Home / new delhi / ಶ್ರೀ ಗುರು ರಾಘವೇಂದ್ರ ಮಹಿಮೆ : ಬೆಂಕಿಯಲ್ಲಿ ಸುಟ್ಟ ರತ್ನಾಹಾರ ಮತ್ತಷ್ಟು ಹೊಳೆದಾಗ..

ಶ್ರೀ ಗುರು ರಾಘವೇಂದ್ರ ಮಹಿಮೆ : ಬೆಂಕಿಯಲ್ಲಿ ಸುಟ್ಟ ರತ್ನಾಹಾರ ಮತ್ತಷ್ಟು ಹೊಳೆದಾಗ..

Spread the love

ಕ್ರಿ.ಶ.೧೬೪೧-೪೨ ರ ಸಮಯ. ದಕ್ಷಿಣ ಭಾರತದ ರಾಜಕೀಯ ರಂಗದಲ್ಲಿ ಏರುಪೇರುಗಳಾದವು. ತಂಜಾಪುರದ ರಾಜ ವಿಜಯರಾಘವ ಭೂಪಾಲ ಭಾರೀ ಸೋಲನ್ನನುಭವಿಸಿದ. ಜೀವವುಳಿಸಿಕೊಳ್ಳಲು ಹೆಣಗಾಡಿದ. ದೈವಯೋಗದಿಂದ ಶ್ರೀರಾಘವೇಂದ್ರಗುರುಗಳ ಸಕಾಲಿಕ ಪ್ರಯತ್ನದಿಂದ ಗೆದ್ದವರು ಮತ್ತು ಸೋತವರ ನಡುವೆ ಸಂಧಿಯೇರ್ಪಟ್ಟಿತು. ಆದರೆ ತಂಜಾಪುರ ರಾಜ್ಯದ ದವಸ-ಧಾನ್ಯಗಳು ಸಿರಿ- ಸಂಪತ್ತೆಲ್ಲವೂ ಲೂಟಿಯಾಗಿತ್ತು. ಪ್ರಾಕೃತಿಕ ವಿಕೋಪದಿಂದ ಮಳೆಯಿಲ್ಲದೆ ಬೆಳೆಗಳೆಲ್ಲವೂ ನಾಶವಾದವು. ತಂಜಾಪುರ ಘನಘೋರ ದುರ್ಭಿಕ್ಷಕ್ಕೆ ಈಡಾಯಿತು.

 

 

ಸೋತ ನೋವನ್ನು ಮರೆತ ರಾಜ ಪ್ರಜಾಕ್ಷೇಮಕ್ಕೆ ತನ್ನೆಲ್ಲ ಭಂಡಾರವನ್ನೂ ವಿನಿಯೋಗಿಸಿದನು. ಭಂಡಾರ ಬರಿದಾಯಿತು. ದುರ್ಭಿಕ್ಷ ಮುಂದುವರಿಯಿತು. ರಾಜ ವಿಜಯರಾಘವ ಕುಂಭಕೋಣಕ್ಕೆ ಬಂದು ಶ್ರೀಗುರುರಾಯರನ್ನು ಕಂಡು ಎಲ್ಲವನ್ನು ವಿವರಿಸಿದನು. ಕಾಪಾಡಬೇಕೆಂದು ಬೇಡಿಕೊಂಡನು.

ಆಲಿಸಿ ಧ್ಯಾನಮಗ್ನರಾದ ಗುರುಗಳಿಗೆ ಕ್ಷಾಮದ ಭೀಕರತೆಯ ಅರಿವಾಯಿತು ಅದು ಶೀಘ್ರವಾಗಿ ಮುಗಿಯುವುದಿಲ್ಲವೆಂದೂ ತಿಳಿಯಿತು. ಆದರೂ ರಾಜನಿಗೆ ಅಭಯನೀಡಿ,” ನಾವು ತಂಜಾಪುರಕ್ಕೆ ಬಂದು ಪರಿಶೀಲಿಸಿ ಪರಿಹಾರೋಪಾಯವನ್ನು ಚಿಂತಿಸುತ್ತೇವೆ. ಫಲ ಈಶಾಧೀನ”ವೆಂದು ರಾಜನನ್ನು ಆಶೀರ್ವದಿಸಿ ಕಳಿಸಿದರು.

