Breaking News

ಬರಪೀಡಿತ ತಾಲ್ಲೂಕುಗಳಲ್ಲಿ ಇರುವ ಏತ ನೀರಾವರಿ ಯೋಜನೆಗಳ ಮೂಲಕ ಕೆರೆ ತುಂಬಿಸುವಿಕೆಗೆ ಆದ್ಯತೆ ನೀಡಿ: ಅಜಯ್ ಸಿಂಗ್

Spread the love

ಬೆಂಗಳೂರು: ಬರಪೀಡಿತ ತಾಲ್ಲೂಕುಗಳಲ್ಲಿ  ಕುಡಿಯುವ ನೀರು, ಜಾನುವಾರುಗಳ ನೀರಿನ ಅಗತ್ಯ ಹಾಗೂ ಅಂತರ್ಜಲ ಮರುಪೂರಣಕ್ಕೆ ನೆರವಾಗುವ ನಿಟ್ಟಿನಲ್ಲಿ, ಪ್ರಸ್ತುತ ಇರುವ ಏತ ನೀರಾವರಿ ಯೋಜನೆಗಳು ಹಾಗೂ ಇತರೆ ಲಭ್ಯ ಮೂಲಗಳ ಮೂಲಕ ಸಾಧ್ಯವಿರುವ ಕೆರೆಗಳನ್ನು ತುಂಬಿಸುವುದಕ್ಕೆ ಮೊದಲ ಆದ್ಯತೆ ನೀಡಬೇಕು ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ. ಅಜಯ್ ಧರಂ ಸಿಂಗ್ ಅಧಿಕಾರಿಗಳಿಗೆ ಸೂಚಿಸಿದರು.

ಇಂದು ಬೆಂಗಳೂರಿನಲ್ಲಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಚಿವರು, ಬರ ಪರಿಸ್ಥಿತಿಯನ್ನು ಎದುರಿಸಲು ಇಲಾಖೆ ತಕ್ಷಣ ಕಾರ್ಯೋನ್ಮುಖವಾಗಬೇಕು ಎಂದು ಹೇಳಿದರು.

ಎಲ್ ನಿನೋ ಪರಿಣಾಮದಿಂದ ಈ ವರ್ಷ ರಾಜ್ಯದ ಬಹುತೇಕ ತಾಲ್ಲೂಕುಗಳಲ್ಲಿ ಮಳೆ ಕೊರತೆ ಉಂಟಾಗಿದ್ದು, ರಾಜ್ಯ ಸರ್ಕಾರ ಈಗಾಗಲೇ 101 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದೆ. ಇನ್ನೂ ಕೆಲವು ತಾಲ್ಲೂಕುಗಳಲ್ಲಿ ಬರ ಪರಿಸ್ಥಿತಿ ಕಂಡುಬರುತ್ತಿದ್ದು, ಅವುಗಳ ಕುರಿತೂ ಸರ್ಕಾರ ಶೀಘ್ರ ನಿರ್ಧಾರ ಕೈಗೊಳ್ಳಲಿದೆ ಎಂದು ತಿಳಿಸಿದರು.

ಬರಪೀಡಿತ ಪ್ರದೇಶಗಳಲ್ಲಿ ಕೆರೆಗಳಿಗೆ ನೀರು ತುಂಬಿಸುವುದು ಕೇವಲ ಜಲಸಂಗ್ರಹವಲ್ಲ; ಅದು ಅಂತರ್ಜಲ ಮರುಪೂರಣ, ಜಾನುವಾರುಗಳಿಗೆ ನೀರು ಹಾಗೂ ಸ್ಥಳೀಯ ಕುಡಿಯುವ ನೀರಿನ ಸಮಸ್ಯೆ ತಗ್ಗಿಸುವ ಪ್ರಮುಖ ಕ್ರಮ. ಏತ ನೀರಾವರಿ ಅಥವಾ ಇತರೆ ಮೂಲಗಳಿಂದ ಸಾಧ್ಯವಿರುವ ಕೆರೆಗಳಲ್ಲಿ ನೀರು ತುಂಬಿಸಲು ತಕ್ಷಣ ಕ್ರಮ ಕೈಗೊಳ್ಳುವಂತೆ ಸಚಿವರು ಸೂಚನೆ ನೀಡಿದರು.

ಸದ್ಯ ಕೆರೆಗಳಲ್ಲಿ ಸಂಗ್ರಹವಾಗಿರುವ ನೀರು ಅನಗತ್ಯವಾಗಿ ಹೊರಹೋಗದಂತೆ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಕೆರೆಗಳ ಸ್ಥಿತಿ, ನೀರು ತುಂಬಿಸುವ ಸಾಧ್ಯತೆ, ಲಭ್ಯ ಜಲಮೂಲ ಹಾಗೂ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಒಂದು ವಾರದೊಳಗೆ ಸಮಗ್ರ ವರದಿ ಸಲ್ಲಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಪ್ರಸ್ತುತ ಹಲವಾರು ನದಿಗಳಲ್ಲಿ ನೀರಿನ ಹರಿವು ಕಡಿಮೆಯಾಗುತ್ತಿದೆ. ನಮ್ಮ ಇಲಾಖೆಯ ಬ್ಯಾರೇಜು ಹಾಗೂ ಕಿಂಡಿ ಅಣೆಕಟ್ಟುಗಳಿಗೆ ಕೂಡಲೇ ಗೇಟ್‌ಗಳನ್ನು ಅಳವಡಿಸಬೇಕು. ಈ ಮೂಲಕ ನೀರಿನ ಹರಿವು ಕಡಿಮೆ ಆಗುತ್ತಿರುವ ಸಂಧರ್ಭದಲ್ಲಿ ಅಗತ್ಯ ನೀರನ್ನು ಸಂಗ್ರಹಿಸಲು ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಸಚಿವರು ಸೂಚನೆ ನೀಡಿದರು.

ಬರಪೀಡಿತ ಮತ್ತು ಓವರ್‌ ಎಕ್ಸ್‌ಪ್ಲಾಯಿಟೇಡ್‌ ಪ್ರದೇಶಗಳಲ್ಲಿ ಮರುಪೂರಣಕ್ಕೆ ವಿಶೇಷ ಒತ್ತು
ಬರಪೀಡಿತ ಹಾಗೂ ಅಂತರ್ಜಲ ಓವರ್‌ ಎಕ್ಸ್‌ಪ್ಲಾಯಿಟೇಡ್‌ ಪ್ರದೇಶಗಳಲ್ಲಿ ಮರುಪೂರಣ ಕಾರ್ಯಾಚರಣೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸಚಿವರು ಹೇಳಿದರು.

ಏತ ನೀರಾವರಿ ಮೂಲಕ ನೀರು ತುಂಬಿಸುವ ಕೆರೆಗಳು, ಚೆಕ್‌ಡ್ಯಾಂಗಳು ಹಾಗೂ ಬ್ಯಾರೇಜ್‌ಗಳಲ್ಲಿ ರಿಚಾರ್ಜ್ ಶಾಫ್ಟ್‌ಗಳನ್ನು ಅಳವಡಿಸುವ ವಿಶೇಷ ಕಾರ್ಯಾಚರಣೆ ಕೈಗೊಳ್ಳಬೇಕು ಎಂದು ಸೂಚಿಸಿದರು.

‘ಟೀಮ್ ಕರ್ನಾಟಕ’ ಸ್ಪೂರ್ತಿಯಲ್ಲಿ ಕಾರ್ಯನಿರ್ವಹಿಸಿ
ಮುಖ್ಯಮಂತ್ರಿಗಳ ಆಶಯದಂತೆ ‘ಟೀಮ್ ಕರ್ನಾಟಕ’ ಸ್ಪೂರ್ತಿಯಲ್ಲಿ ಇಲಾಖೆಯ ಎಲ್ಲ ಹಂತದ ಅಧಿಕಾರಿಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಡಾ. ಅಜಯ್ ಧರಂ ಸಿಂಗ್ ಹೇಳಿದರು.

ಬಾಕಿ ಇರುವ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವುದರ ಜೊತೆಗೆ, ಬರ ಪರಿಸ್ಥಿತಿಗೆ ಸ್ಪಂದಿಸುವ ಯೋಜನೆಗಳಿಗೆ ಆದ್ಯತೆ ನೀಡಿ ಫಲಿತಾಂಶಾಧಾರಿತವಾಗಿ ಕೆಲಸ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ದಿ ಇಲಾಖೆಯ ಕಾರ್ಯದರ್ಶಿಗಳಾದ ರಾಜೇಶ್‌ ಅಮ್ಮಿನಬಾವಿ, ಸಚಿವರ ಆಪ್ತ ಕಾರ್ಯದರ್ಶಿಗಳಾದ ಮಲ್ಲಿಕಾರ್ಜುನರೆಡ್ಡಿ ಪಾಟೀಲ್‌ , ದಕ್ಷಿಣ ವಲಯದ ಮುಖ್ಯ ಅಭಿಯಂತರರಾದ ಸತೀಶ್‌ ಕುಮಾರ್‌, ಉತ್ತರ ವಿಭಾಗದ ಮುಖ್ಯ ಅಭಿಯಂತರರಾದ ಆನಂದ್‌ ಸೇರಿದಂತೆ ಎಲ್ಲಾ ವೃತ್ತಗಳ ಅಧೀಕ್ಷಕ ಅಭಿಯಂತರರು ಹಾಗೂ ವಿಭಾಗಗಳ ಕಾರ್ಯಪಾಲಕ ಅಭಿಯಂತರರು, ಎಇಇಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.


Spread the love

About Laxminews 24x7

Check Also

ಟ್ರೆಂಡ್‌ ಗೀಳಿಗೆ ಬಿದ್ದು ಟ್ರ್ಯಾಪ್‌ ಆಗ್ಬೇಡಿ – 80s ಫೋಟೊ ಟ್ರೆಂಡ್‌ ಬಗ್ಗೆ ಪೊಲೀಸರ ಎಚ್ಚರಿಕೆ!

Spread the loveನೆಲಮಂಗಲ: ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ಟ್ರೆಂಡ್ ಆಗುತ್ತಿರುವ 80ರ ದಶಕದ ಫೋಟೋ ಎಡಿಟಿಂಗ್ ಕುರಿತು ಸಾರ್ವಜನಿಕರು ಎಚ್ಚರಿಕೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