Breaking News

ಸಂಪುಟ ಸಭೆಯಲ್ಲಿ ಹಲವು ಮಹತ್ವದ ನಿರ್ಧಾರ – ರೈತರು, ಕಾರ್ಮಿಕರು, ಕೈಗಾರಿಕೆಗಳಿಗೆ ಬಂಪರ್‌ ಯೋಜನೆಗಳು

Spread the love

ಬೆಂಗಳೂರು: ರೈತರು, ಕಾರ್ಮಿಕರು, ಕೈಗಾರಿಕೆ, ನಗರಾಭಿವೃದ್ಧಿ, ಅರಣ್ಯ, ಸ್ಟಾರ್ಟ್‌ಅಪ್‌, ಕೃತಕ ಬುದ್ಧಿಮತ್ತೆ, ಜವಳಿ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಹಲವು ಮಹತ್ವದ ನಿರ್ಧಾರಗಳನ್ನ ಇಂದಿನ ಸಚಿವ ಸಂಪುಟ ಸಭೆಯಲ್ಲಿ ಕೈಗೊಳ್ಳಲಾಗಿದೆ. ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್‌ ಅವರು ಸರ್ಕಾರದ ನಿರ್ಧಾರಗಳ ಕುರಿತು ಮಾಹಿತಿ ನೀಡಿದರು.

ಬಡ ರೈತರಿಗೆ ಉಚಿತ ಉಳುಮೆ
ರಾಜ್ಯದಲ್ಲಿ ‘ಮುಖ್ಯಮಂತ್ರಿ ನೇಗಿಲ ಯೋಗಿ ಯೋಜನೆ’ ಜಾರಿಗೆ ತರಲು ನಿರ್ಧರಿಸಲಾಗಿದೆ. ಗ್ರಾಮದೊಳಗೆ ಟ್ರ್ಯಾಕ್ಟರ್ ಹೊಂದಿರುವವರಿಂದ ಸರ್ಕಾರ ಟ್ರ್ಯಾಕ್ಟರ್‌ಗಳನ್ನ ಬಾಡಿಗೆಗೆ ಪಡೆದು, ಟ್ರ್ಯಾಕ್ಟರ್ ಇಲ್ಲದ ಹಾಗೂ 3 ಎಕರೆಗಿಂತ ಕಡಿಮೆ ಜಮೀನು ಹೊಂದಿರುವ ಬಡ ರೈತರ ಜಮೀನನ್ನ ಉಚಿತವಾಗಿ ಉಳುಮೆ ಮಾಡಿಕೊಡಲು ನಿರ್ಧರಿಸಲಾಗಿದೆ.

‘ಶ್ರಮಿಕ ನಿವಾಸ’ಕ್ಕೆ ಚಾಲನೆ
ದೊಡ್ಡದೊಡ್ಡ ಕೈಗಾರಿಕೆಗಳು ತಮ್ಮ ನೌಕರರು ಸಮೀಪದಲ್ಲೇ ವಾಸ ಮಾಡಲು ಅನುಕೂಲವಾಗುವಂತೆ ಮನೆಗಳನ್ನ ಕಟ್ಟಿಕೊಡಲು ‘ಶ್ರಮಿಕ ನಿವಾಸ’ ಯೋಜನೆ ಜಾರಿಗೆ ಕ್ಯಾಬಿನೆಟ್‌ ತೀರ್ಮಾನಿಸಿತು. ಈ ಯೋಜನೆಯಡಿ ನಿಗದಿತ ಮಾನದಂಡದಡಿ ಸಂಬಂಧಿತ ಉದ್ದಿಮೆಗಳು ತಮ್ಮ ನೌಕರರಿಗೆ ಮನೆ ಕಟ್ಟಲು ಸಬ್ಸಿಡಿ, ಹೆಚ್ವುವರಿ ಭೂಮಿ ಸೇರಿದಂತೆ ಹಲವು ಪ್ರೋತ್ಸಾಹಕ ಸೌಲಭ್ಯಗಳನ್ನು ಕಲ್ಪಿಸಲಾಗುವುದು.

