ಕೋಲಾರ: ಜಿಲ್ಲೆಯಲ್ಲಿ ಅಂತರ್ ರಾಜ್ಯ ಹೈಟೆಕ್ ಜೂಜು ಅಡ್ಡೆಯೊಂದು ತಲೆ ಎತ್ತಿದ್ದು, ಪ್ರತಿದಿನ ಲಕ್ಷಾಂತರ ರೂಪಾಯಿ ಜೂಜಾಟ ನಡೆಯುವ ಈ ಅಡ್ಡೆಗೆ ಪೊಲೀಸರ ಕುಮ್ಮಕ್ಕು ಸಹ ಇದೆ ಎಂಬ ಮಾಹಿತಿ ಲಭ್ಯವಾಗಿದೆ.
ಜಿಲ್ಲೆಯ ಗಡಿ ಗ್ರಾಮಗಳಲ್ಲಿ ಅಂದರ್ ಬಾಹರ್ ಜೂಜು ನಿರಾಂತಕವಾಗಿ ನಡೆಯುತ್ತಿದೆ. ಪ್ರತಿ ನಿತ್ಯ ನೂರಾರು ಮಂದಿ ಒಂದೆಡೆ ಸೇರಿ ಎರಡು ಪಾಳಿಗಳಲ್ಲಿ ಜೂಜು ಕೇಂದ್ರಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದು, ನಿತ್ಯವೂ ಲಕ್ಷಾಂತರ ರೂಪಾಯಿ ವರೆಗೆ ವಹಿವಾಟು ನಡೆಯುತ್ತಿದೆ. ಶ್ರೀನಿವಾಸಪುರ ತಾಲೂಕಿನ ಲಕ್ಷ್ಮೀಪುರ ಮತ್ತು ಪುಂಗನೂರು ಕ್ರಾಸ್ ಬಳಿಯಿರುವ ಅವಲಕೊಪ್ಪ ಗ್ರಾಮದಲ್ಲಿ ಜೂಜು ಕೇಂದ್ರವನ್ನು ಅನಧೀಕೃತವಾಗಿ ನಡೆಸಲಾಗುತ್ತಿದೆ.
ಐದಾರು ತಿಂಗಳುಗಳಿಂದ ಲಾಕ್‍ಡೌನ್ ಸಂದರ್ಭದಲ್ಲೂ ಬೆಳಗ್ಗೆ 9 ರಿಂದ ಮಧ್ಯಾಹ್ನ 1ರ ವರೆಗೆ ನಡೆಯುತ್ತಿದೆ. ಕೋಲಾರ, ಬೆಂಗಳೂರು, ಶ್ರೀನಿವಾಸಪುರ, ಮುಳಬಾಗಿಲು ಹಾಗೂ ಆಂಧ್ರಪ್ರದೇಶದ ಮದನಪಲ್ಲಿ ಸೇರಿದಂತೆ ಇತರೆರೆಡೆಗಳಿಂದ ನೂರಾರು ಮಂದಿ ಪ್ರತಿ ದಿನ ಅಡ್ಡೆಗೆ ಆಗಮಿಸಿ ಲಕ್ಷಾಂತರ ರೂ. ಪಣಕ್ಕಿಟ್ಟು ಅಂದರ್ ಬಾಹರ್ ಆಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.ತಾತ್ಕಾಲಿಕ ಡೇರಾ ಹಾಕಿ ಜೂಜು ಕೇಂದ್ರ ನಡೆಸುತ್ತಿದ್ದು, ಆಡುವವರಿಂದ ತಲಾ 1 ಸಾವಿರ ಪ್ರವೇಶ ದರ ವಸೂಲು ಮಾಡಲಾಗುತ್ತಿದೆ. ಹೀಗೆ ಜೂಜಾಟವಾಡಿಸುವವರು ನಿತ್ಯವೂ ಎರಡು ಲಕ್ಷ ರೂ.ಗಳ ವರೆಗೆ ಆದಾಯ ಮಾಡಿಕೊಳ್ಳುತ್ತಿದ್ದಾರೆ. ಜೂಜು ಕೇಂದ್ರಗಳಲ್ಲಿ ಆಟವಾಡಲು ಶೇ.10ಕ್ಕಿಂತ ಹೆಚ್ಚು ಬಡ್ಡಿ ದರದಲ್ಲಿ ಸಾಲ ನೀಡುವ ಸೌಲಭ್ಯವೂ ಇಲ್ಲಿದೆ. ಈ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರು ಅಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.