ಬೆಳಗಾವಿಯ ವೀರಭದ್ರ ನಗರದ 0 ಕ್ರಾಸ್ ನಿವಾಸಿಗಳ ಬಹುದಿನಗಳ ಬೇಡಿಕೆಗೆ ಕೊನೆಗೂ ಸ್ಪಂದನೆ ಸಿಕ್ಕಿದೆ. ಮಳೆಗಾಲದಲ್ಲಿ ರಸ್ತೆಯ ಮೇಲೆ ನೀರು ನಿಂತು ನರಕಯಾತನೆ ಅನುಭವಿಸುತ್ತಿದ್ದ ಜನರ ಸಂಕಷ್ಟಕ್ಕೆ ಸ್ಪಂದಿಸಿರುವ ಶಾಸಕ ಆಸೀಫ್ ಸೇಠ್ ಅವರು, ಇಂದು ಹೊಸ ಗಟಾರ ಹಾಗೂ ಒಳಚರಂಡಿ ಅಭಿವೃದ್ಧಿ ಕಾಮಗಾರಿಗೆ ಅಧಿಕೃತವಾಗಿ ಚಾಲನೆ ನೀಡಿದರು.
ವೀರಭದ್ರ ನಗರದ 0 ಕ್ರಾಸ್ ಪ್ರದೇಶದಲ್ಲಿ ಕಳೆದ ಹಲವು ವರ್ಷಗಳಿಂದ ವ್ಯವಸ್ಥಿತ ಚರಂಡಿ ವ್ಯವಸ್ಥೆ ಇಲ್ಲದೆ ಜನರು ಪರದಾಡುತ್ತಿದ್ದರು. ಅದರಲ್ಲೂ ಮಳೆಗಾಲ ಬಂತೆಂದರೆ ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗುತ್ತಿತ್ತು. ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ ಶಾಸಕ ಆಸೀಫ್ ಸೇಠ್, ಈ ಭಾಗದ ಸುಗಮ ನೀರು ಹರಿವು ಮತ್ತು ನೈರ್ಮಲ್ಯ ಸುಧಾರಣೆಗಾಗಿ ಹೊಸ ಚರಂಡಿ ಮತ್ತು ಮಳೆನೀರು ಕಾಲುವೆ ನಿರ್ಮಾಣಕ್ಕೆ ಶನಿವಾರ ಚಾಲನೆ ನೀಡಿದ್ದಾರೆ.
ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಶಾಸಕ ಆಸೀಫ್ ಸೇಠ್, “ಈ ಕಾಮಗಾರಿಯನ್ನು ನಿಗದಿತ ಅವಧಿಯೊಳಗೆ ಮತ್ತು ಅತ್ಯಂತ ಗುಣಮಟ್ಟದಿಂದ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಕ್ಷೇತ್ರದ ಪ್ರತಿಯೊಂದು ವಾರ್ಡ್‌ನ ಮೂಲಭೂತ ನಾಗರಿಕ ಸಮಸ್ಯೆಗಳನ್ನು ಹಂತಹಂತವಾಗಿ ಬಗೆಹರಿಸುವುದೇ ನನ್ನ ಮೊದಲ ಆದ್ಯತೆ” ಎಂದು ತಿಳಿಸಿದರು. ದಶಕಗಳ ಕಾಲ ಈ ಸಮಸ್ಯೆ ಅನುಭವಿಸುತ್ತಿದ್ದ ಸ್ಥಳೀಯ ನಿವಾಸಿಗಳು ಶಾಸಕರ ಈ ಕ್ರಮಕ್ಕೆ ಹರ್ಷ ವ್ಯಕ್ತಪಡಿಸಿದ್ದು, ಮಳೆಗಾಲ ಆರಂಭವಾಗುವ ಮೊದಲೇ ಕೆಲಸ ಆರಂಭಿಸಿರುವುದಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ವಾರ್ಡ್ ಕಾರ್ಪೊರೇಟರ್‌ಗಳು, ಸ್ಥಳೀಯ ಮುಖಂಡರು ಹಾಗೂ ನೂರಾರು ನಿವಾಸಿಗಳು ಉಪಸ್ಥಿತರಿದ್ದರು.
Laxmi News 24×7