ಶಿವಮೊಗ್ಗ/ಚಿತ್ರದುರ್ಗ: ಕೊರೊನಾ ಲಾಕ್‍ಡೌನ್ ಹಿನ್ನೆಲೆಯಲ್ಲಿ ಹೊರ ರಾಜ್ಯ, ಹೊರ ಜಿಲ್ಲೆಗಳಲ್ಲಿಯೇ ಲಾಕ್ ಆಗಿದ್ದ ಕಾರ್ಮಿಕರು, ಜನರು ಇದೀಗ ತಮ್ಮ ತಮ್ಮ ಊರುಗಳತ್ತ ಬರುತ್ತಿದ್ದಾರೆ. ಇದೀಗ ಹೊರ ರಾಜ್ಯಗಳಿಂದ ಬರುತ್ತಿರುವ ಕಾರ್ಮಿಕರಿಗೆ ತಮ್ಮ ಗ್ರಾಮಗಳಲ್ಲಿ ಕ್ವಾರಂಟೈನ್ ಮಾಡಬೇಡಿ ಎಂದು ಗ್ರಾಮಸ್ಥರು ಪ್ರತಿಭಟನೆ ಮಾಡುತ್ತಿದ್ದಾರೆ.
ಶಿವಮೊಗ್ಗ ಜಿಲ್ಲೆಗೆ ಬೇರೆಬೇರೆ ರಾಜ್ಯಗಳಿಂದ ಕಾರ್ಮಿಕರು ಬರುತ್ತಿದ್ದಾರೆ. ಹೊರ ರಾಜ್ಯಗಳಿಂದ ಬರುತ್ತಿರುವ ಕಾರ್ಮಿಕರಿಗೆ ಜಿಲ್ಲಾಡಳಿತ ಸರ್ಕಾರಿ ವಸತಿ ನಿಲಯ ಹಾಗೂ ವಸತಿ ಶಾಲೆಗಳಲ್ಲಿ ಕ್ವಾರಂಟೈನ್ ಮಾಡಲು ಸಿದ್ಧತೆ ಕೈಗೊಂಡಿದೆ. ಆದರೆ ಕೆಲವೆಡೆ ಕ್ವಾರಂಟೈನ್ ಮಾಡಲು ಸ್ಥಳೀಯರಿಂದ ವಿರೋಧ ಸಹ ವ್ಯಕ್ತವಾಗುತ್ತಿದೆ.
ಇಂದು ಸಹ ಶಿವಮೊಗ್ಗ ಸಮೀಪದ ಗೊಂದಿ ಚಟ್ನಹಳ್ಳಿ ಬಳಿಯ ಅಲ್ಪ ಸಂಖ್ಯಾತರ ವಸತಿ ಶಾಲೆಯಲ್ಲಿ ಹೊರ ರಾಜ್ಯದಿಂದ ಬಂದಿದ್ದ 15 ಮಂದಿಯನ್ನು ಕ್ವಾರಂಟೈನ್ ಮಾಡಲು ಕೆಎಸ್ಆರ್‌ಟಿಸಿ ಬಸ್ಸಿನಲ್ಲಿ ಅಧಿಕಾರಿಗಳು ಕರೆದುಕೊಂಡು ಹೋಗಿದ್ದರು. ಆದರೆ ಈ ವೇಳೆ ಗ್ರಾಮಸ್ಥರು ತಮ್ಮ ಗ್ರಾಮದಲ್ಲಿ ಕ್ವಾರಂಟೈನ್ ಮಾಡೋದು ಬೇಡ, ನಾವು ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದರು.
ಈ ವೇಳೆ ಅಧಿಕಾರಿಗಳು ಹಾಗೂ ಗ್ರಾಮಸ್ಥರ ನಡುವೆ ಮಾತಿನ ಚಕಮಕಿಯೂ ನಡೆಯಿತು. ಅಲ್ಲದೇ ಗ್ರಾಮಸ್ಥರು ಬಸ್ ಮೇಲೆ ಕಲ್ಲು ತೂರಾಟ ಮಾಡುವ ಮೂಲಕ ಆಕ್ರೋಶ ಸಹ ವ್ಯಕ್ತಪಡಿಸಿದರು. ಈ ವೇಳೆ ಬಸ್ಸಿನ ಗಾಜುಗಳು ಸಹ ಪುಡಿ ಪುಡಿಯಾದವು. ನಂತರ ಸ್ಥಳಕ್ಕೆ ಬಂದ ಪೊಲೀಸರು ಬಿಗಿ ಭದ್ರತೆಯೊಂದಿಗೆ ಕಾರ್ಮಿಕರನ್ನು ಶಾಲೆಗೆ ಕರೆದುಕೊಂಡು ಹೋಗಿ ಕ್ವಾರಂಟೈನ್ ಮಾಡಿದರು.
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ತಂಡಗ ಗ್ರಾಮ ಬಳಿಯ ಹಾಸ್ಟೆಲ್‍ನಲ್ಲಿ ಕ್ವಾರಂಟೈನ್‍ಗೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ. ಜಿಲ್ಲಾಡಳಿತ 20 ಜನರನ್ನು ಕ್ವಾರಂಟೈನ್ ಮಾಡಲು ಸಿದ್ಧತೆ ನಡೆಸಿದೆ. ಆದರೆ ತಡರಾತ್ರಿ ಗುಂಪು ಗುಂಪಾಗಿ ಹಾಸ್ಟೆಲ್ ಬಳಿ ಗ್ರಾಮಸ್ಥರು ಜಮಾಯಿಸಿ, ಸಾಮಾಜಿಕ ಅಂತರ ಮರೆತು ಪ್ರತಿಭಟನೆ ಮಾಡಿದ್ದಾರೆ. ಪೊಲೀಸರು, ಅಧಿಕಾರಿಗಳ ಜೊತೆ ಗ್ರಾಮಸ್ಥರು ವಾಗ್ವಾದ ಮಾಡಿದ್ದಾರೆ. ಕೊನೆಗೆ ಗ್ರಾಮಸ್ಥರ ಒತ್ತಡಕ್ಕೆ ಮಣಿದು ಜಿಲ್ಲಾಡಳಿತ ಕ್ವಾರಂಟೈನ್ ವ್ಯವಸ್ಥೆಯನ್ನು ಬೇರೆಡೆ ಶಿಫ್ಟ್ ಮಾಡಿದೆ. ಬಹುತೇಕ ಗ್ರಾಮಗಳ ಬಳಿಯ ಹಾಸ್ಟೆಲ್‍ನಲ್ಲಿ ಕ್ವಾರಂಟೈನ್‍ಗೆ ಜನರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.