ಫೆ.21- ಮಹಾಶಿವರಾತ್ರಿ ಹಬ್ಬವನ್ನು ದೇಶದಾದ್ಯಂತ ಸಂಭ್ರಮ-ಸಡಗರದಿಂದ ಆಚರಿಸಲಾಗುತ್ತಿದ್ದು, ದೇಶದೆಲ್ಲೇಡೆ ಇರುವ ಶಿವ ದೇವಾಲಯಗಳು ಮತ್ತು ಭವ್ಯ ಪ್ರತಿಮೆಗಳ ಸ್ಥಳಗಳಲ್ಲಿ ವಿಶೇಷ ಪೂಜೆ-ಪುನಸ್ಕಾರಗಳು ನಡೆಯುತ್ತಿವೆ. ಮಹಾ ಶಿವರಾತ್ರಿ ಪ್ರಯುಕ್ತ ದೇಶಾದ್ಯಂತ ಹಲವಾರು ಧಾರ್ಮಿಕ ಮತ್ತು ಆಧ್ಯಾತ್ಮಿಕ ಕಾರ್ಯಕ್ರಮಗಳು ನಡೆಯುತ್ತಿದ್ದು, ಜಾಗರಣೆ ನಿಮಿತ್ತ ಅಹೋರಾತ್ರಿವಿವಿಧ ಸಮಾರಂಭಗಳು ಆಯೋಜಿತವಾಗಿವೆ.
ಶಿವನ ದೇಗುಲಗಳಲ್ಲಿ ಭಕ್ತರು ಉಪವಾಸ ಮತ್ತು ಜಾಗರಣೆ ಮೂಲಕ ಶಿವ ಸ್ಮರಣೆ ಮಾಡಲು ವ್ಯವಸ್ಥೆ ಮಾಡಲಾಗುತ್ತಿದೆ. ವಿಶ್ವವಿಖ್ಯಾತ ಕಾಶಿ ವಿಶ್ವನಾಥ ದೇವಾಲಯ, ಕರ್ನಾಟಕದ ಕಾಡು ಮಲ್ಲೇಶ್ವರ ಮಲ್ಲಿಕಾರ್ಜುನ ಸ್ವಾಮಿ ದೇವಾಲಯ, ಗವಿಪುರದ ಗವಿ ಗಂಗಾಧರೇಶ್ವರ ದೇವಾಲಯ, ಗುಟ್ಟಹಳ್ಳಿಯ ಪಂಚಲಿಂಗೇಶ್ವರ ಸ್ವಾಮಿ ದೇವಾಲಯ, ಹಲಸೂರಿನ ಸೋಮೇಶ್ವರ, ಮುರುಗೇಶ್ವರ ದೇವಾಲಯ, ಮುರುಗೇಶಪಾಳ್ಯದ ಶಿವ ದೇವಾಲಯ, ಅನಂದರಾವ್ ವೃತ್ತದ ಶಿವಸಾಯಿ ದೇವಾಲಯ, ಮುಂಬಾನ ಬಬುಲ್ನಾಥ್ ದೇಗುಲ, ದೆಹಲಿಯ ಶ್ರೀ ಗೌರಿ ಶಂಕರ ದೇಗುಲ, ಅಮೃತಸರದ ಶಿವಾಲ ಬಾಘ್ ಭೈಯಾನ್ ದೇಗುಲ, ಕಲುಬರುಗಿಯ ಬ್ರಹ್ಮಕುಮಾರಿ ದೇವಾಲಯ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನಡೆಯುತ್ತಿವೆ.
ಇಂದು ಬೆಳಿಗ್ಗೆಯಿಂದಲೇ ಎಲ್ಲಾ ಶಿವ ದೇವಾಲಯಗಲ್ಲಿ ವಿಶೇಷ ಪೂಜೆಗಳು ನಡೆಯುತ್ತಿದ್ದು, ಶಿವನಿಗೆ ಬಿಲ್ವಪತ್ರೆ ಅರ್ಪಿಸುವ ಮೂಲಕ ಪೂಜೆ, ಮಂಗಳಾರತಿ, ಶಿವನ ಸ್ಮರಣೆ ನಡೆಯುತ್ತಿವೆ. ಶಿವನ ಸಹಸ್ರ ನಾಮ ಪಠಣ, ವೇದಾಂತ ಉಪನ್ಯಾಸ, ಸಂಗೀತೋತ್ಸವ ಮತ್ತು ಅಹೋರಾತ್ರಿ ಶಿವನಾಮ ಜಪ ನಡೆಯುತ್ತದೆ. ದೇವಾಲಯಗಳಲ್ಲಿ ಹೆಚ್ಚು ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಎಲ್ಲಾ ದೇಗುಲಗಳಲ್ಲಿ ವಿಶೇಷ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.