ಉದ್ದಿಮೆಗಳಿಗೆ ಬಂಡವಾಳ ಸಬ್ಸಿಡಿ
ರಾಜ್ಯದ ಹಿಂದುಳಿದ ತಾಲೂಕುಗಳಲ್ಲಿ ಉದ್ದಿಮೆ ಚಟುವಟಿಕೆ ಆರಂಭಿಸಲು ಮುಂದೆ ಬರುವ ಉದ್ಯಮಿಗಳಿಗೆ ‘ಬಂಡವಾಳ ಸಹಾಯಧನ’ ನೀಡುವ ಯೋಜನೆಗೆ ಸಂಪುಟ ಒಪ್ಪಿಗೆ ನೀಡಿತು. ಅತೀ ಹಿಂದುಳಿದ ಜಿಲ್ಲೆಗಳಲ್ಲಿ ನಾನಾ ವಲಯಗಳಲ್ಲಿ ಹೂಡಿಕೆಗೆ ಮುಂದೆ ಬರುವ ಉದ್ಯಮಿಗಳಿಗೆ ಒಟ್ಟು ಬಂಡವಾಳ ಮೊತ್ತದಲ್ಲಿ ಶೇ.20 ಹಾಗೂ ಹಿಂದುಳಿದ ತಾಲೂಕುಗಳಲ್ಲಿಶೇ.10 ರಷ್ಟು ಸಹಾಯಧನ ನೀಡುವ ಪ್ರಸ್ತಾವನೆಯನ್ನು ಕ್ಯಾಬಿನೆಟ್‌ ಅನುಮೋದಿಸಿತು.

ಕರ್ನಾಟಕ ಏರೋಸ್ಪೇಸ್ ಪಾಲಿಸಿ 2025-31ಕ್ಕೆ ಅನುಮೋದನೆ
ಇದರೊಂದಿಗೆ ಕರ್ನಾಟಕ ಏರೋಸ್ಪೇಸ್ ಪಾಲಿಸಿ 2025-31ಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಸುಮಾರು 60,000 ಕೋಟಿ ರೂ. ಹೂಡಿಕೆ ಆಕರ್ಷಿಸುವುದು ಹಾಗೂ 60 ಸಾವಿರ ಉದ್ಯೋಗ ಸೃಷ್ಟಿಸುವುದು ಇದರ ಪ್ರಮುಖ ಗುರಿಯಾಗಿದೆ. ಪಾಲಿಸಿಯಲ್ಲಿ ಫೋಕಸ್ ಮತ್ತು ನಾನ್-ಫೋಕಸ್ ಪ್ರದೇಶಗಳೆಂದು ಎರಡು ವಿಭಾಗಗಳನ್ನು ಮಾಡಲಾಗಿದೆ.

10 ಹಿಂದುಳಿದ ಜಿಲ್ಲೆಗಳಲ್ಲಿ ‘ಉದ್ಯೋಗ ನಿಧಿ’
ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಎಂಎಸ್‌ಎಂಇ ಕ್ಷೇತ್ರಕ್ಕೆ ಸಂಬಂಧಿಸಿದಂತೆ, ಪ್ರೊ.ಎಂ ಗೋವಿಂದ ರಾವ್ ಸಮಿತಿಯ ವರದಿ ಆಧಾರದ ಮೇಲೆ ‘ಉದ್ಯೋಗ ನಿಧಿ’ ಯೋಜನೆಗೆ ಅನುಮೋದನೆ ನೀಡಲಾಗಿದೆ. ರಾಜ್ಯದ ಕಡಿಮೆ ಅಭಿವೃದ್ಧಿ ಹೊಂದಿದ 10 ಜಿಲ್ಲೆಗಳಲ್ಲಿ ಹೊಸದಾಗಿ ಕಾರ್ಮಿಕರನ್ನು ನೇಮಿಸಿಕೊಳ್ಳುವ ಉದ್ಯಮಿಗಳು ಮತ್ತು ಕೈಗಾರಿಕೋದ್ಯಮಿಗಳಿಗೆ ಪ್ರತಿ ಹೊಸ ಉದ್ಯೋಗ ಸೃಷ್ಟಿಗೆ ತಿಂಗಳಿಗೆ 2,500 ರೂ. ಉದ್ಯೋಗ ಪ್ರೋತ್ಸಾಹಧನ ನೀಡಲಾಗುತ್ತದೆ. ಈ ಪ್ರೋತ್ಸಾಹಧನವನ್ನು ಗರಿಷ್ಠ 2 ವರ್ಷಗಳವರೆಗೆ ನೀಡಲು ನಿರ್ಧರಿಸಲಾಗಿದೆ.

