಪಂಚಾಯತ್ ಅಧ್ಯಕ್ಷನಾದೆ ಎಂದು ಹೇಳಿದರು.