Breaking News
Home / ಜಿಲ್ಲೆ / ಬೆಳಗಾವಿ / ತ್ಯಾಜ್ಯ ವಿಲೇವಾರಿಗೆ ನಿರ್ಲಕ್ಷ್ಯ

ತ್ಯಾಜ್ಯ ವಿಲೇವಾರಿಗೆ ನಿರ್ಲಕ್ಷ್ಯ

Spread the love

ಎಂ.ಕೆ. ಹುಬ್ಬಳ್ಳಿ : ಇಲ್ಲಿ ತ್ಯಾಜ್ಯ ವಿಲೇವಾರಿಗೆ ನಿರ್ಲಕ್ಷ್ಯ ವಹಿಸಿರುವುದು ನಿವಾಸಿಗಳಿಗೆ ತೊಂದರೆಯಾಗಿ ಪರಿಣಮಿಸಿದೆ. ತ್ಯಾಜ್ಯ ವಿಲೇವಾರಿ ಘಟಕ ಇಲ್ಲದಿರುವುದೂ ತೊಡಕಾಗಿದೆ.

ಹೆದ್ದಾರಿ ಪ್ರಾಧಿಕಾರದ ವ್ಯಾಪ್ತಿಗೆ ಒಳಪಡುವ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಪಕ್ಕದ ಚರಂಡಿಗಳು ಕಸದಿಂದ ತುಂಬಿವೆ. ಅದರಿಂದ ಹೊರಸೂಸುತ್ತಿರುವ ದುರ್ನಾತ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ.

ಬೆಳಗಾವಿಯಿಂದ ಧಾರವಾಡ ಕಡೆಯ 1, 2, 3 ಮತ್ತು 4ನೇ ವಾರ್ಡ್‌ಗೆ ಒಳಪಡುವ ಗಾಂಧಿ ನಗರ, ಬಸವ ನಗರ, ಚನ್ನಮ್ಮ ನಗರದ ಬಳಿಯ ಹೆದ್ದಾರಿ ಪಕ್ಕದ ಚರಂಡಿಗಳಲ್ಲಿ ಪ್ಲಾಸ್ಟಿಕ್ ಮೊದಲಾದ ತ್ಯಾಜ್ಯಗಳಿಂದ ತುಂಬಿ ಹೋಗಿವೆ. ಹೆದ್ದಾರಿ ಪಕ್ಕದ ಚರಂಡಿಗಳು ತನ್ನ ವ್ಯಾಪ್ತಿಗೆ ಒಳಪಟ್ಟಿದ್ದರೂ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸ್ವಚ್ಛತೆ ಕೈಗೊಳ್ಳುವಂತೆ ನಿರ್ವಹಣಾ ಕಂಪನಿಗೆ ಸೂಚಿಸುತ್ತಿಲ್ಲ. ಇದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ಪ್ರಶ್ನಿಸಿದರೆ, ಸ್ಥಳೀಯರು ಕಸ ಎಸೆಯುತ್ತಾರೆಂಬ ಸಬೂಬು ಹೇಳಿ ಪಟ್ಟಣ ಪಂಚಾಯಿತಿ ಕಡೆ ಬೊಟ್ಟು ಮಾಡುತ್ತಿದ್ದಾರೆ ಹೆದ್ದಾರಿ ನಿರ್ವಹಣಾ ಕಂಪನಿ ಅಧಿಕಾರಿಗಳು.

ಸುಗಮ ಸಂಚಾರ, ಉತ್ತಮ ವಾತಾವರಣ ಇರುವಂತೆ ರಸ್ತೆ ನಿರ್ವಹಣೆ ಮಾಡಲು ಪ್ರತಿ ದಿನ ಹೆದ್ದಾರಿ ಮೂಲಕ ಸಾಗುವ ವಾಹನಗಳಿಂದ ಲಕ್ಷಾಂತರ ರೂಪಾಯಿ ಹಣ ವಸೂಲಿ ಮಾಡುವ ಟೋಲ್ ಅಧಿಕಾರಿಗಳು ಈ ಬಗ್ಗೆ ಗಮನಹರಿಸದಿರುವುದು ನಾಗರಿಕರ ಅಸಮಾಧಾನಕ್ಕೆ ಕಾರಣವಾಗಿದೆ. ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿ ಐದು ವರ್ಷಗಳೆ ಕಳೆಯುತ್ತಾ ಬಂದರೂ ಕಸ ವಿಲೇವಾರಿಗೆ ಅಗತ್ಯ ಸ್ಥಳಾವಕಾಶ ಸಿಗದಿರುವುದರಿಂದ ಸಮಸ್ಯೆ ಉಲ್ಬಣಿಸುತ್ತಿದೆ.