ಅದೇ ರೀತಿ, ಪ್ರತಿ ಜಿಲ್ಲೆಯಲ್ಲಿ ಎರಡು ತಾಲೂಕುಗಳನ್ನು ಆಯ್ಕೆ ಮಾಡಿ ಅಲ್ಲಿ ಹೂಡಿಕೆ ಮಾಡುವ ಉದ್ಯಮಿಗಳಿಗೆ ಹೂಡಿಕೆಯ ಶೇ.20ರಷ್ಟು ಸಬ್ಸಿಡಿ ನೀಡಲು ನಿರ್ಧರಿಸಲಾಗಿದೆ.

172 ತಾಲೂಕುಗಳಲ್ಲಿ ರಸ್ತೆ ಜಾಲ ಅಭಿವೃದ್ಧಿಗೆ ಯೋಜನೆ
ರಾಜ್ಯದ ಸ್ಥಳೀಯ ಯೋಜನಾ ಪ್ರದೇಶಗಳಲ್ಲಿರುವ ಅನುಮೋದಿತ ಮಹಾಯೋಜನೆ ಹೊಂದಿರುವ ಹಾಗೂ ಮಹಾಯೋಜನೆ ತಯಾರಿಕೆಯ ವಿವಿಧ ಹಂತಗಳಲ್ಲಿರುವ ನಗರ ಮತ್ತು ಪಟ್ಟಣಗಳಿಗೆ GIS ಆಧಾರಿತ Road Network Grid Planಗೆ ಸರ್ಕಾರ ತಾತ್ಕಾಲಿಕ ಅನುಮೋದನೆ ನೀಡಿದೆ. ಈ ಯೋಜನೆಯಡಿ 172 ತಾಲೂಕುಗಳಲ್ಲಿ ಅಗತ್ಯ ಜಾಗ ಗುರುತಿಸಲು ನಿರ್ಧರಿಸಲಾಗಿದೆ.

493 ಕೋಟಿ ವೆಚ್ಚದಲ್ಲಿ ‘ತೇಗ ಸಿರಿ’ ಯೋಜನೆ
ರಾಜ್ಯಮಟ್ಟದ ಸಮಗ್ರ ‘ತೇಗ ಸಿರಿ ವೃಕ್ಷಾಭಿವೃದ್ಧಿ ಯೋಜನೆ’ಗೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಸುಮಾರು 493.09 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಯೋಜನೆಯನ್ನು ಅನುಷ್ಠಾನಗೊಳಿಸಲು ನಿರ್ಧರಿಸಲಾಗಿದೆ. ರಸ್ತೆ ಬದಿಯಲ್ಲಿರುವ ರೈತರ ಜಮೀನಿನಲ್ಲಿ ಅರಣ್ಯ ಇಲಾಖೆ ತೇಗದ ಗಿಡಗಳನ್ನು ನೆಡಲಿದೆ. ರೈತರು ಆ ಗಿಡಗಳ ಪೋಷಣೆ ಮಾಡಲಿದ್ದು, ಸುಮಾರು 15 ವರ್ಷಗಳ ಬಳಿಕ ಮರ ಬೆಳೆದಾಗ ದೊರೆಯುವ ಲಾಭದಲ್ಲಿ 70% ರಷ್ಟು ಪಾಲನ್ನು ರೈತರಿಗೆ ನೀಡಲು ನಿರ್ಧರಿಸಲಾಗಿದೆ.

ಸ್ಟಾರ್ಟ್‌ಅಪ್ ನೀತಿಯಲ್ಲಿ ಬದಲಾವಣೆ
ರಾಜ್ಯದ ಸ್ಟಾರ್ಟ್‌ಅಪ್ ನೀತಿಯಲ್ಲಿ ಕೆಲವು ಬದಲಾವಣೆಗಳನ್ನು ತರಲು ನಿರ್ಧರಿಸಲಾಗಿದೆ. ಎಐ, ರೊಬಾಟಿಕ್ಸ್, ಸ್ಪೇಸ್ ಸೇರಿದಂತೆ ಹೊಸ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸರ್ಕಾರವೇ ಮೊದಲ ಹಂತದಲ್ಲಿ ತಂತ್ರಜ್ಞಾನ ಬಳಕೆಗೆ ಮುಂದಾಗಲಿದೆ.

