ಹೈದರಾಬಾದ್: ಪೋಕ್ಸೋ ಕೇಸಲ್ಲಿ ಜಾಮೀನು ಪಡೆದಿದ್ದ ಆರೋಪಿಯೊಬ್ಬ ಹೆಂಡತಿ, ಇಬ್ಬರು ಮಕ್ಕಳು ಹಾಗೂ ಲೈಂಗಿಕ ದೌರ್ಜನ್ಯ ಆರೋಪ ಹೊರಿಸಿದ್ದ ಬಾಲಕಿ ಸೇರಿದಂತೆ 6 ಜನರನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್‌ನಲ್ಲಿ ನಡೆದಿದೆ.
ರಾಜ್‌ಕುಮಾರ್ (35) ಕೊಲೆ ಆರೋಪಿಯಾಗಿದ್ದಾನೆ. ಈತ ತನ್ನ ಪತ್ನಿ ಪಾರ್ವತಿ ಸರಿತಾ (30) ಹಾಗೂ 4, 1 ವರ್ಷದ ಇಬ್ಬರು ಗಂಡು ಮಕ್ಕಳ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ. ಬಳಿಕ ಪೋಕ್ಸೊ ಕಾಯ್ದೆಯಡಿ ದೂರು ದಾಖಲಿಸಿದ್ದ 17 ವರ್ಷದ ಬಾಲಕಿಯ ಮನೆಗೆ ತೆರಳಿ, ಅವಳನ್ನು ಕಾರಿನಲ್ಲಿ ನಿರ್ಜನ ಸ್ಥಳಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿ, ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ.
ಬಾಲಕಿಯನ್ನು ಅಪಹರಿಸುವ ಮುನ್ನ ಆಕೆಯ 45 ವರ್ಷದ ತಾಯಿ ಮತ್ತು 65 ವರ್ಷದ ಅಜ್ಜಿಯನ್ನು ಸಹ ಹತ್ಯೆ ಮಾಡಿದ್ದಾನೆ. ಘಟನೆಯ ಸಮಯದಲ್ಲಿ ಅಂಗವಿಕಲಳಾದ ಆಕೆಯ 20 ವರ್ಷದ ಸಹೋದರಿ ಕೂಡ ಮನೆಯಲ್ಲಿದ್ದಳು. ಆದರೆ ಆರೋಪಿ ಆಕೆಗೆ ಯಾವುದೇ ಹಾನಿ ಮಾಡಿಲ್ಲ.
ಈ ಕೊಲೆಗಳ ಬಳಿಕ ರಾಜ್‌ಕುಮಾರ್ ತನ್ನ ತಂದೆಗೆ ಕರೆ ಮಾಡಿ ಹತ್ಯೆಗಳ ಬಗ್ಗೆ ಮಾಹಿತಿ ನೀಡಿದ್ದಾನೆ. ಅಲ್ಲದೇ ತಾನೂ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿದ್ದ. ಬಳಿಕ ತನ್ನ ಫೋನ್ ಸ್ವಿಚ್ ಆಫ್ ಮಾಡಿದ್ದು, ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನಾ? ಅಥವಾ ಇಲ್ಲವೇ ಎಂಬುದು ಇನ್ನೂ ದೃಢಪಟ್ಟಿಲ್ಲ. ಆತ ಇರುವ ಬಗ್ಗೆ ಸುಳಿವು ಸಿಕ್ಕಿದೆ, ಶೀಘ್ರದಲ್ಲೇ ಅವನನ್ನು ಬಂಧಿಸುತ್ತೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತರುಣ್ ಜೋಶಿ ಮಾಹಿತಿ ನೀಡಿದ್ದಾರೆ.
2018 ರಲ್ಲಿ ಪ್ರೇಮ ವಿವಾಹ
ರಾಜ್‌ಕುಮಾರ್ ಮತ್ತು ಪಾರ್ವತಿ 2018 ರಲ್ಲಿ ಪ್ರೇಮ ವಿವಾಹವಾಗಿದ್ದರು. ದಂಪತಿ ಆರಂಭದಲ್ಲಿ ಗ್ರಾಮದ ಹೊರಗೆ ವಾಸಿಸುತ್ತಿದ್ದರು. ನಂತರ ಶಾಬಾದ್ ಮತ್ತು ದೇವಲಗುಡದಲ್ಲಿ ಹೊಂದಿದ್ದ ಮನೆಗಳಲ್ಲಿ ನೆಲೆಸಿದ್ದರು.
