ಬೆಂಗಳೂರು : ಕೊರೋನಾ ತಂಡದೊಡ್ಡಿರುವ ಆರ್ಥಿಕ ಸಂಕಷ್ಟವನ್ನು ಸರಿದೂಗಿಸಲು ಎಂಎಲ್‌ಎ, ಎಂಎಲ್ಸಿಗಳ ವೇತನ ಕಡಿತಕ್ಕೆ ಸರಕಾರ ಚಿಂತನೆ ನಡೆಸಿದೆ. ಪ್ರತಿಪಕ್ಷ ನಾಯಕರ ಜೊತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ.
ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಜೊತೆ ದೂರವಾಣಿ ಮೂಲಕ ಮಾತನಾಡಿದ ಸಿಎಂ, ಎಲ್ಲಾ ಶಾಸಕರ, ಪ್ರತಿಪಕ್ಷದ ನಾಯಕರ, ಪರಿಷತ್ ಸದಸ್ಯರ ವೇತನ ಕಡಿತ ಮಾಡೋ ಬಗ್ಗೆ ಮಾತುಕತೆ ನಡೆಸಿದರು.
ಶೇ. 30ರಷ್ಟು ವೇತನ ಕಡಿತ ಮಾಡೋ ಬಗ್ಗೆ ಮಾತುಕತೆ ನಡೆಸಲಾಗಿದೆ.
ಕೊರೊನಾ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಆರ್ಥಿಕ ತೊಂದರೆಯಾಗುತ್ತಿದೆ. ಸರ್ಕಾರಕ್ಕೆ ಬರಬೇಕಾದ ತೆರಿಗೆ ಸಂಪೂರ್ಣ ನಿಂತಿದೆ. ಹೀಗಾಗಿ ಜನಪ್ರತಿನಿಧಿಗಳ ವೇತನ ಕಡಿತದ ಬಗ್ಗೆ ಸಿಎಂ ಪ್ರಸ್ತಾಪಿಸಿದರು. ಇದಕ್ಕೆ ಪ್ರತಿಪಕ್ಷದ ನಾಯಕರು ಸಹ ಸಮ್ಮತಿ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಶಾಸಕರ ವೇತನ ಕಡಿತದ ಬಗ್ಗೆ ಸರ್ಕಾರ ನಿರ್ಧಾರ ಕೈಗೊಂಡಿದೆ.
ಇದೇ ವೇಳೆ ಯಾವುದೇ ಕಾರಣಕ್ಕೂ ಸದ್ಯದ ಪರಿಸ್ಥಿತಿಯಲ್ಲಿ ಸರ್ಕಾರಿ ನೌಕರರ ವೇತನ ಕಡಿತ ಮಾಡದಿರಲು ಸರ್ಕಾರ ನಿರ್ಧರಿಸಿದೆ ಎಂದು ಸಿಎಂ ಕಚೇರಿ ಮೂಲಗಳು ತಿಳಿಸಿವೆ.ಕೇಂದ್ರ ಸರಕಾರ ಸೇರಿದಂತೆ ನಾನಾ ರಾಜ್ಯಗಳು ಈ ಕ್ರಮ ಅನುಸರಿಸಿದ್ದು ಇದನ್ನು ರಾಜ್ಯದಲ್ಲಿಯೂ ಅನುಸರಣೆಗೆ ತರುವುದು ಸರಕಾರದ ಹವಣಿಕೆಯಾಗಿದೆ.
