Breaking News

‘ಪ್ರಮುಖವಾಗಿ ಗೋಕಾಕ ಹಾಗೂ ಸತ್ತಿಗೇರಿ ಗ್ರಾಮದಲ್ಲಿ ಕಾನೂನುಬಾಹಿರ ಕ್ವಾರಿಗಳು ತಲೆ ಎತ್ತಿದೆ.: ಅಕ್ರಮ ಕ್ವಾರಿ: ವಾರದೊಳಗೆ ಸಮೀಕ್ಷೆ

Spread the love

ಬೆಳಗಾವಿ: ‘ಶಿವಮೊಗ್ಗ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆದ ಜಿಲೆಟಿನ್‌ ಸ್ಫೋಟ ದುರಂತದ ಘಟನೆಗಳು ನಮ್ಮ ಜಿಲ್ಲೆಯಲ್ಲಿ ಆಗದಂತೆ ಎಚ್ಚರ ವಹಿಸಬೇಕು. ಅಕ್ರಮ ಕ್ವಾರಿ ಹಾಗೂ ಸ್ಫೋಟಕಗಳ ಅಕ್ರಮ ಸಂಗ್ರಹ ಮತ್ತು ಸಾಗಾಣಿಕೆ ಮೇಲೆ ನಿಗಾ ವಹಿಸಬೇಕು’ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ಅಧಿಕಾರಿಗಳಿಗೆ ಸೂಚಿಸಿದರು.

ತಮ್ಮ ಕಾರ್ಯಾಲಯದಲ್ಲಿ ಬುಧವಾರ ಕರೆದಿದ್ದ ವಿವಿಧ ಇಲಾಖೆಗಳ ಅಧಿಕಾರಿಗಳ ತುರ್ತು ಸಭೆ ನಡೆಸಿ ಅವರು ಮಾತನಾಡಿದರು.

‘ನಮ್ಮ ಮೂಲ ಉದ್ದೇಶವು ಅಕ್ರಮ ಕ್ವಾರಿಗಳು ಹಾಗೂ ಅಕ್ರಮ ಸ್ಫೋಟಕಗಳನ್ನು ಪತ್ತೆ ಹಚ್ಚುವುದು ಆಗಿದೆಯೇ ಹೊರತು ಯಾವುದೇ ಕಾನೂನುಬದ್ಧ ಕ್ವಾರಿಗಳನ್ನು ಮುಚ್ಚಿಸುವುದಲ್ಲ. ಮಾನವನ ಪ್ರಾಣ ಹಾನಿಯಾಗದೆ ಸ್ಫೋಟಕಗಳನ್ನು ಬಳಸುವುದು ಹೇಗೆ ಎನ್ನುವುದರ ಅರಿವು ಮೂಡಿಸುವ ಕೆಲಸ ಆಗಬೇಕು. ಅಕ್ರಮವಾಗಿ ಸ್ಫೋಟಕಗಳ ಸಾಗಾಟ ಆಗುತ್ತಿರುವುದು ಗಮನಕ್ಕೆ ಬಂದಿದೆ. ಅದು ಮುಂದೆ ಆಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ತಾಕೀತು ಮಾಡಿದರು.

‘ಕಾನೂನು ಬಾಹಿರವಾಗಿ ಕ್ವಾರಿಗಳನ್ನು ಕೂಡ ಆರಂಭಿಸಿರುವ ದೂರುಗಳಿವೆ. ಆ ಕುರಿತಂತೆ ಸಮೀಕ್ಷೆ ನಡೆಸಿ ವಾರದಲ್ಲಿ ಮಾಹಿತಿ ನೀಡಬೇಕು’ ಎಂದು ಗಡುವು ನೀಡಿದರು.

ನಿರ್ಮಾಣವಾಗದಂತೆ ನೋಡಿಕೊಳ್ಳಿ:

‘ಪ್ರತಿ ತಿಂಗಳು ತಾಲ್ಲೂಕು ಮಟ್ಟದಲ್ಲಿ ಸಭೆಗಳನ್ನು ನಡೆಸಿ ನಿಗದಿತ ಅವಧಿಯಲ್ಲಿ ವರದಿ ಸಲ್ಲಿಸಬೇಕು. ಎಲ್ಲ ಇಲಾಖೆಯವರೂ ಪರಸ್ಪರ ಮಾಹಿತಿ ಹಂಚಿಕೊಂಡು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಅರಣ್ಯ ಪ್ರದೇಶದಲ್ಲಿ ಯಾವುದೇ ರೀತಿಯ ಕಾನೂನುಬಾಹಿರ ಕ್ವಾರಿಗಳು ನಿರ್ಮಾಣವಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಕೈಗೊಳ್ಳಬೇಕು’ ಎಂದು ಸೂಚಿಸಿದರು.