ಚಿಕ್ಕಬಳ್ಳಾಪುರದಲ್ಲಿ ದೇಶದ ಮೊದಲ ಡ್ರೋನ್ ಟೆಸ್ಟಿಂಗ್ ಫೆಸಿಲಿಟಿ
ಚಿಕ್ಕಬಳ್ಳಾಪುರದಲ್ಲಿ ದೇಶದಲ್ಲೇ ಮೊದಲ ಬಾರಿಗೆ ಡ್ರೋನ್ ಟೆಸ್ಟಿಂಗ್ ಫೆಸಿಲಿಟಿ ಸ್ಥಾಪಿಸಲು ಸರ್ಕಾರ ನಿರ್ಧರಿಸಿದೆ. ಡ್ರೋನ್ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವುದು ಮತ್ತು ವಿವಿಧ ತಂತ್ರಜ್ಞಾನಗಳನ್ನು ಪರೀಕ್ಷಿಸಲು ಈ ಕೇಂದ್ರ ನೆರವಾಗಲಿದೆ. ಈ ಯೋಜನೆಗೆ 42.83 ಕೋಟಿ ರೂ. ಮೀಸಲಿಡಲಾಗಿದೆ.

ಎಲೆಕ್ಟ್ರಾನಿಕ್ ಸಿಟಿಯಲ್ಲಿ ಎಐ ಹಬ್
ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಆರ್ಟಿಫಿಷಿಯಲ್ ಇಂಟಲಿಜೆನ್ಸ್ (AI) ಹಬ್ ಸ್ಥಾಪಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ 35 ಕೋಟಿ ರೂ. ಮೀಸಲಿಡಲಾಗಿದೆ. ಮುಂದಿನ ದಿನಗಳಲ್ಲಿ ಎಐ ವಿಶ್ವವಿದ್ಯಾಲಯ ಸ್ಥಾಪನೆಯಾದ ಬಳಿಕ ಈ ಹಬ್‌ನ ಚಟುವಟಿಕೆಗಳನ್ನ ಒಂದೇ ಸ್ಥಳಕ್ಕೆ ಸ್ಥಳಾಂತರಿಸುವ ಉದ್ದೇಶ ಹೊಂದಲಾಗಿದೆ.

20 ಸಾವಿರ ಕೋಟಿ ರೂ. ಬಂಡವಾಳ ಆಕರ್ಷಣೆ ಗುರಿ
ಇದಲ್ಲದೇ, ಬೆಂಗಳೂರಿನಲ್ಲಿ ಥ್ರಿಬಲ್ ಐಟಿ ಸ್ಥಾಪಿಸಲು ನಿರ್ಧಾರ ಕೈಗೊಳ್ಳಲಾಗಿದೆ. ಶಕ್ತಿ ಯೋಜನೆಯಡಿ ಮಹಿಳೆಯರಿಗೆ ‘ಶಕ್ತಿ ಸ್ಮಾರ್ಟ್ ಕಾರ್ಡ್’ ನೀಡಲು ಸರ್ಕಾರ ನಿರ್ಧರಿಸಿದೆ. ಈ ಯೋಜನೆಗೆ ಸುಮಾರು 238 ಕೋಟಿ ರೂ. ವೆಚ್ಚವಾಗಲಿದ್ದು, ಪಿಪಿಪಿ ಮಾದರಿಯಲ್ಲಿ ಅನುಷ್ಠಾನಗೊಳಿಸಲು ನಿರ್ಧರಿಸಲಾಗಿದೆ. ಜವಳಿ ಹಾಗೂ ಸಿದ್ಧ ಉಡುಪು ನೀತಿ 2026-31ಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ನೀತಿಯಲ್ಲಿ ರೇಷ್ಮೆ ಉದ್ಯಮಕ್ಕೂ ಆದ್ಯತೆ ನೀಡಲಾಗಿದೆ. ಮುಂದಿನ ಐದು ವರ್ಷಗಳಲ್ಲಿ 20 ಸಾವಿರ ಕೋಟಿ ರೂ. ಬಂಡವಾಳ ಹೂಡಿಕೆ ಆಕರ್ಷಿಸುವ ಗುರಿಯನ್ನು ಸರ್ಕಾರ ಹೊಂದಿದೆ.

ರೈತರ ಸಾಲಮನ್ನಾ ವಿಚಾರ
ರಾಜ್ಯದಲ್ಲಿ 49 ಲಕ್ಷ ರೈತರು ಬೆಳೆ ವಿಮೆ ಮಾಡಿಸಿದ್ದಾರೆ. ರೈತರ ಸಾಲಮನ್ನಾ ಮಾಡುವಂತೆ ಕೇಂದ್ರ ಸರ್ಕಾರಕ್ಕೂ ಮನವಿ ಮಾಡಲಾಗುವುದು. ರಾಜ್ಯದ ಹಣಕಾಸಿನ ಪರಿಸ್ಥಿತಿಯನ್ನು ಪರಿಶೀಲಿಸಿದ ಬಳಿಕ ರಾಜ್ಯ ಸರ್ಕಾರ ಈ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ ಎಂದು ಡಿಸಿಎಂ ತಿಳಿಸಿದರು.

2 ಸಾವಿರ ಪ್ರಾಧ್ಯಾಪಕರ ನೇಮಕ
ರಾಜ್ಯದಲ್ಲಿ ಸುಮಾರು 2 ಸಾವಿರ ಪ್ರಾಧ್ಯಾಪಕರ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಇದಲ್ಲದೆ, ಸಿಇಟಿ, ನೀಟ್ ಸೇರಿದಂತೆ ವಿವಿಧ ಪ್ರವೇಶ ಪರೀಕ್ಷೆಗಳಲ್ಲಿ 1ರಿಂದ 12ನೇ ತರಗತಿವರೆಗೆ ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳಿಗೆ ಶೇ.7.5ರಷ್ಟು ಮೀಸಲಾತಿ ನೀಡುವ ಬಗ್ಗೆ ಸರ್ಕಾರದ ನಿರ್ಧಾರವನ್ನು ತಿಳಿಸಿದರು.

ಎಸ್‌ಸಿ, ಎಸ್‌ಟಿ ಕಾಲೋನಿಗಳ ಅಭಿವೃದ್ಧಿಗೆ ಆದ್ಯತೆ
ಮುಂದುವರಿದು… ರಾಜ್ಯದ ಎಸ್‌ಸಿ ಮತ್ತು ಎಸ್‌ಟಿ ಕಾಲೋನಿಗಳ ವಿಶೇಷ ಅಭಿವೃದ್ಧಿಗೆ ಆದ್ಯತೆ ನೀಡಲು ಸಚಿವ ಸಂಪುಟ ನಿರ್ಧರಿಸಿದೆ. ವಿವಿಧ ನಿಗಮಗಳ ಅಧೀನದಲ್ಲಿ ಸರ್ಕಾರದಿಂದ ಉಚಿತ ವಾಹನಗಳನ್ನು ವಿತರಿಸುವ ಪ್ರಮಾಣವನ್ನು ಹೆಚ್ಚಿಸಲು ಸಹ ನಿರ್ಧರಿಸಲಾಗಿದೆ. ಮೊದಲ ವರ್ಷದಲ್ಲಿ 10 ಸಾವಿರ ವಾಹನಗಳನ್ನು ವಿತರಿಸುವ ಗುರಿ ಹೊಂದಲಾಗಿದೆ.


Spread the love

About Laxminews 24x7

Check Also

ಈ ಬಾರಿ ಮೈಸೂರು ದಸರಾ ಮೆರವಣಿಗೆಯಲ್ಲಿ ನಟ – ನಟಿಯರು ಭಾಗಿ

Spread the loveಮೈಸೂರು: ಈ ಬಾರಿಯ ದಸರಾ ಮೆರವಣಿಗೆಯಲ್ಲಿ  ಕನ್ನಡ ಚಲನಚಿತ್ರ ರಂಗದ ನಟ ನಟಿಯರು  ಭಾಗಿಯಾಗಲಿದ್ದಾರೆ. ಸಿಎಂ ಆಶಯದಂತೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