ಬೆಂಗಳೂರು: ಶಾಶ್ವತ ನಿವಾಸ ಪ್ರಮಾಣ ಪತ್ರ ರಾಜ್ಯ ಸರ್ಕಾರ ಯಾಕೆ ಕೊಡಬಾರದು? ಆ ರೀತಿ ನಿಯಮ ಇದ್ಯಾ ಎಂದು ಬಿಜೆಪಿ ನಾಯಕರಿಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ.
ಪಿಆರ್‌ಸಿ ಕೊಡಲು ರಾಜ್ಯ ಸರ್ಕಾರ ಮುಂದಾಗಿರೋದಕ್ಕೆ ಬಿಜೆಪಿ ವಿರೋಧ ಮಾಡುತ್ತಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ವಾಸ ಮಾಡ್ತಿರೋದಕ್ಕೆ ರಾಜ್ಯ ಸರ್ಕಾರ ಸರ್ಟಿಫಿಕೇಟ್ ಕೊಡುತ್ತಿದೆ. ರಾಜ್ಯ ಸರ್ಕಾರ ಪಿಆರ್‌ಸಿ ಕೊಡಬಾರದು ಅಂತ ಎಲ್ಲಿದೆ. ಬಂಗಾಳದಲ್ಲಿ 1 ಕೋಟಿ ಜನರಿಗೆ ಮತಪಟ್ಟಿಯಿಂದ ತೆಗೆದ್ರು. ಪಾಸ್‌ಪೋರ್ಟ್, ಆಧಾರ್‌ಕಾರ್ಡ್, ಬ್ಯಾಂಕ್ ಅಕೌಂಟ್, ಪಿಆರ್‌ಸಿ ಕೊಟ್ಟರೂ ಸಿಟಿಜನ್ ಶಿಪ್ ಪ್ರೂವ್ ಮಾಡಲ್ಲ ಅಂತೀರಾ. ಹಾಗಾದ್ರೆ ಪೌರತ್ವ ಸಾಬೀತು ಮಾಡೋಕೆ ಯಾವ ದಾಖಲಾತಿ ಬೇಕು ಅಂತ ಪ್ರಶ್ನೆ ಮಾಡಿದ್ದಾರೆ.
ಪಿಆರ್‌ಸಿ (PRC) ಸರ್ಕಾರಿ ಅಧಿಕಾರಿಗಳೇ ಕೊಡುತ್ತಾರೆ. ಕಾಂಗ್ರೆಸ್ ಅಥವಾ ಪಕ್ಷದ ಕಾರ್ಯಕರ್ತರು ಸರ್ಟಿಫಿಕೇಟ್ ಕೊಡ್ತಿದ್ರೆ ನಿಮಗೆ ಪ್ರಾಬ್ಲಂ ಇರಬೇಕು. ಸರ್ಕಾರಿ ಅಧಿಕಾರಿಗಳು ಕೊಡೋಕಾಗಲ್ಲ ಅಂದರೆ ಏನು? ಎಸ್‌ಐಆರ್ (SIR) ನಡೆಯುತ್ತಿದೆ. ಯಾರು ಅರ್ಹರಿದ್ದಾರೆ ಅವರನ್ನ ಮತ ಪಟ್ಟಿಯಲ್ಲಿ ಸೇರಿಸಬೇಕು. ಇದು ನಮ್ಮ ಆದ್ಯ ಕರ್ತವ್ಯ. ಅಕ್ರಮ ವಲಸಿಗರಿಗೆ, ಬಾಂಗ್ಲಾದೇಶದವರಿಗೆ ಕೊಡುತ್ತಿದ್ದೇವೆ ಅಂತ ಬಿಜೆಪಿ ಅವರು ಹೇಳ್ತಾರೆ. ಬಿಜೆಪಿ ಅವರಿಗೆ ಕಾಮನ್‌ಸೆನ್ಸ್ ಇದೆಯಾ? ಅಂತ ಕೇಳಿದ್ದಾರೆ.
