ತಿರುವನಂತಪುರಂ: ತನ್ನ ಕಣ್ಸನ್ನೆ ಮೂಲಕವೇ ಇಡೀ ದೇಶದಲ್ಲಿ ತಲ್ಲಣ ಸೃಷ್ಟಿಸಿ, ಕಣ್ಸನ್ನೆ ಚೆಲುವೆ ಎಂದೇ ಖ್ಯಾತಿ ಪಡೆದಿದ್ದ ಪ್ರಿಯಾ ಪ್ರಕಾಶ್ ವಾರಿಯರ್ ಸಾಮಾಜಿಕ ಜಾಲತಾಣ ಇನ್‍ಸ್ಟಾಗ್ರಾಮ್‍ನಿಂದ ಇದ್ದಕ್ಕಿದ್ದಂತೆ ಕಣ್ಮರೆಯಾಗಿದ್ದಾರೆ.
ಹೌದು ಕಣ್ಸನ್ನೆ ಮೂಲಕವೇ ಬಾಲಿವುಡ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ಆಫರ್ ಗಿಟ್ಟಿಸಿಕೊಳ್ಳುವ ಮೂಲಕ ಬಹುಬೇಡಿಕೆ ನಟಿಯಾಗಿರುವ ಪ್ರಿಯಾ ಇದ್ದಕ್ಕಿದ್ದಂತೆ ಸಾಮಾಜಿಕ ಜಾಲತಾಣಗಳಿಂದ ಅಂತರ ಕಾಯ್ದುಕೊಳ್ಳಲು ಮುಂದಾಗಿದ್ದು, ಇದರ ಭಾಗವಾಗಿ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯನ್ನು ಡಿಲೀಟ್ ಮಾಡಿದ್ದಾರೆ. ಇದನ್ನು ಕಂಡ ಅವರ ಅಭಿಮಾನಿಗಳಿಗೆ ತೀವ್ರ ಬೇಸರವಾಗಿದೆ. ಇದ್ದಕ್ಕಿದ್ದಂತೆ ಈ ನಿರ್ಧಾರವನ್ನೇಕೆ ಮಾಡಿದರು ಎಂದು ಯೋಚಿಸುತ್ತಿದ್ದಾರೆ.
ಪ್ರಿಯಾ ವಾರಿಯರ್ ‘ಒರು ಅಡಾರ್ ಲವ್’ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ನಂತರ ಸಾಕಷ್ಟು ಸಿನಿಮಾಗಳ ಆಫರ್ ಬರಲಾರಂಭಿಸಿದವು. ಸದ್ಯ ಬಹುಬೇಡಿಕೆ ನಟಿಯಾಗಿದ್ದು, ಕನ್ನಡದ ಎರಡು ಸಿನಿಮಾ ಸೇರಿದಂತೆ ಹಲವು ಸಿನಿಮಾಗಳನ್ನು ಇನ್ನೂ ಕೈಯ್ಯಲ್ಲಿಟ್ಟುಕೊಂಡಿದ್ದಾರೆ. ಹೀಗೆ ಜನಪ್ರಿಯತೆ ಗಳಿಸುತ್ತಿರುವಾಗಲೇ ಇದ್ದಕ್ಕಿದ್ದಂತೆ ಇನ್‍ಸ್ಟಾಗ್ರಾಮ್‍ನಿಂದ ದೂರವಾಗಿದ್ದಾರೆ.
ಇನ್‍ಸ್ಟಾಗ್ರಾಮ್‍ನಲ್ಲಿ ಪ್ರಿಯಾ ವಾರಿಯರ್ 7.2 ಮಿಲಿಯನ್ ಫಾಲೋವರ್ಸ್ ಹೊಂದಿದ್ದು, ಮಾತ್ರವಲ್ಲದೆ ಒಂದೇ ದಿನ 6 ಲಕ್ಷಕ್ಕೂ ಅಧಿಕ ಹಿಂಬಾಲಕರನ್ನು ಹೊಂದುವ ಮೂಲಕ ದಾಖಲೆ ನಿರ್ಮಿಸಿದ್ದರು. ಆದರೂ ಸಹ ಇನ್‍ಸ್ಟಾದಿಂದ ದೂರ ಉಳಿದಿದ್ದಾರೆ. ತಮ್ಮ ಸಿನಿಮಾಗಳ ಕುರಿತು ಆಗಾಗ ಅಪ್‍ಡೇಟ್ ನೀಡುತ್ತಿದ್ದ ಪ್ರಿಯಾ ವಾರಿಯರ್ ಇದೀಗ ಇದ್ದಕ್ಕಿದ್ದಂತೆ ಮಾಯವಾಗಿರುವುದು ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ. ಫೇಸ್ಬುಕ್ ಖಾತೆಯನ್ನು ಉಳಿಸಿಕೊಂಡಿದ್ದು, ಇದರಲ್ಲಿ ತಮ್ಮ ಸಿನಿಮಾಗಳ ಕುರಿತು ಅಪ್‍ಡೇಟ್ ನೀಡುತ್ತಿದ್ದಾರೆ.
ಇನ್‍ಸ್ಟಾ ಖಾತೆ ಡಿಲೀಟ್ ಮಾಡಲು ಕಾರಣವೇನು ಗೊತ್ತಾ?
ತಮ್ಮ ಜನಪ್ರಿಯತೆಯಿಂದಾಗಿಯೇ 7 ಲಕ್ಷಕ್ಕೂ ಅಧಿಕ ಫಾಲೋವರ್ಸ್‍ಗಳನ್ನು ಹೊಂದಿದ್ದ ಪ್ರಿಯಾ ವಾರಿಯರ್ ಶನಿವಾರ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯನ್ನು ಡಿಲೀಟ್ ಮಾಡಿದ್ದಾರೆ. ಅಶ್ಲೀಲ ಕಮೆಂಟ್‍ಗಳು, ನಿಂದನೆ ಹಾಗೂ ವಿಪರೀತ ಟ್ರೋಲ್‍ಗೆ ಒಳಗಾಗಿದ್ದರಿಂದ ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ. ಆದರೆ ಇದರಿಂದ ಅಭಿಮಾನಿಗಳಿಗೆ ಬೇಸರವಾಗಿದ್ದು, ಮತ್ತೆ ಇನ್‍ಸ್ಟಾಗೆ ಮರಳಲಿ ಎಂದು ಕೇಳಿಕೊಳ್ಳುತ್ತಿದ್ದಾರೆ.
ಪ್ರಿಯಾ ವಾರಿಯರ್ ಸದ್ಯ ನಿತಿನ್ ಅಭಿನಯದ ‘ಚೆಕ್’ ತೆಲುಗು ಚಿತ್ರದಲ್ಲಿ ಬ್ಯುಸಿಯಾಗಿದ್ದು, ಲಾಕ್‍ಡೌನ್ ಹಿನ್ನೆಲೆ ಚಿತ್ರೀಕರಣ ಸ್ಥಗಿತವಾಗಿದೆ. ಹೀಗಾಗಿ ಮನೆಯಲ್ಲೇ ಕಾಲ ಕಳೆಯುತ್ತಿದ್ದಾರೆ.