Breaking News
Home / Uncategorized / ನಾಳೆ ಬೆಳಿಗ್ಗೆ 5.30ಕ್ಕೆ ತಿಹಾರ್ ಜೈಲಿನಲ್ಲಿ ನಿರ್ಭಯಾ ಹಂತಕರಿಗೆ ಗಲ್ಲು ಪಕ್ಕಾ..!

ನಾಳೆ ಬೆಳಿಗ್ಗೆ 5.30ಕ್ಕೆ ತಿಹಾರ್ ಜೈಲಿನಲ್ಲಿ ನಿರ್ಭಯಾ ಹಂತಕರಿಗೆ ಗಲ್ಲು ಪಕ್ಕಾ..!

Spread the love

ನವದೆಹಲಿ, ಮಾ.19- ಇಡೀ ದೇಶವನ್ನೇ ಬೆಚ್ಚಿಬೀಳಿಸಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದ ಅರೆ ವೈದ್ಯಕೀಯ ವಿದ್ಯಾರ್ಥಿನಿ ನಿರ್ಭಯಾ ಮೇಲಿನ ಸಾಮೂಹಿಕ ಅತ್ಯಾಚಾರ ಮತ್ತು ಭೀಕರ ಕೊಲೆ ಪ್ರಕರಣದಲ್ಲಿ ದೋಷಿಗಳಾಗಿರುವ ನಾಲ್ವರಿಗೆ ನಾಳೆ ಬೆಳಗ್ಗೆ 5.30ಕ್ಕೆ ದೆಹಲಿಯ ಅತಿ ಭದ್ರತೆಯ ತಿಹಾರ್ ಜೈಲಿನಲ್ಲಿ ಗಲ್ಲಿಗೇರಿಸಲು ಮುಹೂರ್ತ ನಿಗದಿಯಾಗಿದೆ.

ದೇಶದ ಜನತೆ ಏಳು ವರ್ಷಗಳಿಂದ ನಿರೀಕ್ಷಿಸುತ್ತಿದ್ದ ಕಾಲ ಕೊನೆಗೂ ಸನ್ನಿಹಿತವಾಗಿದೆ.ದೆಹಲಿ ಹೈಕೋರ್ಟ್‍ನ ಪಟಿಯಾಲ ಪೀಠ ಈ ಸಂಬಂಧ ದೋಷಿಗಳು ಸಲ್ಲಿಸಿದ್ದ ಅರ್ಜಿಗಳನ್ನು ಸಾರಾ ಸಗಟಾಗಿ ವಜಾ ಗೊಳಿಸುವುದರೊಂದಿಗೆ ನಾಲ್ವರು ಅಪರಾಧಿಗಳಿಗೆ ಗಲ್ಲುಶಿಕ್ಷೆ ಜಾರಿ ಅಧಿಕೃತಗೊಂಡಿದೆ.

ಇದಕ್ಕಾಗಿ ಜೈಲಿನಲ್ಲಿ ಅಂತಿಮ ಸಿದ್ಧತೆಗಳು ನಡೆಯುತ್ತಿದ್ದು, ಹ್ಯಾಂಗ್‍ಮ್ಯಾನ್ ಸೇರಿದಂತೆ ಜೈಲಿನ ಸಿಬ್ಬಂದಿ ಪೂರ್ವ ತಯಾರಿ ನಡೆಸುತ್ತಿದ್ದಾರೆ. ಈ ಮಧ್ಯೆ ಕೃತ್ಯ ನಡೆದ ಸಂದರ್ಭದಲ್ಲಿ ನಾನು ಅಪ್ರಾಪ್ತನಾಗಿದ್ದೆ ಎಂಬ ಕಾರಣವೊಡ್ಡಿ ದೋಷಿಗಳಲ್ಲಿ ಒಬ್ಬನಾದ ಪವನ್ ಗುಪ್ತ ಸಲ್ಲಿಸಿದ್ದ ಕ್ಯುರೇಟಿವ್ (ಪರಿಹಾರಾತ್ಮಕ) ಅರ್ಜಿಯನ್ನು ಸುಪ್ರೀಂಕೋರ್ಟ್ ಇಂದು ವಜಾಗೊಳಿಸಿದೆ. ಇದರಿಂದಾಗಿ ದೋಷಿಗಳಿಗೆ ಮರಣ ದಂಡನೆ ವಿಧಿಸಲು ಇದ್ದ ಮತ್ತೊಂದು ತೊಡಕು ನಿವಾರಣೆಯಾದಂತಾಗಿದೆ.

