ಸಿ. ಎಂ. ಬಿಎಸ್ವೈ ನೇತೃತ್ವದಲ್ಲಿ ವಾಲ್ಮೀಕಿ ಸಮುದಾಯದ ಮೀಸಲಾತಿ ಹೆಚ್ಚಳ ಕುರಿತು ಸಭೆ/ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಪುರಿ ಸ್ವಾಮೀಜಿ, ಸಚಿವ ಶ್ರೀರಾಮುಲು, ಶಾಸಕರಾದ ರಮೇಶ್ ಜಾರಕಿಹೊಳಿ, ಸತೀಶ್ ಜಾರಕಿಹೊಳಿ,ಸೇರಿದಂತೆ ಇತರರು ಭಾಗಿ/ಮೀಸಲಾತಿ ಕುರಿತು ಸಿಎಂ ಸ್ಪಂದಿಸಿದ್ದಾರೆ ಎಂದ ಶ್ರೀಗಳು
ಇಂದು ವಾಲ್ಮೀಕಿ ಸಮುದಾಯಕ್ಕೆ ಶೇ.7.5ರಷ್ಟು ಮೀಸಲಾತಿ ನೀಡುವಂತೆ ಆಗ್ರಹಿಸಿ ವಾಲ್ಮೀಕಿ ಸಮುದಾಯದ ಮಠಾಧೀಶರು, ಜನಪ್ರತಿನಿಧಿಗಳು ಹಾಗೂ ಮುಖಂಡರು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪರಿಗೆ ಮನವಿ ಸಲ್ಲಿಸಿದರು. ಸಿಎಂ ಗೃಹ ಕಚೇರಿಯಲ್ಲಿ ನಡೆದ ಸಭೆಯಲ್ಲಿ ರಾಜನಹಳ್ಳಿ ವಾಲ್ಮೀಕಿ ಗುರು ಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಸಚಿವ ಶ್ರೀರಾಮುಲು, ಶಾಸಕರಾದ ರಮೇಶ ಜಾರಕಿಹೊಳಿ, ಸತೀಶ ಜಾರಕಿಹೊಳಿ, ಜೆ.ಎನ್ ಗಣೇಶ, ರಾಜುಗೌಡ, ಹಾಗೂ ಸಂಸದ ದೇವೇಂದ್ರಪ್ಪ ಸೇರಿದಂತೆ ಇನ್ನಿತರರು ಭಾಗಿಯಾಗಿದ್ದರು.
ಆರ್ಥಿಕವಾಗಿ ಹಿಂದುಳಿದ ವಾಲ್ಮೀಕಿ ಸಮುದಾಯಕ್ಕೆ ಶೇ7.5 ಮೀಸಲಾತಿ ಕಲ್ಪಿಸುವಂತೆ ಪ್ರಸನ್ನಾನಂದಪುರಿ ಸ್ವಾಮೀಜಿಗಳು ಸಿಎಂ ಯಡಿಯೂರಪ್ಪ ಅವರಿಗೆ ಸಭೆಯಲ್ಲಿ ಪತ್ರದ ಮೂಲಕ ಮನವಿ ಸಲ್ಲಿಸಿದರು. ಸಚಿವರು, ಶಾಸಕರು ಕೂಡ ಸಮುದಾಯಕ್ಕೆ ಮೀಸಲಾತಿ ನೀಡುವಂತೆ ಎಲ್ಲರೂ ಒಗ್ಗಟ್ಟಾಗಿ ಮನವಿ ಮಾಡಿಕೊಂಡರು.ಅಲ್ಲದೆ ವಾಲ್ಮೀಕಿ ಸಮಾಜದ ಮೀಸಲಾತಿಗೆ ಸಂಬಂಧಿಸಿದಂತೆ ರಚಿಸಲಾಗಿರೋ ನ್ಯಾ. ನಾಗಮೋಹನ್ ದಾಸ್ ಕಮಿಟಿಗೆ, ಆದಷ್ಟು ಬೇಗ ವರದಿ ನೀಡುವಂತೆ ನಿರ್ದೇಶನ ನೀಡಬೇಕೆಂದು ಎಲ್ಲಾ ಸ್ವಾಮೀಜಿಯವರು ಹಾಗೂ ಮುಖಂಡರು ಒತ್ತಾಯಿಸಿದರು.ಹಾಗೂ ನಮ್ಮ ಸಮುದಾಯಕ್ಕೆ ಒಂದು ಡಿಸಿಎಂ ಹುದ್ದೆ ಕೊಡಬೇಕು. ಜೊತೆಗೆ ವಾಲ್ಮೀಕಿ ಸಮಾಜಕ್ಕೆ ಪ್ರತ್ಯೇಕ ಸಚಿವಾಲಯ ಸ್ಥಾಪನೆ ಮಾಡಬೇಕು. ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಮಹರ್ಷಿ ವಾಲ್ಮೀಕಿಯ ಹೆಸರಿಡಬೇಕು ಹಾಗೂ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡುವ ಮೊದಲು ಮಹರ್ಷಿ ವಾಲ್ಮೀಕಿಯ ಮಂದಿರ ನಿರ್ಮಾಮಿಸಬೇಕು ಎಂದು ಸಭೆಯಲ್ಲಿ ಬೇಡಿಕೆಗಳನ್ನು ಮುಖಂಡರು ಪ್ರಸ್ತಾಪಿಸಿದರು.
ಸಭೆ ಬಳಿಕ ಮಾತನಾಡಿದ ಪ್ರಸನ್ನಾನಂದ ಪುರಿ ಸ್ವಾಮೀಜಿಗಳು ವಾಲ್ಮೀಕಿ ಸಮುದಾಯದ ಮೀಸಲಾತಿ ಹೆಚ್ಚಳ ಕುರಿತು ಆದಷ್ಟು ಬೇಗ ವರದಿ ಕೊಡಲು, ನ್ಯಾ. ನಾಗಮೋಹನ್ ದಾಸ್ ಆಯೋಗಕ್ಕೆ ಸೂಚಿಸುತ್ತೇನೆಂದು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಭರವಸೆ ನೀಡಿದ್ದಾರೆ. ಸರ್ಕಾರ ಈ ವಿಷಯದಲ್ಲಿ ಯಾವುದೇ ವಿಳಂಬ ನೀತಿ ಅನುಸರಿಸುವುದಿಲ್ಲ. ವರದಿ ಬಂದ ಕೂಡಲೇ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆಂದರು.