Breaking News

ಗಡಿನಾಡಿನಲ್ಲಿ ಕನ್ನಡದ ಕಂಪು: ‘ಜೊಲ್ಲೆ ಧ್ವನಿ’ ಎಫ್‌ಎಂಗೆ ಕ್ಷಣಗಣನೆ

Spread the love

ಗಡಿನಾಡು ಚಿಕ್ಕೋಡಿ ಭಾಗದಲ್ಲಿ ಕನ್ನಡ ಭಾಷೆ, ಸಂಸ್ಕೃತಿ ಹಾಗೂ ಸ್ಥಳೀಯ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ಉದ್ದೇಶದಿಂದ ಜೊಲ್ಲೆ ಎಜುಕೇಶನ್ ಸೊಸೈಟಿ ವತಿಯಿಂದ ‘ಜೊಲ್ಲೆ ಧ್ವನಿ’ 88.4 ಎಫ್‌ಎಂ ಸಮುದಾಯ ರೇಡಿಯೋ ಆರಂಭಿಸಲಾಗುತ್ತಿದೆ ಎಂದು ಜೊಲ್ಲೆ ಗ್ರೂಪ್ ಉಪಾಧ್ಯಕ್ಷ ಬಸವಪಸಾದ ಜೊಲ್ಲೆ ತಿಳಿಸಿದರು.

ತಾಲೂಕಿನ ಯಕ್ಸಂಬಾ ಪಟ್ಟಣದ ಶ್ರೀ ಬೀರೇಶ್ವರ ಸೊಸಾಯಿಟಿಯ ಸಭಾಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು. ಮಾಜಿ ಸಚಿವೆ ಶಶಿಕಲಾ ಜೊಲ್ಲೆ ಅವರ ನ. 20ರಂದು  ಜನ್ಮದಿನದ ಅಂಗವಾಗಿ ಪ್ರತಿವರ್ಷ ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ಅದರಂತೆ ಈ ವರ್ಷ ವಿನೂತನ ಯೋಜನೆಯಾಗಿ ಸಮುದಾಯ ರೇಡಿಯೋ ಆರಂಭಿಸಲು ನಿರ್ಧರಿಸಲಾಗಿದೆ. ನ. 23ರಂದು ಸಂಜೆ 5 ಗಂಟೆಗೆ ರೇಡಿಯೋ ಸ್ಟುಡಿಯೋ ಉದ್ಘಾಟನೆ ಹಾಗೂ ಅಧಿಕೃತ ಪ್ರಸಾರಕ್ಕೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.

ಈ ಭಾಗದ ಜನರು ಬಹುಕಾಲದಿಂದ ಮರಾಠಿ ಎಫ್‌ಎಂ ವಾಹಿನಿಗಳನ್ನು ಕೇಳುತ್ತಿದ್ದಾರೆ. ಗಡಿಭಾಗದಲ್ಲಿ ಕನ್ನಡದ ಸ್ವಂತ ಎಫ್‌ಎಂ ವಾಹಿನಿ ಇರಬೇಕು ಎಂಬ ಆಶಯದಿಂದ ‘ಜೊಲ್ಲೆ ಧ್ವನಿ’ ಆರಂಭಿಸಲಾಗುತ್ತಿದೆ. 88.4 ಮೆಗಾಹರ್ಟ್ಜ್ ತರಂಗಾಂತರದ ಈ ರೇಡಿಯೋಗೆ ‘ಗಡಿನಾಡಿನ ಧ್ವನಿ’ ಎಂಬ ಘೋಷವಾಕ್ಯ ನೀಡಲಾಗಿದೆ.

ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷರು ಹಾಗೂ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಹಾಗೂ ಶಶಿಕಲಾ ಜೊಲ್ಲೆ ಅವರ ಮಾರ್ಗದರ್ಶನದಲ್ಲಿ ಸುಮಾರು ಆರು ತಿಂಗಳಿನಿಂದ ಯೋಜನೆ ರೂಪಿಸಲಾಗಿದ್ದು, ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಅಗತ್ಯ ಪರವಾನಗಿ ಹಾಗೂ ಅನುಮತಿಗಳನ್ನು ಪಡೆದು ಪ್ರಸಾರಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಮೂರು ವರ್ಗಗಳಿಗೆ ವಿಶೇಷ ಕಾರ್ಯಕ್ರಮ:

ಆರಂಭದಲ್ಲಿ ರೈತರು, ಮಹಿಳೆಯರು ಹಾಗೂ ಯುವಜನರನ್ನು ಕೇಂದ್ರವಾಗಿಟ್ಟುಕೊಂಡು ವಿಶೇಷ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಾಗುವುದು. ರೈತರಿಗೆ ಕೃಷಿ ತಜ್ಞರ ಸಂದರ್ಶನ, ಕೃಷಿ ತಂತ್ರಜ್ಞಾನ ಮತ್ತು ಬೆಳೆ ನಿರ್ವಹಣೆ ಕುರಿತು ಮಾಹಿತಿ ನೀಡಲಾಗುವುದು. ಗೃಹಿಣಿಯರು ಹಾಗೂ ಮಹಿಳೆಯರಿಗೆ ಆರೋಗ್ಯ, ಅಡುಗೆ ಸೇರಿದಂತೆ ವಿವಿಧ ವಿಷಯಗಳ ಕುರಿತು ತಜ್ಞರೊಂದಿಗೆ ಸಂವಾದ ನಡೆಸಲಾಗುವುದು. ಯುವಕರಿಗೆ ಉದ್ಯಮಶೀಲತೆ, ಯುವ ಸಬಲೀಕರಣ ಹಾಗೂ ಭಾರತೀಯ ಸಂಸ್ಕೃತಿಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ.

ದಿನದ 24 ಗಂಟೆಯೂ ರೇಡಿಯೋ ಪ್ರಸಾರ ಇರಲಿದ್ದು, ಪ್ರತಿದಿನ ಒಂದು ವಿಶೇಷ ಸಂದರ್ಶನದ ಜೊತೆಗೆ ಸಂಗೀತ ಹಾಗೂ ವೈವಿಧ್ಯಮಯ ಕಾರ್ಯಕ್ರಮಗಳು ಪ್ರಸಾರವಾಗಲಿವೆ.

ಶ್ರೀಹರ್ಷ ತಂಡದಿಂದ ಭಜನ ಭಾರತ:

ರೇಡಿಯೋ ಉದ್ಘಾಟನೆಯ ಅಂಗವಾಗಿ ನ. 23ರಂದು ಸಂಜೆ ಖ್ಯಾತ ಗಾಯಕ ಶ್ರೀಹರ್ಷ ಹಾಗೂ ಅವರ 14 ಕಲಾವಿದರ ತಂಡದಿಂದ ‘ಭಜನ ಭಾರತ’ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ. ಭಾರತೀಯ ಭಜನೆಗಳ ಆಧಾರಿತ ಈ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ ಜನರಿಗೆ ಸಂಗೀತದ ರಸದೌತಣ ನೀಡಲಿದೆ.

ಸಂಜೆ 5 ಗಂಟೆಗೆ ರೇಡಿಯೋ ಸ್ಟುಡಿಯೋ ಉದ್ಘಾಟನೆ ಹಾಗೂ ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಬಸವಪ್ರಸಾದ ಜೊಲ್ಲೆ ತಿಳಿಸಿದರು.

ಈ ಸಂದರ್ಭದಲ್ಲಿ ಜೊಲ್ಲೆ ಗ್ರೂಪ್ ಪ್ರೇರಣಾಶಕ್ತಿ ಜ್ಯೋತಿಪ್ರಸಾದ ಜೊಲ್ಲೆ. ಶ್ರೀ ಬೀರೇಶ್ವರ ಸೊಸಾಯಿಟಿ ಪ್ರಧಾನ ವ್ಯವಸ್ಥಾಪಕ ಬಿ.ಎ.ಗುರವ. ಸಂತೋಷ ಪಾಟೀಲ.ಎಂ.ಎಂ.ಪಾಟೀಲ ಮುಂತಾದವರು ಇದ್ದರು.


Spread the love

About Laxminews 24x7

Check Also

ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ನಿಪ್ಪಾಣಿಯ ಅರ್ಹ ಫಲಾನುಭವಿಗಳಿಗೆ ನಾಳೆ ಲಕ್ಕಿ ಡ್ರಾ ಮೂಲಕ 800 ಮನೆ ಹಸ್ತಾಂತರ: ಶಾಸಕಿ ಶಶಿಕಲಾ ಜೊಲ್ಲೆ

Spread the loveಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ನಿಪ್ಪಾಣಿ-ಪಟ್ಟಣಕುಡಿ ಪ್ರದೇಶದಲ್ಲಿ ‘ಜಿ+2’ (G+2) ಮಾದರಿಯಲ್ಲಿ ನಿರ್ಮಿಸಲಾಗುತ್ತಿರುವ ವಸತಿ ಯೋಜನೆಯ ಮನೆಗಳನ್ನು ಶುಕ್ರವಾರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