ಬಾಲಕಿಗೆ ಲೈಂಗಿಕ ದೌರ್ಜನ್ಯ
ಈ ವರ್ಷ ಮೇ ತಿಂಗಳಲ್ಲಿ ಅಪ್ರಾಪ್ತ ಬಾಲಕಿಯನ್ನು ಹಿಂಬಾಲಿಸಿ, ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ರಾಜ್‌ಕುಮಾರ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಾದ ನಂತರ ಆರೋಪಿ ಪರಾರಿಯಾಗಿದ್ದ.
7 ವರ್ಷಗಳಿಗಿಂತ ಕಡಿಮೆ ಅವಧಿಯ ಶಿಕ್ಷೆಯ ಸೆಕ್ಷನ್‌ಗಳಲ್ಲಿ ಪ್ರಕರಣ ದಾಖಲಾಗಿದ್ದರಿಂದ, ಆರೋಪಿ 20,000 ರೂ. ವೈಯಕ್ತಿಕ ಬಾಂಡ್ ಮೇಲೆ ನಿರೀಕ್ಷಣಾ ಜಾಮೀನು ಪಡೆದಿದ್ದ.
ಆರೋಪಿಗೆ ಮಾನಸಿಕ ಸಮಸ್ಯೆ
ರಾಜ್‌ಕುಮಾರ್ ವರ್ತನೆಯಲ್ಲಿ ಸಮಸ್ಯೆಗಳಿದ್ದವು. ಕುಟುಂಬದ ಸದಸ್ಯರು ಆತನ ಮಾನಸಿಕ ಸ್ಥಿತಿ ಸ್ಥಿರವಾಗಿಲ್ಲ ಎಂದು ಹೇಳಿದ್ದರು. ಆತನಿಗೆ ಜೂಜಾಟದ ಅಭ್ಯಾಸವೂ ಇತ್ತು. ಅಲ್ಲದೇ ಸಾಲದ ಸುಳಿಯಲ್ಲಿ ಸಿಲುಕಿದ್ದ. ಆತನನ್ನು ಹಲವು ಬಾರಿ ಕೌನ್ಸೆಲಿಂಗ್‌ಗಾಗಿ ಕರೆಯಾಲಾಗಿತ್ತು. ಆದರೆ ಆತ ಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಿದ್ರೆಯಲ್ಲಿದ್ದ ಮಕ್ಕಳ ಹತ್ಯೆ
ಪಾರ್ವತಿಯ ಶವ ಪತ್ತೆಯಾದ ಕೋಣೆಯಲ್ಲಿ ಹಲ್ಲೆ ನಡೆಸಿ ಹತ್ಯೆ ಮಾಡಿದ ಕುರುಹುಗಳು ಸಿಕ್ಕಿವೆ. ಆದರೆ ಮಕ್ಕಳನ್ನು ನಿದ್ರೆಯಲ್ಲಿದ್ದಾಗ ಕೊಲೆ ಮಾಡಿದಂತೆ ಕಾಣಿಸುತ್ತದೆ ಎಂದು ಸಂಬಂಧಿಕರು ಸಂಶಯ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಮನೆ ಬಾಗಿಲುಗಳನ್ನು ಒಳಗಿನಿಂದ ಮುಚ್ಚಲಾಗಿತ್ತು. ಫ್ಯಾನ್, ಎಸಿ ಮತ್ತು ಕೂಲರ್ ಎಲ್ಲಾ ಆನ್ ಆಗಿದ್ದವು ಎಂದು ಮಾಹಿತಿ ನೀಡಿದ್ದಾರೆ.
ಕೌಟುಂಬಿಕವಾಗಿ ಯಾವ ವಿವಾದಗಳಿರಲಿಲ್ಲ. ಪಾರ್ವತಿ ಹಿಂದಿನ ದಿನ ಸಂಜೆ ಸಂಬಂಧಿಕರೊಂದಿಗೆ ಸಾಮಾನ್ಯವಾಗಿ ಮಾತನಾಡುತ್ತಿದ್ದಳು ಎಂದು ಕುಟುಂಬಸ್ಥರು ಹೇಳಿಕೊಂಡಿದ್ದಾರೆ. ಇನ್ನೂ, ಸ್ಥಳಕ್ಕೆ ಪೊಲೀಸರು ಹಾಗೂ ಎಫ್‌ಎಸ್‌ಎಲ್ ಸಿಬ್ಬಂದಿ ತೆರಳಿ ಮಾಹಿತಿ ಕಲೆ ಹಾಕಿದ್ದಾರೆ.
Laxmi News 24×7