ಬೆಂಗಳೂರು: ಖಾಸಗಿ ಶಾಲೆಯಲ್ಲಿ ಏಳನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ, ವಿದ್ಯಾರ್ಥಿ ಪೋಷಕರು ನೀಡಿದ ದೂರಿನ ಮೇರೆಗೆ ಪೊಲೀಸರು ನಡೆಸಿದ ತನಿಖೆ ವೇಳೆ ಶಾಲೆಯ ಪ್ರಾಂಶುಪಾಲರು ಹಾಗೂ ಶಿಕ್ಷಕರ ಹಲ್ಲೆ ನಡೆಸಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ.
ವಿದ್ಯಾರ್ಥಿ ತಂದೆ, ಚಿಕ್ಕಬಸ್ತಿಯ ರಾಮಸಂದ್ರ ನಿವಾಸಿ ಮಹೇಶ್ ಕುಮಾರ್ ಎಂಬುವರು ನೀಡಿದ ದೂರಿನ ಮೇರೆಗೆ ಜ್ಞಾನಭಾರತಿ ಠಾಣೆ ಪೊಲೀಸರು ಮರಿಯಪ್ಪನಪಾಳ್ಯದಲ್ಲಿನ ಸೇಂಟ್ ಫಿಲೋಮಿನ ಶಾಲೆ ಆಡಳಿತ ಮಂಡಳಿ ಸಂಸ್ಥಾಪಕ ಕಾರ್ಯದರ್ಶಿ ರಂಗಸ್ವಾಮಿ, ಪ್ರಾಂಶುಪಾಲ ಹಾಗೂ ಮೂವರು ಶಿಕ್ಷಕರ ವಿರುದ್ಧ ಬಾಲ ನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ) ಕಾಯ್ದೆ ಹಾಗೂ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಸೇಂಟ್ ಫಿಲೋಮಿನ ಶಾಲೆಯಲ್ಲಿ, ಆರ್‌ಟಿಇ ಅಡಿ ನನ್ನ ಪುತ್ರ ಏಳನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಆಡಳಿತ ಮಂಡಳಿಯ ಸಂಸ್ಥಾಪಕ ಕಾರ್ಯದರ್ಶಿ ರಂಗಸ್ವಾಮಿ, ಪ್ರಾಂಶುಪಾಲರು ಹಾಗೂ ಮೂವರು ಶಿಕ್ಷಕರು ಉದ್ದೇಶಪೂರ್ವಕವಾಗಿ ಮಗನ ಮೇಲೆ ಹಲ್ಲೆ ನಡೆಸಿದ್ದಾರೆ. ಪುತ್ರನ ದೇಹದ ವಿವಿಧ ಭಾಗಗಳಲ್ಲಿ ಗಾಯಗಳಾಗಿವೆ. ಅದರಿಂದ ವಿಪರೀತ ನೋವು ಹಾಗೂ ಅದೇ ಭಯದಿಂದ ಮಗ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ಮಹೇಶ್ ಕುಮಾರ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಅಲ್ಲದೆ, ಶಿಕ್ಷಕರು ಹೊಡೆಯುತ್ತಾರೆ ಎಂಬ ಭಯದಲ್ಲಿ ಶಾಲೆಗೆ ಹೋಗುವುದಿಲ್ಲವೆಂದು ಪದೇ ಪದೇ ಹೇಳುತ್ತಿದ್ದ. ಆಗ ನಾನು 7ನೇ ತರಗತಿ ಮುಗಿದ ಮೇಲೆ ಬೇರೆ ಶಾಲೆಗೆ ಸೇರಿಸುವುದಾಗಿ ಪುತ್ರನಿಗೆ ಸಮಾಧಾನ ಪಡಿಸಿದ್ದೆ. ಆದರೂ, ಪುತ್ರನಿಗೆ ಭಯ ಕಡಿಮೆ ಆಗಿರಲಿಲ್ಲ. ಪುತ್ರನ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಮಹೇಶ್ ಅವರು ದೂರಿನಲ್ಲಿ ತಿಳಿಸಿದ್ದಾರೆ.
ಪೋಷಕರೆ ಮಗನ ರಕ್ಷಣೆ
ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿಯನ್ನು ಪೋಷಕರೇ ರಕ್ಷಿಸಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ವಿದ್ಯಾರ್ಥಿಯ ಸ್ಥಿತಿ ಗಂಭೀರವಾಗಿದೆ. ಚಿಕಿತ್ಸೆ ಮುಂದುವರೆದಿದೆ. ಶಾಲೆಯವರೇ ಕಿರುಕುಳ ನೀಡಿದ್ದಾರೆಯೇ ಅಥವಾ ಬೇರೆ ಏನಾದರೂ ಕಾರಣವಿರಬಹುದೇ ಎಂಬುದನ್ನು ಪತ್ತೆ ಹಚ್ಚಬೇಕಿದೆ. ಮಂಗಳವಾರ ಸಂಜೆ ಶಾಲೆಯಿಂದ ಬಂದ ವಿದ್ಯಾರ್ಥಿ, ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಎಂದು ಪೊಲೀಸರು ಹೇಳಿದರು. ಈ ಸಂಬಂಧ ಜ್ಞಾನಭಾರತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Laxmi News 24×7