 

 

ಶ್ರೀಗುರುರಾಯರಿಗೆ ಮಂತ್ರಸಿದ್ಧಿಯಿತ್ತು. ಆದರದನ್ನು ಸ್ವಾರ್ಥಕ್ಕೆ ಉಪಯೋಗಿಸಬಾರದೆಂದು ನಿರ್ಧರಿಸಿದರು. ಅವರು ಮಹಾಸಂಸ್ಥಾನದಲ್ಲಿದ್ದ ಸಮಸ್ತವನ್ನೂ ಅನೇಕ ಬಂಡಿಗಳಲ್ಲಿ ತುಂಬಿಕೊಂಡು ಮಿತ ಪರಿವಾರದೊಡನೆ ತಂಜಾಪುರಕ್ಕೆ ದಯಮಾಡಿಸಿದರು. ತಂದಿದ್ದ ಎಲ್ಲವನ್ನೂ ರಾಜನಿಗೆ ನೀಡಿ ಪ್ರಜೆಗಳಿಗೆ ಆಹಾರ ಹಂಚುವಲ್ಲಿ ಉಪಯೋಗಿಸಿಕೊಳ್ಳಲು ತಿಳಿಸಿದರು. ಗುರುಪೀಠದ ಸ್ವತ್ತನ್ನು ಸ್ವೀಕರಿಸಲು ರಾಜ ಹಿಂಜರಿದನು. ಆಗ ಗುರುಗಳು,”ಗುರುಪೀಠಗಳಿರುವುದೇ ಪ್ರಜೆಗಳಿಗೆ ಕಷ್ಟಬಂದಾಗ ಅದನ್ನು ಪರಿಹರಿಸಲು. ಚಿಂತಿಸದೆ ಹಂಚು. ಇವು ಕೆಲವು ವರ್ಷಗಳಿಗೆ ಸಾಕಾದೀತು. ಮುಂದೆ ಶ್ರೀಹರಿಯ ಇಚ್ಛೆ” ಎಂದರು. ರಾಜನು ಅಂತೆಯೇ ವ್ಯವಸ್ಥೆ ಮಾಡಿದನು. ಗುರುವರ್ಯರ ಉದಾರತೆಯನ್ನರಿತ ಪ್ರಜರು ಗುರುಗಳನ್ನು ತಮ್ಮ ಭಾಗದ ದೇವರೆಂದೇ ತಿಳಿದರು.

 

 

ಗುರುಗಳು ಮರುದಿನ ರಾಜನ ಧಾನ್ಯಾಗಾರಕ್ಕೆ ಹೋದರು. ಅಲ್ಲಿ ಉಳಿದಿದ್ದ ಧಾನ್ಯಗಳ ಮೇಲೆ ಬೀಜಾಕ್ಷರಗಳನ್ನು ಬರೆದರು ತಾವು ಮೂರುದಿನ ಪರ್ಯಂತ ಅವಿಚ್ಛಿನ್ನವಾಗಿ ಉಪವಾಸದಿಂದ ಮಂತ್ರಗಳನ್ನು ಜಪಿಸುತ್ತ ಕುಳಿತುಬಿಟ್ಟರು. ವಿಷಯ ತಿಳಿದು ಸಾವಿರಾರು ಮಂದಿ ಹೊರಗೆ ಸೇರಿದ್ದರು. ನಾಲ್ಕನೆಯ ದಿನ ಸೂರ್ಯೋದಯಕ್ಕೆ ಪವಾಡವೇ ನಡೆಯಿತು. ಬರಿದಾಗಿದ್ದ ಧಾನ್ಯಾಗಾರ ಧಾನ್ಯರಾಶಿಯಿಂದ ತುಂಬಿ ತುಳುಕತೊಡಗಿತು. ಎಲ್ಲರೂ ಹರ್ಷಪುಳಕಿತರಾದರು.

ದಿನಗಳುರುಳಿದಂತೆ ಶ್ರೀಗುರುರಾಯರ ಅಪ್ಪಣೆಯಂತೆ ರಾಜನು ಕ್ಷಾಮ ನಿವಾರಣೆ, ಸುಭಿಕ್ಷಗಳಿಗಾಗಿ ಅನೇಕ ಯಜ್ಞ-ಯಾಗಾದಿಗಳನ್ನು ಮಾಡಿದನು. ಗುರುಗಳೇ ನೇತೃತ್ವ ವಹಿಸಿದರು. ಒಂದು ತಿಂಗಳ ಕಾಲ ಸ್ವತಃ ಜಪ-ತಪಾದ್ಯನುಷ್ಠಾನ ಮಾಡುತ್ತಿದ್ದರು. ಅದರ ಫಲರೂಪವಾಗಿ ರಾಜ್ಯದೆಲ್ಲೆಡೆ ಮಳೆಯಾಗತೊಡಗಿತು. ಕಾವೇರಿ ತುಂಬಿ ಹರಿದಳು. ಹನ್ನೆರಡು ವರ್ಷಕಾಲ ಅವರಿಸಿದ್ದ ಕ್ಷಾಮ ಪರಿಹಾರವಾಗಿ ರಾಜ್ಯ ಸುಭಿಕ್ಷವಾಯಿತು.

 

 

 

ಯಾಗಕಾಲದಲ್ಲಿ ರಾಜನು ಕೃತಜ್ಞತೆಯನ್ನರ್ಪಿಸಲು ಗುರುಗಳಿಗೊಂದು ಅಮೂಲ್ಯ ರತ್ನಾಹಾರವನ್ನು ಸಮರ್ಪಿಸಿದನು. ಆಗ ಯಜ್ಞಕುಂಡದಲ್ಲಿ ಆವಿರ್ಭವಿಸಿ ಗುರುಗಳಿಗೆ ಮಾತ್ರ ಶ್ರೀಪರಶುರಾಮದೇವರು ಅಗ್ನ್ಯಂತರ್ಗತನಾಗಿ ಕಾಣಿಸಿಕೊಂಡನು. ಗುರುಗಳು ಅರ್ಘ್ಯಪಾದ್ಯಾದಿ ಸಮರ್ಪಿಸಿ ರತ್ನಾಹಾರವನ್ನು ದೇವರ ಕಂಠಕ್ಕೆ ಹಾಕಿ ನಮಸ್ಕರಿಸಿದರು. ಗುರುಗಳು ರತ್ನಾಹಾರವನ್ನು ಬೆಂಕಿಗೆ ಹಾಕಿದರೆಂದು ಎಲ್ಲರೂ ಬೆರಗಾದರು. ರಾಜನಿಗೂ ಅಸಮಾಧಾನ, ಅತೃಪ್ತಿ ಉಂಟಾಯಿತು. ತನ್ನನ್ನು ಬಹುಸಂಕಷ್ಟದಿಂದ ಕಾಪಾಡಿದ್ದ ಗುರುಗಳ ಮೇಲೇ ಸಿಡಿಮಿಡಿಗೊಂಡನು.

