ರಾಯಚೂರು: ಕೊರೊನಾ ಸೋಂಕಿನ ಭೀತಿ ಹಿನ್ನೆಲೆ ಇಡೀ ದೇಶವೇ ಲಾಕ್‍ಡೌನ್‍ನಲ್ಲಿದ್ದರೆ ಜಿಲ್ಲೆಯಲ್ಲಿ ಬೈಕ್ ಕಳ್ಳರ ಹಾವಳಿ ಜೋರಾಗಿದೆ. ಇತ್ತೀಚೆಗೆ ಬೈಕ್ ಕಳ್ಳತನಗಳು ಹೆಚ್ಚಾದ ಹಿನ್ನೆಲೆ ಮಾನ್ವಿ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿದ್ದು, ಜಿಲ್ಲೆಯ ವಿವಿಧ ಠಾಣೆ ಪೊಲೀಸರಿಗೆ ಬೇಕಾಗಿದ್ದ ಇಬ್ಬರು ಕಳ್ಳರನ್ನ ಬಂಧಿಸಿದ್ದಾರೆ.
ಮಸ್ಕಿ ತಾಲೂಕಿನ ಸೋಮನಾಥಪುರದಲ್ಲಿ ಮೇಷನ್ ಕೆಲಸ ಮಾಡುತ್ತಿದ್ದ ಉಮೇಶ್, ಮಾನವಿ ಕೋನಾಪುರಪೇಟೆಯ ಆಟೋ ಚಾಲಕ ಅಕ್ತರ್ ಬಂಧಿತ ಆರೋಪಿಗಳು. ಬಂಧಿತರಿಂದ 3.55 ಲಕ್ಷ ರೂ. ಮೌಲ್ಯದ 8 ಬೈಕ್‍ಗಳನ್ನು ಜಪ್ತಿಮಾಡಲಾಗಿದೆ. ಮಾನ್ವಿ ಸೇರಿ ವಿವಿಧ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಗಳ ಆರೋಪಿಗಳು ಕೊನೆಗೂ ಸಿಕ್ಕಿಬಿದ್ದಿದ್ದಾರೆ. ಇತ್ತೀಚಿಗೆ ಜಿಲ್ಲೆಯಲ್ಲಿ ಹೆಚ್ಚಾಗಿದ್ದ ಬೈಕ್ ಕಳ್ಳತನ ಪ್ರಕರಣಗಳಿಂದ ಸಾರ್ವಜನಿಕರು ರೋಸಿಹೋಗಿದ್ದರು.
ಮಾನ್ವಿ ಸಿಪಿಐ ದತ್ತಾತ್ರೇಯ ಕಾರ್ನಾಡ್, ಪಿಎಸ್‍ಐ ರಂಗಪ್ಪ ಎಚ್ ದೊಡ್ಡಮನಿ ನೇತೃತ್ವದ ವಿಶೇಷ ತಂಡ ಆರೋಪಿಗಳ ಮಾಹಿತಿ ಕಲೆ ಹಾಕಿ ಖಚಿತ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿ ಇಬ್ಬರನ್ನ ಬಂಧಿಸಿದೆ. ಯಶಸ್ವಿ ಕಾರ್ಯಾಚರಣೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಶ್ಲಾಘಿಸಿದ್ದಾರೆ.