ಮಂಗಳೂರು: ಹೊಸದಾಗಿ ಮಂಗಳೂರಿನಲ್ಲಿ ದೃಢಪಟ್ಟಿರುವ ರೋಗಿ-1094ನ ಕೊರೊನಾ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ ಹಾಗೂ ಈತನ ಟ್ರಾವಲ್ ಹಿಸ್ಟರಿ ಭಯಾನಕವಾಗಿದೆ.
ಮಂಗಳೂರಿನ ಹೊರವಲಯದ ಜೆಪ್ಪುಪಟ್ನದ 31 ವರ್ಷದ ಸೋಂಕಿತ ಕಳೆದು 10 ದಿನಗಳ ಹಿಂದೆ ದೆಹಲಿಯಿಂದ ಮಂಗಳೂರಿಗೆ ಬಂದಿದ್ದಾನೆ. ಲಾಕ್‍ಡೌನ್ ಇದ್ದರೂ ಕಾಲ್ನಡಿಗೆಯಲ್ಲಿ ದೆಹಲಿಯಿಂದ ಹೊರಟು, ಅಲ್ಲಲ್ಲಿ ಸಿಕ್ಕ-ಸಿಕ್ಕ ವಾಹನಗಳಿಂದ ಡ್ರಾಪ್ ಪಡೆದು, ಚೆಕ್‍ಪೋಸ್ಟ್ ಗಳಲ್ಲಿ ವಂಚಿಸಿ ಮನೆ ತಲುಪಿದ್ದಾನೆ.
ದೆಹಲಿಯಿಂದ ಮನೆಗೆ ಬಂದ ಮಗನನ್ನು ತಂದೆ-ತಾಯಿ ಮನೆಗೆ ಸೇರಿಸಿಲ್ಲ. ಮೊದಲು ಹೋಗಿ ಕೋವಿಡ್ ಟೆಸ್ಟ್ ಮಾಡಿಸಿಕೊಂಡು ಬಾ ಅಂತ ಮನೆಯಿಂದ ಹೊರಗಿಟ್ಟಿದ್ದರು. ಹೀಗಾಗಿ ಕಳೆದ 10 ದಿನಗಳಿಂದ ಏಕಾಂಗಿಯಾಗಿ ಅಜ್ಜಿ ಮನೆಯಲ್ಲಿದ್ದ ಸೋಂಕಿತ, ಬಳಿಕ ಮನೆಯವರ ಒತ್ತಾಯಕ್ಕೆ ಮಣಿದು ಖಾಸಗಿ ಆಸ್ಪತ್ರೆಯಲ್ಲಿ ಕೊರೊನಾ ಪರೀಕ್ಷೆ ಮಾಡಿಸಿದ್ದಾನೆ. ಆದರೆ ನಿನ್ನೆ ಬಂದ ವರದಿಯಲ್ಲಿ ಯುವಕನಿಗೆ ಕೊರೊನಾ ಪಾಸಿಟಿವ್ ಬಂದಿದೆ.
ಬಂಟ್ವಾಳ ಸೇರಿ ಜಿಲ್ಲೆಯ ಹಲವು ಕಡೆ ಓಡಾಡಿರುವ ಸೋಂಕಿತ, 10 ದಿನ ಎಲ್ಲೆಲ್ಲಿ ಓಡಾಡಿದ್ದಾನೆ ಎಂದು ಜಿಲ್ಲಾಡಳಿತ ತಲೆಕೆಡಿಸಿಕೊಂಡಿದೆ. ಜೊತೆಗೆ ಸೋಂಕಿತನ ಈ ಕೃತ್ಯದಿಂದ ಜಿಲ್ಲೆಯ ವಿವಿಧ ಕಡೆ ಆತಂಕದ ವಾತಾವರಣ ಸೃಷ್ಟಿಯಾಗಿದೆ.