ಮಡಿಕೇರಿ: ಕೊರೊನಾ ಮಹಾಮಾರಿ ಕೇವಲ ಜೀವಗಳನ್ನು ಅಷ್ಟೇ ಹಿಂಡುತ್ತಿಲ್ಲ, ಜೊತೆಗೆ ಸಂಬಂಧಿಗಳನ್ನು ದೂರ ಮಾಡಿದೆ. ಹೌದು ದೇಶದ ಕೂಲಿ ಕಾರ್ಮಿಕರು, ಬಡವರು ಕೂಲಿ ಹರಸಿ ಒಂದು ರಾಜ್ಯದಿಂದ ಮತ್ತೊಂದು ರಾಜ್ಯ, ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ಹೋಗಿದ್ದರು. ಆದ್ರೆ ಕೊರೊನಾ ತಡೆಗಟ್ಟೆಲು ದೇಶವೇ ಲಾಕ್‍ಡೌನ್ ಆದ ಬಳಿಕ ತಮ್ಮ ಕರುಳ ಬಳ್ಳಿ ಸಂಬಂಧಿಗಳನ್ನೆಲ್ಲಾ ಬಿಟ್ಟು ದೂರದ ಊರುಗಳಿಗೆ ಹೋಗಿದ್ದ ಕೂಲಿ ಕಾರ್ಮಿಕರು ಅಲ್ಲಲ್ಲೇ ಬಂಧಿಗಳಾಗಿದ್ದಾರೆ.
ಹೀಗೆ ರಾಜ್ಯದ ಗದಗ, ಹಾವೇರಿ, ಚಿತ್ರದುರ್ಗ, ಶಿವಮೊಗ್ಗ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಪಕ್ಕದ ಕೇರಳ ರಾಜ್ಯಕ್ಕೆ ಕೂಲಿ ಹರಸಿ ಹೋಗಿದ್ದ ಕಾರ್ಮಿಕರು ಕೊಡಗಿನ ವಿರಾಜಪೇಟೆಯ ಮೊರಾರ್ಜಿ ವಸತಿ ಶಾಲೆಯಲ್ಲಿ ಬಂಧಿಗಳಾಗಿ 27 ದಿನಗಳೇ ಕಳೆದಿವೆ. ದೇಶವೇ ಲಾಕ್‍ಡೌನ್ ಆಗುತ್ತಿದ್ದಂತೆ ಹೇಗಾದರೂ ಮಾಡಿ ತಮ್ಮ ಸೂರು ಸೇರಿದರೆ ಸಾಕು ಎಂದು ಹತ್ತಾರು ಕಿಲೋಮೀಟರ್ ನಡೆದೇ ಕೇರಳದಿಂದ ಹೊರಟ್ಟಿದ್ದ ಕಾರ್ಮಿಕರು ರಾಜ್ಯದ ಗಡಿ ಪ್ರವೇಶಿಸುತ್ತಿದ್ದಂತೆ ಬಂಧಿಯಾಗಿದ್ದರು. ಕೊರೊನಾ ವೈರಸ್ ಇರಬಹುದು, ಇಲ್ಲವೇ ಇವರಿಂದ ರಾಜ್ಯದ ಜನರಿಗೂ ಹರಡಬಹುದು ಎಂಬ ಉದ್ದೇಶದಿಂದ ರಾಜ್ಯದ ಗಡಿಭಾಗ ಕೊಡಗು ಜಿಲ್ಲೆಯ ವಿರಾಜಪೇಟೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕ್ವಾರಂಟೈನ್ ಮಾಡಲಾಗಿತ್ತು.
ಅಂದಿನಿಂದ 27 ದಿನಗಳಿಂದಲೂ ಇವರಿಗೆ ಯಾವುದೇ ರೋಗ ಲಕ್ಷಣಗಳು ಇಲ್ಲದಿದ್ದರೂ ಇಂದಿಗೂ ಕ್ವಾರಂಟೈನ್‍ನಿಂದ ಬಿಡುಗಡೆ ಸಿಗದೇ ತಮ್ಮ ಸ್ವಂತ ಊರು ತಲುಪಲು ಸಾಧ್ಯವಾಗದೇ ಒದ್ದಾಡುತ್ತಿದ್ದಾರೆ. ಹೀಗಾಗಿ ಊರಿನಲ್ಲಿರುವ ತಮ್ಮ ಸಂಬಂಧಿಗಳು ಕರುಳಬಳ್ಳಿಗಳಿಂದ ದೂರವಾಗಿ ಬದುಕು ದೂಡುತ್ತಿದ್ದಾರೆ.
ಮತ್ತೊಂದೆಡೆ ರಾಜ್ಯದಲ್ಲಿ ಮಳೆಗಾಲ ಆರಂಭವಾಗಿದ್ದು, ತಮ್ಮ ಹೊಲಗದ್ದೆಗಳ ಹಸನು ಮಾಡಿಕೊಂಡು ಬೆಳೆ ಬಿತ್ತಬೇಕಾಗಿದೆ. ಆದ್ದರಿಂದ ತಮ್ಮನ್ನು ಊರುಗಳಿಗೆ ಕಳುಹಿಸಿಕೊಡಿ ಎಂದು ಬಂಧಿಯಾಗಿರುವ 75 ಮಂದಿ ಕಾರ್ಮಿಕರು ಅಂಗಲಾಚುತ್ತಿದ್ದಾರೆ.