ಹೊಸದಿಲ್ಲಿ: ಕೊರೋನಾ ಸೋಂಕು ಹರಡುವಿಕೆ ಬಹಳ ಕಡಿಮೆ ಇದ್ದಾಗ ಲಾಕ್ಡೌನ್ ಜಾರಿ ಮಾಡಿ, ಸೋಂಕು ಹರಡುವಿಕೆ ಹೆಚ್ಚಾದಾಗ ನಾಮಕಾವಸ್ಥೆಗೆ ಮಾತ್ರ ಲಾಕ್ ಡೌನ್ ಜಾರಿಗೊಳಿಸಿದ ಪರಿಣಾಮ ಭಾರತದಲ್ಲಿ ಕೊರೋನಾ ಸೋಂಕು ಪೀಡಿತರ ಸಂಖ್ಯೆ ಶರವೇಗದಲ್ಲಿ ಸಾಗುತ್ತಿದೆ. ನಿನ್ನೆಯಷ್ಟೇ ಒಂದೇ ದಿನ ಎರಡು ದೇಶಗಳನ್ನು ಹಿಂದಿಕ್ಕಿ 4ನೇ ಸ್ಥಾನಕ್ಕೇರಿದ್ದ ಭಾರತದ ಕೊರೊನಾ ಪೀಡಿತರ ಸಂಖ್ಯೆ ಈಗ 3 ಲಕ್ಷದ ಗಡಿ ಬಳಿ ಬಂದಿದೆ.
ಭಾರತದಲ್ಲಿ ಮೇ 30 ರಿಂದ ಪ್ರತಿನಿತ್ಯ 8 ಸಾವಿರಕ್ಕೂ ಹೆಚ್ಚು ಕೊರೋನಾ ಪ್ರಕರಣಗಳು ಪತ್ತೆಯಾಗಲು ಆರಂಭಿಸಿದವು. ಜೂನ್ 3ರಿಂದ ದಿನವೊಂದರಲ್ಲಿ 9 ಸಾವಿರಕ್ಕೂ ಅಧಿಕ ಪ್ರಕರಣಗಳು ಗೋಚರಿಸಲು ಆರಂಭವಾದವು. ಈಗ ದಿನವೊಂದರಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗುವ ಟ್ರೆಂಡ್ ಆರಂಭವಾಗಿದೆ. ಗುರುವಾರ ಒಂದೇ ದಿನ 10,956 ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದು ದೇಶದ ಕೊರೋನಾ ಪೀಡಿತರ ಸಂಖ್ಯೆ 2,97,535ಕ್ಕೆ ಏರಿಕೆಯಾಗಿದೆ.
ಇದಲ್ಲದೆ ಗುರುವಾರ ಒಂದೇ ದಿನ ಕೊರೋನಾದಿಂದ 396 ಜನ ಮೃತಪಟ್ಟಿದ್ದು ದೇಶದ ಕೊರೋನಾದಿಂದ ಸತ್ತವರ ಸಂಖ್ಯೆ 8,498ಕ್ಕೆ ಏರಿಕೆಯಾಗಿದೆ. ಕೊರೋನಾದಿಂದ ಈವರೆಗೆ 1,47, 195 ಜನ ಮಾತ್ರ ಗುಣಮುಖ ಆಗಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆಯ ಮಾಹಿತಿಗಳು ತಿಳಿಸಿದ್ದವು.
ಕೇಂದ್ರ ಆರೋಗ್ಯ ಇಲಾಖೆ ಮಾಹಿತಿಗಳ ಪ್ರಕಾರ ಮೇ 10ರಿಂದ ದೇಶದಲ್ಲಿ ಕೊರೋನಾ ಸೋಂಕು ಪೀಡಿತರ ಸಂಖ್ಯೆ ಪ್ರತಿನಿತ್ಯ ನಾಲ್ಕು ಸಾವಿರಕ್ಕಿಂತ ಹೆಚ್ಚಾಗುತ್ತಲೇ ಇದೆ