; ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದೆ ಎಂಬುದು ಕೊಂಚ ನಿಟ್ಟುಸಿರು ಬಿಡುವ ವಿಚಾರ. ಜಿಲ್ಲೆಯ ಒಂಬತ್ತನೇ ಕೊರೊನಾ ಸೋಂಕಿತ ಸಂಪೂರ್ಣ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಇಂದು ರೋಗಿ ನಂಬರ್ 98 ಕಾರವಾರದ ನೌಕಾ ನೆಲೆಯ ಪತಾಂಜಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾನೆ. ಭಟ್ಕಳದ 26 ವರ್ಷದ ಯುವಕ ದುಬೈನಿಂದ ಮಾರ್ಚ್ 20 ರಂದು ಭಟ್ಕಳಕ್ಕೆ ಆಗಮಿಸಿದ್ದನು. ದುಬೈನಿಂದ ಗೋವಾ ವಿಮಾನ ನಿಲ್ದಾಣಕ್ಕೆ ಆಗಮಿಸಿ ಕಾರವಾರದ ಮೂಲಕ ಭಟ್ಕಳಕ್ಕೆ ತೆರಳಿದ್ದ ಯುವಕನಲ್ಲಿ ಸೋಂಕು ಪತ್ತೆಯಾಗಿತ್ತು. ಯುವಕನಲ್ಲಿ ಸೋಂಕು ಪತ್ತೆಯಾಗುವ ಮುನ್ನ ಮೂರು ದಿನಗಳ ಹಿಂದೆ ಆತನ ಸಹೋದರನಲ್ಲೂ ಸೋಂಕು ಪತ್ತೆಯಾಗಿತ್ತು. ಯುವಕನನ್ನು ಮಾರ್ಚ್ 31 ರಂದು ಕಾರವಾರದ ನೌಕಾ ನೆಲೆಯ ಪತಂಜಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
19 ದಿನಗಳ ಚಿಕಿತ್ಸೆ ಬಳಿಕ ಕೊರೊನಾ ವೈರಸ್‍ನಿಂದ ಈತ ಸಂಪೂರ್ಣ ಗುಣಮುಖನಾಗಿದ್ದು, ಇಂದು ಪತಂಜಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಮೂಲಕ ಒಟ್ಟು 9 ಜನ ಕೊರೊನಾ ಸೋಂಕಿತರು ಜಿಲ್ಲೆಯಲ್ಲಿ ಡಿಸ್ಚಾಜ್ ಆಗಿದ್ದಾರೆ.
ಇನ್ನು ಉಡುಪಿಯ ಮಣಿಪಾಲ್‍ನಲ್ಲಿ ಇರುವ ಗರ್ಭಿಣಿ ಹಾಗೂ ಪತಂಜಲಿ ಆಸ್ಪತ್ರೆಯಲ್ಲಿರುವ ಆಕೆಯ ಪತಿಗೆ ಚಿಕಿತ್ಸೆ ಮುಂದುವರಿದಿದೆ. 11 ಜನ ಸೋಂಕಿತರಲ್ಲಿ ಸದ್ಯ ಕೊರೊನಾ ಸೋಂಕಿತರು ಇಬ್ಬರು ಮಾತ್ರ ಇದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಇಳಿಮುಖವಾಗಿದೆ