ಸಮಾಜದಲ್ಲಿ ಆತಂಕ ಸೃಷ್ಟಿ ಮಾಡಬೇಕು ಅಂತ ಮಾತಾಡೋದು ಸರಿಯಲ್ಲ:
ಬಾಂಗ್ಲಾದೇಶದವರು ಎಲ್ಲಿಂದ ಬಂದ್ರು? ಬಂಗಾಳದಲ್ಲಿ ನಿಮ್ಮ ಆಡಳಿತ, ಅಮಿತ್ ಶಾ ನಿಮ್ಮ ಗೃಹ ಸಚಿವರು. ಯುಪಿ, ಒಡಿಸ್ಸಾ, ಬಿಹಾರ ಎಲ್ಲಾ ಕಡೆ ಬಾಂಗ್ಲಾದೇಶದವರು ಬರ್ತಿದ್ದಾರೆ. ಹೇಗೆ ಬರುತ್ತಿದ್ದಾರೆ? ಸುಮ್ಮನೆ ಏನೋ ಮಾತಾಡಬೇಕು, ಸಮಾಜದಲ್ಲಿ ಆತಂಕ ಸೃಷ್ಟಿ ಮಾಡಬೇಕು ಅಂತ ಮಾತಾಡೋದು ಸರಿಯಲ್ಲ. ಪಿಆರ್‌ಸಿ ಕೊಡ್ತಾ ಇರೋದು ಸರ್ಕಾರಿ ಅಧಿಕಾರಿಗಳು. ನಿಮಗೆ ಏನಾದ್ರು ತೊಂದರೆ ಇದ್ದರೆ ಅದನ್ನ ಬಿಜೆಪಿ ಅವರು ಪ್ರೂವ್ ಮಾಡಲಿ ಎಂದು ಸವಾಲು ಹಾಕಿದ್ದಾರೆ.
ಪಿಆರ್‌ಸಿಯಿಂದ ಎಲ್ಲಿ ಅಕ್ರಮ ಆಗಿದೆ? ಆಗೋಕೆ ಸಾಧ್ಯನಾ? ಬಿಜೆಪಿ ಅವರಿಗೆ ಯಾವುದೇ ಸುಳಿವು ಸಿಗ್ತಿಲ್ಲ. ಹೊಸ ಹೊಸ ವಿಚಾರವನ್ನು ಸೃಷ್ಟಿ ಮಾಡ್ತಾ ಇದ್ದಾರೆ. ಬಿಎಲ್‌ಓಗಳದ್ದು ಮಾಡಿದ್ರು, ಈಗ ಇದನ್ನು ಮಾಡ್ತಾ ಇದ್ದಾರೆ. ಪಿಆರ್‌ಸಿ ರಾಷ್ಟ್ರೀಯ ಭದ್ರತೆಗೆ ಧಕ್ಕೆ ಅಂತಾರೆ. ನಾವು ಜವಾಬ್ದಾರಿ ಇರುವ ರಾಜ್ಯ ಸರ್ಕಾರ. ನಾವು ರಾಷ್ಟ್ರೀಯ ಭದ್ರತೆಗೆ ಧಕ್ಕೆ ಮಾಡ್ತೀವಿ ಅಂತೀರಾ ನಾಚಿಕೆ ಆಗಲ್ವಾ ನಿಮಗೆ ಎಂದು ವಾಗ್ದಾಳಿ ನಡೆಸಿದ್ದಾರೆ.
ನಮಗೆ ಕಾನೂನು, ಸಂವಿಧಾನ ಗೊತ್ತಿಲ್ಲವಾ? ಬಿಜೆಪಿ ಅವರು ಇದೆಲ್ಲ ಮಾಡ್ತಿರೋದು ಒಂದು ರೀತಿ ಎಸ್‌ಒಪಿ. ಬಂಗಾಳದಲ್ಲಿಯೂ ಇದೆ ಮಾಡಿದ್ರು, ಸಿಇಸಿ ಮುಂದೆ ನಾಟಕ ಮಾಡಿದ್ರು. ಆಮೇಲೆ ಎಸ್‌ಐಆರ್ ಬಂತು. ಅದರಲ್ಲಿ ಎಲ್ಲರನ್ನೂ ಹೊರಗೆ ಹಾಕಿದ್ರು. ಅದೇ ಪ್ರಕ್ರಿಯೆ ನಮ್ಮ ರಾಜ್ಯದಲ್ಲಿ ಮಾಡ್ತಾ ಇದ್ದಾರೆ. ಅದಕ್ಕೆ ನಾವು ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ಕೇರಳದಲ್ಲಿ ವಾಸ ಪತ್ರ ಕೊಟ್ಟಿದ್ದರು. ನಮ್ಮ ಪ್ರಶ್ನೆಗೆ ಆಯೋಗ ಉತ್ತರ ಕೊಟ್ಟಿದ್ದರೆ ನಾವು ಇದನ್ನ ಮಾಡುತ್ತಿರಲಿಲ್ಲ. ಎಸ್‌ಐಆರ್ ಬಗ್ಗೆ ಯಾರಿಗೂ ಕ್ಲಾರಿಟಿ ಇಲ್ಲ. 2002ರಲ್ಲಿ ನೀವೆಲ್ಲ ಎಲ್ಲಿ ಇದ್ರಿ? ಬಿಜೆಪಿ ಹೇಳಿದ್ದೇ ಸರಿಯಲ್ಲ. ಬಿಜೆಪಿ ಅವರು ಹೇಳಿದ್ದು ನಾವು ಒಪ್ಪೋಕೆ ರೆಡಿ ಇಲ್ಲ ಎಂದು ಕಿಡಿಕಾರಿದ್ದಾರೆ.
