ಬೆಂಗಳೂರು: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಇಂದು ಗದ್ದುಗೆಗೇರುತ್ತಿದ್ದು, ಅವರ ಜೊತೆಗೆ ಒಟ್ಟು 13 ಮಂದಿ ಶಾಸಕರು ಸಚಿವರಾಗಿ ಪ್ರತಿಜ್ಞಾವಿಧಿ ಸ್ವೀಕರಿಸಲಿದ್ದಾರೆ.
ಸಂಪುಟ ರಚನೆಯ ಆರಂಭದಿಂದಲೂ ತೀವ್ರ ಕುತೂಹಲ ಮೂಡಿಸಿದ್ದ ಉಪಮುಖ್ಯಮಂತ್ರಿ (DCM) ಹುದ್ದೆಯ ಸಸ್ಪೆನ್ಸ್‌ಗೆ ಕೊನೆಗೂ ತೆರೆ ಬಿದ್ದ. ಆ ಮೂಲಕ ಹೈಕಮಾಂಡ್ ಹಿರಿಯ ನಾಯಕನ ಅನುಭವಕ್ಕೆ ದೊಡ್ಡ ಮನ್ನಣೆ ನೀಡಿದೆ.
ಈ ಬಾರಿಯ ಸಂಪುಟ ರಚನೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ (Congress High Command) ಅತ್ಯಂತ ನಾಜೂಕಾದ ನಡೆ ಇಟ್ಟಿದೆ. ಇಂದು ಪ್ರಮಾಣವಚನ ಸ್ವೀಕರಿಸಲಿರುವ ಒಟ್ಟು 14 ನಾಯಕರ ಪೈಕಿ 12 ಮಂದಿ ನಾಯಕರು ಈ ಹಿಂದಿನ ಸಿದ್ದರಾಮಯ್ಯ ಅವರ ಸಂಪುಟದಲ್ಲೂ ಸಚಿವರಾಗಿ ಕಾರ್ಯನಿರ್ವಹಿಸಿದ ಅಪಾರ ಅನುಭವ ಹೊಂದಿದ್ದಾರೆ. ಆಡಳಿತ ಯಂತ್ರಕ್ಕೆ ಯಾವುದೇ ಹಿನ್ನಡೆಯಾಗದಂತೆ ಮುನ್ನಡೆಸಲು ಈ ಹಿರಿಯ ನಾಯಕರನ್ನು ಯಥಾವತ್ತಾಗಿ ಮುಂದುವರೆಸಲಾಗಿದೆ.
ಹಳೇ ಸಚಿವರ ದಂಡಿನ ಮಧ್ಯೆ ಇಬ್ಬರು ಪ್ರಮುಖ ನಾಯಕರು ಈ ಬಾರಿ ಹೊಸದಾಗಿ ಮಂತ್ರಿ ಪಟ್ಟವನ್ನು ಅಲಂಕರಿಸುತ್ತಿರುದ್ದಾರೆ. ವಿಧಾನಸಭಾ ಸ್ಪೀಕರ್ ಆಗಿ ಅತ್ಯಂತ ಯಶಸ್ವಿಯಾಗಿ ಕಾರ್ಯನಿರ್ವಹಿಸಿ ಸರ್ಕಾರದ ಸಚಿವರಿಗೆ ಬಿಸಿ ಮುಟ್ಟಿಸಿದ್ದ ಯು.ಟಿ. ಖಾದರ್(U. T. Khader) ಅವರು ಈ ಬಾರಿ ಸ್ಪೀಕರ್ ಸ್ಥಾನದಿಂದ ನೇರವಾಗಿ ಸಚಿವ ಸಂಪುಟಕ್ಕೆ ಎಂಟ್ರಿ ಕೊಡುತ್ತಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ ಅವರ ಪುತ್ರ ಹಾಗೂ ಪ್ರಸ್ತುತ ಪರಿಷತ್ ಸದಸ್ಯರಾಗಿರುವ ಯತೀಂದ್ರ ಸಿದ್ದರಾಮಯ್ಯ(Yathindra Siddaramaiah) ಅವರು ಈ ಬಾರಿ ಮೊದಲ ಬಾರಿಗೆ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಮೂಲಕ ರಾಜ್ಯ ರಾಜಕಾರಣದ ಮುಂಚೂಣಿಗೆ ಬರಲಿದ್ದಾರೆ.
14 ಮಂದಿಯಿಂದ ಪ್ರಮಾಣವಚನ
ಡಿ.ಕೆ. ಶಿವಕುಮಾರ್, ಜಿ. ಪರಮೇಶ್ವರ್, ಕೆ.ಎಚ್. ಮುನಿಯಪ್ಪ, ಕೆ.ಜೆ. ಜಾರ್ಜ್, ಎಂ.ಬಿ. ಪಾಟೀಲ್, ರಾಮಲಿಂಗಾರೆಡ್ಡಿ, ಸತೀಶ್ ಜಾರಕಿಹೊಳಿ, ಕೃಷ್ಣಬೈರೇಗೌಡ, ಪ್ರಿಯಾಂಕ್ ಖರ್ಗೆ, ಯು.ಟಿ. ಖಾದರ್, ಈಶ್ವರ್ ಖಂಡ್ರೆ, ಯತೀಂದ್ರ ಸಿದ್ದರಾಮಯ್ಯ, ಬೈರತಿ ಸುರೇಶ್, ಶರಣಪ್ರಕಾಶ್ ಪಾಟೀಲ್ ಇಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಯಾರಿಗೆ ಯಾವ ಖಾತೆ ಸಾಧ್ಯತೆ?
ಖಾತೆ ಹಂಚಿಕೆಯ ಅಧಿಕೃತ ವಿವರ ಇನ್ನೂ ಲಭ್ಯವಾಗಿಲ್ಲ. ಪ್ರಮಾಣವಚನ ಸ್ವೀಕರಿಸಿದ ಬಳಿಕ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗುತ್ತದೆ. ಪಬ್ಲಿಕ್ ಟಿವಿಗೆ ಸಿಕ್ಕಿರುವ ಮೂಲಗಳ ಮಾಹಿತಿ ಪ್ರಕಾರ ಸಚಿವರಿಗೆ ಈ ಕೆಳಗಿನಂತೆ ಖಾತೆ ಹಂಚಿಕೆಯಾಗುವ ಸಾಧ್ಯತೆಯಿದೆ.
ಪ್ರಿಯಾಂಕ್ ಖರ್ಗೆ – ಗೃಹ
ಎಂ.ಬಿ.ಪಾಟೀಲ್– ಕೈಗಾರಿಕೆ
ಶರಣ ಪ್ರಕಾಶ್ ಪಾಟೀಲ್- ವೈದ್ಯಕೀಯ ಶಿಕ್ಷಣ
ಯತೀಂದ್ರ ಸಿದ್ದರಾಮಯ್ಯ – ನಗರಾಭಿವೃದ್ಧಿ
ಕೃಷ್ಣ ಬೈರೇಗೌಡ-ಬೆಂಗಳೂರು ಅಭಿವೃದ್ಧಿ
ರಾಮಲಿಂಗ ರೆಡ್ಡಿ– ಜಲ ಸಂಪನ್ಮೂಲ
ಯು.ಟಿ.ಖಾದರ್– ಆರೋಗ್ಯ
ಬೈರತಿ ಸುರೇಶ್– ಗ್ರಾಮೀಣಾಭಿವೃದ್ಧಿ
Laxmi News 24×7