ಬೆಂಗಳೂರು : ತಮಿಳುನಾಡಿಗೆ 3500 ಕ್ಯೂಸೆಕ್ ನೀರು ಬಿಡುವಂತೆ ಕಾವೇರಿ ನದಿ ನೀರು ಹಂಚಿಕೆ ಪ್ರಾಧಿಕಾರ ಆದೇಶ ಮಾಡಿರೋದು ರಾಜ್ಯ ಸರ್ಕಾರದ ವೈಫಲ್ಯ. ಕೂಡಲೇ ಸರ್ವ ಪಕ್ಷಗಳ ಸಭೆ ಕರೆಯಬೇಕೆಂದು ವಿಪಕ್ಷ ನಾಯಕ ಅಶೋಕ್ ಆಗ್ರಹಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾವೇರಿ ವಿಚಾರದಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಟೀಕಿಸಿದರು. ಸಿಎಂ ಡಿಕೆ ಶಿವಕುಮಾರ್ ರಾಜ್ಯದ ಪರವಾಗಿ ಸರಿಯಾಗಿ ವಾದ ಮಾಡಿಲ್ಲ. ನೀರಾವರಿ ಸಚಿವ ರಾಮಲಿಂಗಾ ರೆಡ್ಡಿ ಕೂಡ ಈ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಬರ ಪರಿಸ್ಥಿತಿ ಹೆಚ್ಚಾಗಿದೆ. ಮಂಡ್ಯದಲ್ಲಿ ಕಬ್ಬು ಒಣಗುತ್ತಿದೆ. ಡ್ಯಾಂಗಳಲ್ಲಿ ನೀರಿನ ಮಟ್ಟ ಕುಸಿದಿದೆ. ಇಂತಹ ಸಂದರ್ಭದಲ್ಲಿ ತಮಿಳುನಾಡಿಗೆ ನೀರು ಬಿಡುವ ಆದೇಶ ರಾಜ್ಯದ ಜನರಿಗೆ ಅನ್ಯಾಯ ಎಂದು ಹೇಳಿದರು. ಬೆಂಗಳೂರು, ಮಂಡ್ಯ ಹಾಗೂ ಮೈಸೂರು ಭಾಗದ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಲಿದೆ. ಆದರೂ ಸರ್ಕಾರ ರಾಜ್ಯದ ಹಿತಾಸಕ್ತಿ ಕಾಪಾಡಿಲ್ಲ ಎಂದು ಕಿಡಿಕಾರಿದರು.
ತಮಿಳುನಾಡಿನಲ್ಲಿ ಕಾಂಗ್ರೆಸ್ ಬೆಂಬಲಿತ ಸರ್ಕಾರ ಇರುವುದರಿಂದ ಹೈಕಮಾಂಡ್ ಒತ್ತಡಕ್ಕೆ ರಾಜ್ಯ ಸರ್ಕಾರ ಮಣಿದಿದೆ ಎಂಬ ಅನುಮಾನ ವ್ಯಕ್ತಪಡಿಸಿದರು. ರೈತರು ಈಗಾಗಲೇ ಪ್ರತಿಭಟನೆ ನಡೆಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಮುಖ್ಯಮಂತ್ರಿ ಸಂಪುಟ ವಿಸ್ತರಣೆ ಹಾಗೂ ಇತರೆ ವಿಚಾರಗಳಲ್ಲಿ ಬ್ಯುಸಿಯಾಗಿದ್ದಾರೆ ಎಂದು ಟೀಕಿಸಿದರು.
ಕೂಡಲೇ ಸರ್ವಪಕ್ಷ ಸಭೆ ಕರೆದು ಕಾನೂನು ತಜ್ಞರೊಂದಿಗೆ ಚರ್ಚೆ ನಡೆಸಬೇಕು. ಕಾವೇರಿ ಪ್ರಾಧಿಕಾರದ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಬೇಕು. ತಮಿಳುನಾಡಿಗೆ ನೀರು ಬಿಡಬಾರದು ಎಂದು ಆಗ್ರಹಿಸಿದರು. ತಮಿಳುನಾಡು ಮುಖ್ಯಮಂತ್ರಿ ವಿಜಯ್ ಕರ್ನಾಟಕಕ್ಕೆ ಬಂದರೂ ಕಾಟಾಚಾರದ ಸಭೆ ನಡೆಸುವುದರಿಂದ ಯಾವುದೇ ಪ್ರಯೋಜನವಿಲ್ಲ. ಮೇಕೆದಾಟು ಯೋಜನೆಗೂ ಅವರು ವಿರೋಧ ವ್ಯಕ್ತಪಡಿಸಲಿದ್ದಾರೆ ಎಂದು ಹೇಳಿದರು.
