ನವದೆಹಲಿ: ವಿಪಕ್ಷಗಳ ಗದ್ದಲ ಕೋಲಾಹಲದ ನಡುವೆಯೇ ಲೋಕಸಭೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ತಡೆ ಮಸೂದೆ ಮಂಡನೆಯಾಗಿದೆ.
ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು ಸೋಮವಾರ (ಇಂದು) ಲೋಕಸಭೆಯಲ್ಲಿ ಸಾರ್ವಜನಿಕ ಪರೀಕ್ಷೆಗಳ (ಅಕ್ರಮ ತಡೆ) ತಿದ್ದುಪಡಿ ಮಸೂದೆ-2026 (Public Examinations (Prevention of Unfair Means) Amendment Bill, 2026) ಅನ್ನು ಮಂಡಿಸಿದರು.
ಈ ವೇಳೆ ಪ್ರತಿಪಕ್ಷ ಸಂಸದರು ಘೋಷಣೆ ಕೂಗುತ್ತಾ ಪ್ರತಿಭಟನೆ ನಡೆಸಲು ಮುಂದಾದರು, ವಿದ್ಯಾರ್ಥಿಗಳ ಮೇಲಿನ ಲಾಠಿಚಾರ್ಚ್‌ಗೆ ಹೊಣೆಗಾರಿಕೆಗೆ ಆಗ್ರಹಿಸಿ ಘೋಷಣೆ ಕೂಗಿದರು. ಸದನದಲ್ಲಿ ಗದ್ದಲ ಉಂಟಾದ ಹಿನ್ನೆಲೆ ಲೋಕಸಭೆ ಮತ್ತು ರಾಜ್ಯಸಭೆಯ ಕಲಾಪಗಳನ್ನ ಮಧ್ಯಾಹ್ನ 2 ಗಂಟೆಯವರೆಗೆ ಮುಂದೂಡಲಾಯಿತು.
ಮಧ್ಯಾಹ್ನದ ಬಳಿಕ ಈ ಮಸೂದೆ ಕುರಿತು ಚರ್ಚೆ ಆರಂಭವಾಗಲಿದೆ. ಕರ್ನಾಟಕ ಸಂಸದ ತೇಜಸ್ವಿ ಸೂರ್ಯ ಸೇರಿದಂತೆ ಯುವ ಸಂಸದರು ಮಸೂದೆ ಕುರಿತು ತಮ್ಮ ಭಾಷಣ ಮಾಡಲಿದ್ದಾರೆ.
ಮುಂಗಾರು ಅಧಿವೇಶನದ ಮೊದಲ ವಾರವು ಮುಖ್ಯವಾಗಿ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿವಾದ ಸೇರಿದಂತೆ ಹಲವು ವಿಷಯಗಳ ಕುರಿತು ಪ್ರತಿಪಕ್ಷದ ಪ್ರತಿಭಟನೆಗಳಿಂದ ಬಹುತೇಕ ವ್ಯರ್ಥವಾದ ಬಳಿಕ, ಮುಂಗಾರು ಅಧಿವೇಶನದ ಕಲಾಪಗಳು ಮತ್ತೆ ಆರಂಭಗೊಂಡಿದ್ದವು. ಇಂದು ಬೆಳಗ್ಗೆ ಆರಂಭದಲ್ಲೇ ಸ್ಪೀಕರ್ ಓಂ ಬಿರ್ಲಾ ಅವರ ಮನವಿಹೊರತಾಗಿಯೂ ವಿಪಕ್ಷಗಳು ಗದ್ದಲ ಸೃಸ್ಟಿಸಿದ್ದವು, ಇದರಿಂದ ಮಧ್ಯಾಹ್ನ 12 ಗಂಟೆ ವರೆಗೆ ಚರ್ಚೆ ಮುಂದೂಡಲಾಗಿತ್ತು.
Laxmi News 24×7