ಈಗಾಗಲೇ ನ್ಯಾಯಾಲಯದಲ್ಲಿ ದಾಖಲಾಗಿದ್ದ ಎಲ್ಲ ಅರ್ಜಿಗಳು ವಜಾಗೊಂಡಿರುವ ಹಿನ್ನೆಲೆಯಲ್ಲಿ ಅಪರಾಧಿಗಳಾದ ಅಕ್ಷಯ್ ಸಿಂಗ್, ಪವನ್ ಗುಪ್ತ, ವಿನಯ್ ಶರ್ಮ ಹಾಗೂ ಮುಖೇಶ್ ಸಿಂಗ್ ಅವರುಗಳನ್ನು ನಾಳೆ ಗಲ್ಲಿಗೇರಿಸುವುದು ಖಚಿತಪಟ್ಟಿದೆ.

ಗಲ್ಲುಶಿಕ್ಷೆಗೊಳಗಾಗಿರುವ ಒಬ್ಬನ ದಯಾ ಅರ್ಜಿ ಇನ್ನೂ ಇತ್ಯರ್ಥವಾಗಿಲ್ಲ. ಹೀಗಾಗಿ ಮರಣ ದಂಡನೆ ರದ್ದುಗೊಳಿಸಬೇಕು ಎಂದು ಅಪರಾಧಿಗಳ ಪರ ವಕೀಲ ಎ.ಪಿ.ಸಿಂಗ್ ಸಲ್ಲಿಸಿದ್ದ ಅರ್ಜಿಯನ್ನು ಹೆಚ್ಚುವರಿ ನ್ಯಾಯಾಧೀಶ ಧರ್ಮೇಂದ್ರ ರಾಣಾ ಅವರು ವಜಾಗೊಳಿಸಿರುವುದರಿಂದ ಆರೋಪಿಗಳಿಗೆ ಗಲ್ಲುಶಿಕ್ಷೆ ಖಚಿತಪಟ್ಟಿದೆ. ಈಗಾಗಲೇ ತಿಹಾರ್ ಜೈಲಿನಲ್ಲಿ ನಿರ್ಭಯಾ ಹಂತಕರನ್ನು ಗಲ್ಲಿಗೇರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ನಿನ್ನೆಯಷ್ಟೆ ಹ್ಯಾಂಗ್‍ಮ್ಯಾನ್ ಗಲ್ಲಿಗೇರಿಸುವ ಪ್ರಾಯೋಗಿಕ ಪ್ರಾತ್ಯಕ್ಷಿಕೆ ನಡೆಸಿದ್ದರು.

ನಾಳೆ ಹತ್ಯಾಚಾರಿಗಳನ್ನು ಗಲ್ಲಿಗೇರಿಸುತ್ತಿರುವುದರಿಂದ ಅವರ ಎಲ್ಲ ಆಸೆಗಳನ್ನೂ ಜೈಲಿನ ಅಧಿಕಾರಿಗಳು ಈಡೇರಿಸಬೇಕೆಂಬ ನಿಯಮವಿದೆ. ಆಹಾರ, ಬಟ್ಟೆ, ಪುಸ್ತಕ ಸೇರಿದಂತೆ ಯಾವುದನ್ನೂ ಬಯಸಿದರೂ ಅಧಿಕಾರಿಗಳು ಪೂರೈಸುತ್ತಾರೆ. ಆದರೆ, ಸಂಬಂಧಿಕರನ್ನು ಮಾತ್ರ ಭೇಟಿ ಮಾಡಲು ಅವಕಾಶವಿರುವುದಿಲ್ಲ.

