ಚಾಮರಾಜನಗರ: ಬಿಜೆಪಿ ಹೈಕಮಾಂಡ್ ಅನುಮತಿ ನೀಡಿದರೆ ನಾನು ಈಗಲೂ 5 ಜನ ಕಾಂಗ್ರೆಸ್ ಶಾಸಕರ ರಾಜೀನಾಮೆ ಕೊಡಿಸುತ್ತೇನೆ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹೊಸ ಬಾಂಬ್ ಸಿಡಿಸಿದ್ದಾರೆ.
ಜಿಲ್ಲೆಯ ಕೊಳ್ಳೇಗಾಲದಲ್ಲಿ ಮಾತನಾಡಿದ ಅವರು, ಇಪ್ಪತ್ತೆರಡು ಮಂದಿ ಕಾಂಗ್ರೆಸ್ ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ. ಟ್ರಯಲ್ ಬೇಸ್ ಆಗಿ ಐದು ಮಂದಿ ಶಾಸಕರ ರಾಜೀನಾಮೆ ಕೊಡಿಸಲು ಸಿದ್ಧ. ಬಿಜೆಪಿ ಹೈಕಮಾಂಡ್ ಅನುಮತಿ ನೀಡಿದರೆ ಒಂದು ವಾರದೊಳಗೆ ಅವರ ರಾಜೀನಾಮೆ ಕೊಡಿಸಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಳಿಸುತ್ತೇನೆ ಎಂದು ಹೇಳುವ ಮೂಲಕ ಕಾಂಗ್ರೆಸ್ ಪಾಳಯಕ್ಕೆ ಶಾಕ್ ನೀಡಿದ್ದಾರೆ.
ಇದೇ ವೇಳೆ ಬಿಜೆಪಿ ಪಕ್ಷದ ಒಳಗೆ ನಡೆಯುತ್ತಿರುವ ಭಿನ್ನಮತೀಯ ಚಟುವಟಿಕೆ ಕುರಿತು ಮಾತನಾಡಿರುವ ರಮೇಶ್ ಜಾರಕಿಹೊಳಿ, ನಾನು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪರ ಇದ್ದೇನೆ. ಬಿಜೆಪಿ ಸರ್ಕಾರ ಸೇಫ್ ಆಗಿದೆ. ಯಾವುದೇ ಭಿನ್ನಮತವೂ ಇಲ್ಲ. ಉಮೇಶ್ ಕತ್ತಿ ನನ್ನ ಸ್ನೇಹಿತರು, ನಿನ್ನೆ ಫೋನ್ ಮಾಡಿ ಚರ್ಚಿಸಿದರು. ಚರ್ಚೆ ಮಾಡುವುದು ಭಿನ್ನಮತ ಅಲ್ಲ. ಅವರಿಗೆ ಯಾವ ರೀತಿ ಅಸಮಾಧಾನ ನಡೆದಿದೆ ಎಂಬುದರ ಬಗ್ಗೆ ನನಗೆ ಗೊತ್ತಿಲ್ಲ. ಅವರೊಡನೆ ಮತ್ತೆ ಚರ್ಚಿಸುತ್ತೇನೆ. ಬಿಜೆಪಿ ಸರ್ಕಾರ ಮೂರು ವರ್ಷ ಅಷ್ಟೇ ಅಲ್ಲ, ಅದರ ಮುಂದಿನ ಐದು ವರ್ಷ ಕಾಲವು ಅಧಿಕಾರಕ್ಕೆ ತರಲು ಶ್ರಮಿಸುತ್ತೇವೆ ಎಂದು ತಿಳಿಸಿದ್ದಾರೆ.