 

 

ರಾಜನ ಮನಸ್ಥಿತಿಯನ್ನು ಗುರುಗಳು ಅರಿತರು. ಅವನ ಅಜ್ಞಾನಕ್ಕೆ ಮರುಗಿದರು. ಪೂರ್ಣಾಹುತಿಗೆ ಸಿದ್ಧರಾದರು. ಸಮರ್ಪಿಸಿದರು. ಯಜ್ಞ ಜ್ವಾಲೆಗಳು ಆಳೆತ್ತರ ಪ್ರಜ್ವಲಿಸ ತೊಡಗಿದವು. ಅಗ್ನ್ಯಂತರ್ಗತ ದೇವರು ಮತ್ತೆ ಅಗ್ನಿಕುಂಡದಲ್ಲಿ ಆವಿರ್ಭವಿಸಿದರು. ಗುರುಗಳ ದೃಷ್ಟಿಗೋಚರರಾದರು. ಗುರುಗಳು ಭಕ್ತಿಪರವಶತೆಯಿಂದ ದೇವರನ್ನು ಸ್ತುತಿಸಿ ರಾಜ್ಯ ಕ್ಷೇಮಕ್ಕೆ ಪ್ರಾರ್ಥಿಸಿ ಧಗಧಗಿಸುತ್ತಿರುವ ಅಗ್ನಿಕುಂಡದಲ್ಲಿ ಕೈಹಾಕಿ ದೇವರ ಕಂಠದಲ್ಲಿದ್ದ ರತ್ನಾಹಾರವನ್ನು ತೆಗೆದುಕೊಂಡರು. ಅದು ಬೆಂಕಿಗೆ ಅರ್ಪಿತವಾಗೂ ಮೊದಲಿಗಿಂತ ಕಾಂತಿಯಿಂದ ಥಳಥಳಿಸುತ್ತಿತ್ತು. ಗುರುಗಳು ಅದನ್ನು ಶ್ರೀಹರಿಯ ಪ್ರಸಾದವೆಂದು ಹಾಸದೊಡನೆ ರಾಜನಿಗೆ ನೀಡಿದರು. ರಾಜ್ಯಕ್ಕಿನ್ನು ಯಾವ ತೊಂದರೆಯೂ ಇಲ್ಲ. ಎಲ್ಲರಿಗೂ ಮಂಗಳವಾಗುವುದೆಂದು ಹರಸಿದರು.

 

 

ರಾಜ-ಪ್ರಜೆಗಳೆಲ್ಲರೂ ತಮ್ಮ ಕಣ್ಣುಗಳನ್ನು ತಾವೇ ನಂಬದಾದರು. ಆನಂದ ಒರವಶರಾಗಿ ಕುಣಿದಾಡಿದರು. ಗುರುಗಳನ್ನು ಅಪಾರ್ಥ ಮಾಡಿಕೊಂಡುದಕ್ಕೆ ರಾಜನು ಬಹುವಾಗಿ ಖೇದಿಸಿದನು. ಕ್ಷಮೆ ಬೇಡಿದನು. ಜನರೆಲ್ಲ ಕೊಂಡಾಡಿ ಜಯಧ್ವನಿ ಮಾಡಿ ನಮಸ್ಕರಿಸಿದರು. ಗುರುಗಳು ಎಲ್ಲರನ್ನೂ ಹರಸಿ ಸರ್ವಜನ ವಂದ್ಯರಾಗಿ ಭಕ್ತಿಪೂರ್ವಕ ಬೀಳ್ಕೊಂಡರು.


Spread the love

About Laxminews 24x7

Check Also

ಮತದಾನಕ್ಕೆ ಮೂರೇ ದಿನ ಬಾಕಿ: ಬೆಂಗಳೂರಿನಲ್ಲಿ ನಾಳೆ ಸಂಜೆಯಿಂದ ನಿಷೇಧಾಜ್ಞೆ

Spread the loveಲೋಕಸಭಾ ಚುನಾವಣೆ ಮತದಾನಕ್ಕೆ ಮೂರೇ ದಿನ ಬಾಕಿ: ಬೆಂಗಳೂರಿನಲ್ಲಿ ನಾಳೆ ಸಂಜೆಯಿಂದ ನಿಷೇಧಾಜ್ಞೆ ಜಾರಿ ಬೆಂಗಳೂರು: ಲೋಕಸಭಾ ಚುನಾವಣೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