# ಮುಖೇಶ್ ಅರ್ಜಿ ವಜಾ:
ಗಲ್ಲುಶಿಕ್ಷೆ ವಿಳಂಬಕ್ಕಾಗಿ ನಾನಾ ತಂತ್ರ-ಕುತಂತ್ರಗಳನ್ನು ಮಾಡುತ್ತಿರುವ ನಾಲ್ವರು ಅಪರಾಧಿಗಳಲ್ಲಿ ಮುಖೇಶ್‍ಸಿಂಗ್ ಇಂದು ಬೆಳಗ್ಗೆ ಮತ್ತೆ ಸುಪ್ರೀಂಕೋರ್ಟ್ ಮೊರೆ ಹೋಗಿದ್ದ. ಆದರೆ, ಆತನ ಅರ್ಜಿಯನ್ನು ಮಾನ್ಯ ಮಾಡಲು ಸುಪ್ರೀಂ ನಿರಾಕರಿಸಿತು.

ಈ ಕೃತ್ಯ ನಡೆದ ಸಂದರ್ಭದಲ್ಲಿ ತಾನು ದೆಹಲಿಯಲ್ಲಿರಲಿಲ್ಲ. ರಾಜಸ್ಥಾನದಲ್ಲಿದ್ದೆ. ಹೀಗಾಗಿ ನನ್ನ ಮರಣ ದಂಡನೆ ಶಿಕ್ಷೆಯನ್ನು ರದ್ದುಗೊಳಿಸಬೇಕೆಂದು ಕೋರಿ ಮುಖೇಶ್ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ನ್ಯಾಯಾಲಯವೊಂದು ನಿನ್ನೆ ವಜಾಗೊಳಿಸಿತ್ತು. ಈ ಆದೇಶದ ವಿರುದ್ಧ ಮುಖೇಶ್ ಸಿಂಗ್ ಇಂದು ಸುಪ್ರೀಂ ಮೊರೆ ಹೋಗಿದ್ದಾನೆ.

ಕೃತ್ಯ ನಡೆದ ದಿನದಂದು ನಾನು ದೆಹಲಿಯಲ್ಲಿರಲಿಲ್ಲ ಎಂಬ ಮುಖೇಶ್‍ಸಿಂಗ್ ಅರ್ಜಿಯನ್ನು ಈಗಾಗಲೇ ವಿಚಾರಣಾ ನ್ಯಾಯಾಲಯ ಮತ್ತು ದೆಹಲಿ ಕೋರ್ಟ್ ವಜಾಗೊಳಿಸಿದೆ. ಮುಖೇಶ್‍ಸಿಂಗ್ ಸಲ್ಲಿಸಿರುವ ಮೇಲ್ಮನವಿ ಅರ್ಜಿಯನ್ನು ಸುಪ್ರೀಂ ಇಂದು ಕೈಗೆತ್ತಿಕೊಳ್ಳಲಿದ್ದು, ಮಧ್ಯಾಹ್ನದ ನಂತರ ತೀರ್ಪು ನೀಡಲಿದೆ. ಸರ್ವೋಚ್ಛ ನ್ಯಾಯಾಲಯದಲ್ಲಿಯೂ ಕೂಡ ಮುಖೇಶ್ ಅರ್ಜಿ ವಜಾಗೊಂಡಿದೆ.


Spread the love

About Laxminews 24x7

Check Also

‘ಲೋಕಾ’ ದಾಳಿಯಲ್ಲಿ ಪತ್ತೆಯಾಯ್ತು ಅಧಿಕಾರಿಯ ಆಕ್ರಮ ಸಂಪತ್ತು;17 ಸೈಟ್, 27 ಎಕರೆ ಕೃಷಿ ಭೂಮಿ:

Spread the love ಕೊಪ್ಪಳ: ಕೊಪ್ಪಳದ ಕೃಷಿ ಇಲಾಖೆ ಉಪ ನಿರ್ದೇಶಕ ಸಹದೇವ ಯರಗುಪ್ಪ ಅವರಿಗೆ ಸೇರಿದ ಮನೆ ಮತ್ತು ಕಚೇರಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