ಈ ಆದೇಶ ಕರ್ನಾಟಕಕ್ಕೆ ಮರಣ ಶಾಸನದಂತಾಗಿದೆ. ಇದರ ಸಂಪೂರ್ಣ ಹೊಣೆ ಕಾಂಗ್ರೆಸ್ ಸರ್ಕಾರದ ಮೇಲಿದೆ ಎಂದು ಆರ್. ಅಶೋಕ್ ಆರೋಪಿಸಿದರು. ಕರ್ನಾಟಕದ ಪರ ವಾದಿಸುತ್ತಿದ್ದ ಹಿರಿಯ ವಕೀಲ ಕಾತರಕಿ ಅವರನ್ನು ಸಭೆಯಿಂದ ಹೊರಗೆ ಕಳುಹಿಸಿದ್ದು ಏಕೆ ಎಂದು ಪ್ರಶ್ನಿಸಿದರು. ಅವರಿಗೆ ಅವಮಾನ ಮಾಡಿದ್ದರಿಂದಲೇ ಇಂತಹ ಪರಿಸ್ಥಿತಿ ಉಂಟಾಗಿದೆ ಎಂಬ ಅನುಮಾನ ವ್ಯಕ್ತಪಡಿಸಿದರು.
ಮೇಕೆದಾಟು ಯೋಜನೆಗೆ ಕೂಡಲೇ 10 ಸಾವಿರ ಕೋಟಿ ರೂ
ಇದೇ ವೇಳೆ ಮೇಕೆದಾಟು ಯೋಜನೆ ಕುರಿತು ಮಾತನಾಡಿದ ಅವರು, ಪಕ್ಕದ ರಾಜ್ಯದ ಅನುಮತಿ ಅಗತ್ಯವಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ ಎಂದರು. ಹೀಗಾಗಿ ರಾಜ್ಯ ಸರ್ಕಾರ ಕೂಡಲೇ ಮೇಕೆದಾಟು ಯೋಜನೆಗೆ 10 ಸಾವಿರ ಕೋಟಿ ರೂ. ಬಿಡುಗಡೆ ಮಾಡಿ ಕಾಮಗಾರಿ ಆರಂಭಿಸಬೇಕು ಎಂದು ಒತ್ತಾಯಿಸಿದರು.
ತಮಿಳುನಾಡು ಮುಖ್ಯಮಂತ್ರಿ ವಿಜಯ್ ಜೊತೆ ಮಾತುಕತೆ ನಡೆಸುವ ಬದಲು ಯೋಜನೆ ಆರಂಭಿಸಲು ಕ್ರಮ ಕೈಗೊಳ್ಳಬೇಕು. ʼನಮ್ಮ ನೀರು ನಮ್ಮ ಹಕ್ಕುʼ ಎಂದು ಹೇಳಿದ್ದ ಕಾಂಗ್ರೆಸ್ ಈಗ ಅದನ್ನು ಮರೆತಿದೆಯೇ ಎಂದು ಪ್ರಶ್ನಿಸಿದರು.
ಬಿಡದಿ ಕಸ ವಿಲೇವಾರಿ ಯೋಜನೆಯ ಟೆಂಡರ್ ಅನ್ನು 60 ವರ್ಷಗಳಿಗೆ ನೀಡಿರುವುದನ್ನೂ ಪ್ರಶ್ನಿಸಿದರು. ವಿಶ್ವದಲ್ಲೇ ಬ್ಲ್ಯಾಕ್ಲಿಸ್ಟ್ ಆಗಿರುವ ವ್ಯಕ್ತಿಗೆ ಟೆಂಡರ್ ನೀಡಲಾಗಿದೆ ಎಂದು ಆರೋಪಿಸಿದ ಅವರು, ಇದರ ಬಗ್ಗೆ ಶೀಘ್ರದಲ್ಲೇ ದಾಖಲೆಗಳನ್ನು ಬಿಡುಗಡೆ ಮಾಡುವುದಾಗಿ ಹೇಳಿದರು. ಅಧಿಕಾರಕ್ಕೆ ಬಂದರೆ ಇಂತಹ ಎಲ್ಲ ಅಕ್ರಮಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ ಎಂದು ಆರ್. ಅಶೋಕ್ ಹೇಳಿದರು.
Laxmi News 24×7