ವಿಲೇವಾರಿ ಘಟಕಕ್ಕಾಗಿ, 10 ಕಿ.ಮೀ ದೂರದ ಹೊನ್ನಿದಿಬ್ಬ ಬಳಿ 5.14 ಎಕರೆ ಸರ್ಕಾರಿ ಜಾಗ ಮಂಜೂರು ಮಾಡಿ ಜಿಲ್ಲಾಧಿಕಾರಿ ಈಚೆಗೆ ಆದೇಶ ಹೊರಡಿಸಿದ್ದಾರೆ. ಆ ಸ್ಥಳವನ್ನು ಪಟ್ಟಣ ಪಂಚಾಯಿತಿ ಹೆಸರಿಗೆ ನೋಂದಣಿ ಮಾಡಿಕೊಡುವಂತೆ ಅರ್ಜಿ ನೀಡಿದ್ದೇವೆ. ಆರ್‌ಟಿಸಿ ಆದ ತಕ್ಷಣವೇ ಇಲ್ಲಿನ ಕಸ ವಿಲೇವಾರಿ ಸಮಸ್ಯೆಗೆ ಮುಕ್ತಿ ಸಿಗಲಿದೆ ಎಂದು ಪಟ್ಟಣ ಪಂಚಾಯಿತಿ ಅಧಿಕಾರಿಗಳು ಹೇಳುತ್ತಾರೆ.

‘ಚರಂಡಿಗಳು ತ್ಯಾಜ್ಯದಿಂದ ತುಂಬಿರುವುದರಿಂದ ಮಲಿನ ನೀರು ರಸ್ತೆಗೆ ಬರುತ್ತಿದೆ. ಮಳೆ ಬಂದಾಗ ನೀರು ರಸ್ತೆಗೆ ನುಗ್ಗುತ್ತದೆ. ಹಿಂದಿನಂತೆ ಮನೆ-ಮನೆಗೆ ಬಂದು ಕಸ ಸಂಗ್ರಹಿಸಬೇಕು. ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು’ ಎಂದು ನಿವಾಸಿ ದೊಡ್ಡಪ್ಪ ಗಣಾಚಾರಿ ಮತ್ತು ಸಂಜು ಉಪ್ಪಿನ ಒತ್ತಾಯಿಸಿದರು.

‘ಜಾಗ ಇಲ್ಲದಿದ್ದರೂ, ಕಸದ ಸಮಸ್ಯೆ ನಿವಾರಣೆಗೆ ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದೇವೆ. ನಿಗದಿತ ಜಾಗಕ್ಕೆ ಕಸದ ವಾಹನ ತೆರಳಿದರೆ, ಅಲ್ಲಿನ ಕೆಲವರು ತಕರಾರು ತೆಗೆಯುತ್ತಿದ್ದಾರೆ. ಇದರಿಂದ ವಿಲೇವಾರಿ ಸವಾಲಾಗಿದೆ. ಇಲ್ಲಿನ ಸ್ಥಿತಿಗತಿ ಬಗ್ಗೆ ಮತ್ತೊಮ್ಮೆ ಜಿಲ್ಲಾಧಿಕಾರಿ ಗಮನಸೆಳೆದು ಶೀಘ್ರ ಆರ್‌ಟಿಸಿ ಮಾಡಿಕೊಡುವಂತೆ ಕೋರಲಾಗುವುದು’ ಎಂದು ಮುಖ್ಯಾಧಿಕಾರಿ ಹಾಗೂ ಕಿರಿಯ ಎಂಜಿನಿಯರ್‌ ತಿಳಿಸಿದರು.

‘ಕಸ ವಿಲೇವಾರಿ ಘಟಕ ನಿರ್ಮಾಣಕ್ಕಾಗಿ ₹ 15 ಲಕ್ಷ ಅನುದಾನ ಮೀಸಲಿಡಲಾಗಿದೆ’ ಎಂದು ಕಿರಿಯ ಎಂಜಿನಿಯರ್ ರವೀಂದ್ರ ಗಡಾದ ಪ್ರತಿಕ್ರಿಯಿಸಿದರು.


Spread the love

About Laxminews 24x7

Check Also

ದೇಶದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದಕ್ಕೆ ಚಾನ್ಸೇ ಇಲ್ಲ

Spread the love ಹಾವೇರಿ : ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯ ರಾಜಕಾರಣದಲ್ಲಿ ಎಲ್ಲಾ ಪಕ್ಷದ ನಾಯಕರುಗಳು ಅಭ್ಯರ್ಥಿಗಳು ಪರಸ್ಪರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