ಬೆಂಗಳೂರು: ಶಾಪಿಂಗ್ ಮಾಡಲು ಭಾನುವಾರ ಒಂದೇ ದಿನ ಅವಕಾಶ ಇರುವುದು. ಹೀಗಾಗಿ ಖರೀದಿಗೆ ಹಾಗೂ ಸ್ನೇಹಿತರನ್ನ ಭೇಟಿಯಾಗಲು ಅವಕಾಶ ಬೇಕಿತ್ತು. ಅದಕ್ಕೆ ಭಾನುವಾರ ಕರ್ಫ್ಯೂ ತೆಗೆಯಲಾಗಿದೆ ಎಂದು ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಭಾನುವಾರ ಲಾಕ್ ಡೌನ್ ತೆರವು ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಸಿಎಂ ನಿರ್ಧಾರ ಸ್ವಾಗತಾರ್ಹ ಎಂದರು. ದುಡಿಯುವ ವರ್ಗಕ್ಕೆ ರಿಲ್ಯಾಕ್ಸ್ ಮಾಡಿಕೊಡಲು ಅನುಕೂಲವಾಗಿದೆ. ವಾರವೆಲ್ಲ ನೌಕರರು, ಉದ್ದಿಮೆದಾರರು ಕೆಲಸ ಮಾಡಿರುತ್ತಾರೆ. ಅವರಿಗೆ ಶಾಪಿಂಗ್ ಮಾಡಲು ಅವಕಾಶ ಇರೋದು ಭಾನುವಾರ ಒಂದೇ ದಿನ. ಹೀಗಾಗಿ ಖರೀದಿ ಹಾಗೂ ಸ್ನೇಹಿತರನ್ನ ಭೇಟಿಯಾಗಲು ಅವಕಾಶ ಬೇಕಿತ್ತು. ಈ ಹಿನ್ನೆಲೆಯಲ್ಲಿ ಭಾನುವಾರ ಕರ್ಫ್ಯೂ ತೆಗೆಯಲಾಗಿದೆ ಎಂದರು.
ಲಾಕ್ ಡೌನ್ ಫ್ರೀ ಮಾಡಲು ರಾಜ್ಯ ಸರ್ಕಾರ ಮುಕ್ತವಾಗಿದೆ. ಸೋಮವಾರದಿಂದ ಬಹುತೇಕ ಫ್ರೀ ಆಗುತ್ತೆ. ಮಾಲ್, ಸಿನಿಮಾ ಥಿಯೇಟರ್ ಸದ್ಯಕ್ಕೆ ಒಪನ್ ಇರಲ್ಲ. ಹೋಟೆಲ್ ಸೇರಿದಂತೆ ಹಲವು ವಲಯಗಳಿಗೆ ವಿನಾಯ್ತಿ ಸಿಗಲಿದೆ. ರಾಜ್ಯ ಸರ್ಕಾರಕ್ಕೆ ಕೇಂದ್ರ ಅಧಿಕಾರ ಕೊಟ್ಟರೆ ನಾವೇ ನಿರ್ಧಾರ ತೆಗೆದುಕೊಳ್ಳುತ್ತೇವೆ. ಕೇಂದ್ರ ಸರ್ಕಾರದ ಸೂಚನೆಗೆ ಕಾಯುತ್ತಿದ್ದೇವೆ ಎಂದು ತಿಳಿಸಿದರು.
ಇದೇ ವೇಳೆ ಭಿನ್ನಮತೀಯರಿಗೆ ಟಾಂಗ್ ನೀಡಿದ ಸಚಿವರು, ಯಡಿಯೂರಪ್ಪ ಸ್ಟ್ರಾಂಗ್ ಅನ್ನೋದಕ್ಕಿಂತ ಯಡಿಯೂರಪ್ಪ ರಾಜಾಹುಲಿ. ರಾಜಾಹುಲಿ ಯಾವತ್ತೂ ರಾಜಾಹುಲಿನೇ. ಹುಲಿಗೆ ನಿವೃತ್ತಿ ಅನ್ನೋ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.
ನಾಲ್ಕೈದು ಜನ ಒಟ್ಟಿಗೆ ಸೇರಿ ಊಟ ಮಾಡಿದ್ರೆ ಅದು ಭಿನ್ನಮತಿಯರ ಸಭೆ ಅಲ್ಲ. ಮಂತ್ರಿಗಳ ಮನೆಗೆ ಪ್ರತಿನಿತ್ಯ ಊಟಕ್ಕೆ ನಾಲ್ಕೈದು ಜನ ಬರುತ್ತಾರೆ. ಯಡಿಯೂರಪ್ಪನವರು ಈ ವಯಸ್ಸಿನಲ್ಲಿಯೂ ಉತ್ತಮ ಕೆಲಸ ಮಾಡುತ್ತಿದ್ದಾರೆ. ಮೂರು ವರ್ಷಕ್ಕೆ ಒಂದು ದಿನವೂ ಕಡಿಮೆ ಇಲ್ಲದಂತೆಯೇ ಮುಖ್ಯಮಂತ್ರಿಯಾಗಿರುತ್ತಾರೆ. ಒಂದು ದಿನವೂ ಕಡಿಮೆ ಆಗಲ್ಲ. ನನಗೆ ಆ ಭರವಸೆ ಇದೆ, ರಾಜ್ಯದ ಜನರಿಗೂ ಇದೆ, ನಮ್ಮ ಶಾಸಕರುಗಳಿಗೂ ಇದೆ. ಯಡಿಯೂರಪ್ಪರಿಗೆ ಏನೂ ಆಗೋದಿಲ್ಲ ಎಂದು ಭರವಸೆ ನೀಡಿದರು.