ಕಾನೂನಿಗಿಂತ ಯಾರು ಮೇಲಲ್ಲ:
ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಡುವಂತೆ ಲೋಕಾಯುಕ್ತ ಕೇಳಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರ, ನೋಡೋಣ ಏನೇ ಆದರೂ ಕಾನೂನು ಪ್ರಕಾರವೇ ಆಗಬೇಕು. ಹಿಂದೆ ಕೂಡ ಐಎಂಎ ಕೇಸ್ ಹೇಗೆ ನಡೆದಿದೆ ಅಂತ ನೋಡಿದ್ದೇವೆ. ರಾಜ್ಯಪಾಲರು ಅನುಮತಿ ಕೊಡಲಿ. ಯಾರು ಕೂಡ ಕಾನೂನಿಗಿಂತ ಮೇಲಲ್ಲ. ಪ್ರಾಸಿಕ್ಯೂಷನ್‌ಗೆ ಕೇಳಿದ್ರೆ ಏನೇನಿದೆ ನೋಡೋಣ. ಮೊದಲೇ ಅಂತಿಮ ನಿರ್ಣಯಕ್ಕೆ ಬರೋದು ಬೇಡ ಎಂದು ತಿಳಿಸಿದ್ದಾರೆ.
ಸಚಿವ ಸಂಪುಟ ವಿಸ್ತರಣೆಗೆ ಆಷಾಢ ಅಡ್ಡಿ ಬರಲ್ಲ:
ಸಚಿವ ಸಂಪುಟ ವಿಸ್ತರಣೆ ಯಾವಾಗ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಶೀಘ್ರದಲ್ಲೇ ವಿಸ್ತರಣೆ ಆಗುತ್ತದೆ. ಇಂತಹ ಸಮಯದಲ್ಲಿ ಆದಷ್ಟು ಬೇಗ ಕ್ಯಾಬಿನೆಟ್ ಆಗಬೇಕು ಅಂತ ಸಿಎಂ ಮತ್ತು ಕಾಂಗ್ರೆಸ್ ಅಧ್ಯಕ್ಷರು ಹೇಳಿದ್ದಾರೆ. ಬರ, ನೆರೆ ಇದೆ ಈ ಸಮಯದಲ್ಲಿ ಫುಲ್ ಕ್ಯಾಬಿನೆಟ್ ಇದ್ದರೆ ಎಲ್ಲರಿಗೂ ಜವಾಬ್ದಾರಿ ಕೊಡಬಹುದು. ಇದೇ ವೇಳೆ ಆಷಾಢಕ್ಕೂ ಮುಂಚೆ ಆಗುತ್ತಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಅದೆಲ್ಲ ನಂಬಲ್ಲ. ಆದ್ರೆ ಅಧಿಕಾರ ತಗೋಬೇಕಾದ್ರೆ ಯಾರು ಆಷಾಢ ನೋಡ್ತಾರೆ. ಆಷಾಢ ಸಂಪುಟ ವಿಸ್ತರಣೆಗೆ ಸಂಬಂಧವಿಲ್ಲ. ನಮ್ಮ ಜವಾಬ್ದಾರಿ ಜನರನ್ನು ನೋಡಿಕೊಳ್ಳೋದು. ಆಷಾಢ, ರಾಹುಕಾಲ ಎಲ್ಲ ಇಲ್ಲ. ಯಾರಿಗೆ ಭಕ್ತಿ ಇರುತ್ತೋ ಅವರಿಗೆ ಇದೆಲ್ಲ ಇರುತ್ತದೆ. ಇದು ಆಡಳಿತಕ್ಕೆ ಎಫೆಕ್ಟ್ ಆಗಬಾರದು ಅಷ್ಟೆ ಎಂದಿದ್ದಾರೆ.
Laxmi News 24×7