ಈಗಾಗಲೇ ಕೇಂದ್ರ ಸರಕಾರದ ತೀರ್ಮಾನಿಸಿರುವಂತೆ ರಾಜ್ಯದ ಜನಪ್ರತಿನಿಧಿಗಳ ವೇತನದಲ್ಲಿಯೂ ಶೇ. 30 ಕಡಿತ ಮಾಡುವುದು ಸರಕಾರದ ಲೆಕ್ಕಾಚಾರವಾಗಿದೆ. ಸರಕಾರದ ಈ ಚಿಂತನೆಗೆ ಪ್ರತಿಪಕ್ಷ ಕಾಂಗ್ರೆಸ್ ಸಕಾರಾತ್ಮಕವಾಗಿ ಸ್ಪಂದಿಸಿದೆ. ಜೊತೆಗೆ ಆದಾಯ ಮೂಲಗಳನ್ನು ಹೆಚ್ಚಿಸಿಕೊಳ್ಳಲು ಇತರ ಯೋಜನೆ, ಕಾಮಗಾರಿಗಳನ್ನು ಸ್ಥಗಿತಗೊಳಿಸುವಂತೆಯೂ ಸೂಚಿಸಿದೆ, ಈ ಚಿಂತನೆಯ ಬಗ್ಗೆ ಸಿಎಂ ಅವರು ನನ್ನ ಅಭಿಪ್ರಾಯ ಕೇಳಿದ್ದರು. ನೀವು ಸಂಬಳ ಕಡಿತ ಮಾಡಿ, ನಿಮ್ಮ ನಿರ್ಧಾರ ಸರಿಯಾಗಿದೆ, ಶಾಸಕರು ಇದಕ್ಕೆ ಬೆಂಬಲ ನೀಡುತ್ತಾರೆ ಎಂದು ಹೇಳಿದ್ದಾಗಿ ಸಿದ್ದರಾಮಯ್ಯ ಟ್ವೀಟಿಸಿದ್ದಾರೆ.
ಇನ್ನು ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್ ಅವರೂ ಸಹ ಸರಕಾರ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧ ಎಂದಿದ್ದಾರೆ. ಗುರುವಾರ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತ ತೀರ್ಮಾನ ಹೊರಬೀಳುವ ನಿರೀಕ್ಷೆ ಇದೆ.
ಈ ಮದ್ಯೆ ರಾಜ್ಯದ ಖಜಾನೆಯನ್ನು ಬರಿದುಮಾಡುತ್ತಿರುವ ಲಾಕ್‌ಡೌನ್ ವಿಸ್ತರಣೆ ಅಥವಾ ಸಡಿಲಿಕೆ ಬಗ್ಗೆಯೂ ಸಂಪುಟ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಯುವ ಸಾಧ್ಯತೆ ಇದೆ.
ರಾಜ್ಯದಲ್ಲಿ ಲಾಕ್‌ಡೌನ್ ವಿಸ್ತರಣೆ ಬಗ್ಗೆ ಸಮಾಲೋಚಿಸಿರುವ ಕಾರ್‍ಯಪಡೆ ಅಧಿಕಾರಿಗಳು ಮತ್ತು ವೈದ್ಯರು ಅಪಾಯದ ಪ್ರದೇಶಗಳಲ್ಲಿ ಮುಮದುವರಿಕೆಗೆ ಶಿಫಾರಸು ಮಾಡಿದ್ದಾರೆ. ಇಡೀ ರಾಜ್ಯದಲ್ಲಿ ಲಾಕ್‌ಡೌನ್ ಅವಶ್ಯವಿಲ್ಲ. ಆದರೆ, ಹೆಚ್ಚು ಪ್ರಕರಣಗಳು ವರದಿಯಾಗುವ ಜಿಲ್ಲೆಗಳಲ್ಲಿ ನಿರ್ಬಂಧ ಮುಂದುವರೆಸುವುದು ಉತ್ತಮ ಎಂದು ಕಾರ್‍ಯಪಡೆ ಶಿಫಾರಸು ಮಾಡಿದೆ ಎನ್ನಲಾಗಿದೆ.
ರಾಜ್ಯದಲ್ಲಿ ಈವರೆಗೆ 181 ಜನ ಕೊರೋನಾ ಸೋಂಕಿತರು ಇದ್ದು ಅವರ ಪೈಕಿ 28 ಮಂದಿ ಸಂಪೂರ್ಣ ಗುಣಮುಖರಾಗಿದ್ದಾರೆ. ಈ ಮಾರಿಗೆ ರಾಜ್ಯದ ಆರು ಮಂದಿ ಮೃತರಾಗಿದ್ದಾರೆ.