‘ಮರಳು ಸಾಗಣೆ ಮಾಡುವಂತಹ ಪ್ರತಿ ವಾಹನಕ್ಕೆ ಜಿಪಿಎಸ್ ಅಳವಡಿಸಬೇಕು. ಜಿಪಿಎಸ್ ಹೊಂದಿರದ ವಾಹನಗಳಲ್ಲಿ ಮರಳು ಸಾಗಿಸಲು ಅನುಮತಿ ನೀಡಬಾರದು. ಪಾಸ್‌ಗಳಿಲ್ಲದ ವಾಹನಗಳನ್ನು ವಶಕ್ಕೆ ಪಡೆದುಕೊಳ್ಳಬೇಕು’ ಎಂದು ತಿಳಿಸಿದರು.

ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಬಿಂದನ್ ಸ್ಫೋಟಕಗಳಲ್ಲಿ ಬಳಸುವ ರಾಸಾಯನಿಕಗಳು, ಅವುಗಳನ್ನು ಹೇಗೆ ಸಾಗಣೆ ಮಾಡುವುದು ಹಾಗೂ ಕ್ವಾರಿಗಳಿಗೆ ಹೇಗೆ ಅನುಮತಿ ನೀಡಲಾಗುತ್ತದೆ, ಷರತ್ತುಗಳೇನು ಎನ್ನುವುದರ ಕುರಿತು ಮಾಹಿತಿ ನೀಡಿದರು.

‘ಸ್ಫೋಟಕಗಳ ಮೇಲೆ ಪೆಟ್ರೋಲ್ ಅಥವಾ ಸೀಮೆಎಣ್ಣೆ ಬಳಸುತ್ತಿರುವುದು ಅನಾಹುತಗಳಿಗೆ ಮುಖ್ಯ ಕಾರಣ’ ಎಂದು ತಿಳಿಸಿದರು.

ಎಎಸ್ಪಿ ಅಮರನಾಥ ರೆಡ್ಡಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.

‘ಗೋಕಾಕ, ಸವದತ್ತಿಯಲ್ಲಿ ಪರೀಕ್ಷಿಸಿ’

‘ಗಣಿಗಾರಿಕೆ ಹಾಗೂ ಸ್ಫೋಟಕ ಸಾಗಣೆ, ಸಂಗ್ರಹಣೆ ಕುರಿತು ಸಮಗ್ರ ಮಾಹಿತಿಯನ್ನು ಸಲ್ಲಿಸಬೇಕು ಮಾರ್ಚ್ ಅಂತ್ಯದೊಳಗೆ ಸಲ್ಲಿಸಬೇಕು’ ಎಂದು ಲಕ್ಷ್ಮಣ ನಿಂಬರಗಿ ನಿರ್ದೇಶನ ನೀಡಿದರು.

‘ಪ್ರಮುಖವಾಗಿ ಗೋಕಾಕ ಹಾಗೂ ಸತ್ತಿಗೇರಿ ಗ್ರಾಮದಲ್ಲಿ ಕಾನೂನುಬಾಹಿರ ಕ್ವಾರಿಗಳು ತಲೆ ಎತ್ತಿದೆ. ಗೋಕಾಕ ಹಾಗೂ ಸವದತ್ತಿ ತಾಲ್ಲೂಕುಗಳಿಗೆ ಅತಿ ಶೀಘ್ರದಲ್ಲಿ ಎಲ್ಲ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ಭೇಟಿ ನೀಡಿ ಕ್ವಾರಿಗಳನ್ನು ಪರೀಕ್ಷಿಸಬೇಕು’ ಎಂದು ಸೂಚಿಸಿದರು.
‘ಪೊಲೀಸ್ ಅಧಿಕಾರಿಗಳಿಗಾಗಿ ಮುಂದಿನ ವಾರದಲ್ಲಿ ವಿಶೇಷ ಕಾರ್ಯಗಾರ ನಡೆಲಾಗುವುದು’ ಎಂದರು.


Spread the love

About Laxminews 24x7

Check Also

ಹುಕ್ಕೇರಿ ನಗರ ಅಭಿವೃದ್ಧಿಗೆ ಶ್ರಮಿಸಲಾಗುವದು – ಸಚಿವ ಸತೀಶ ಜಾರಕಿಹೋಳಿ

Spread the love ಹುಕ್ಕೇರಿ : ಹುಕ್ಕೇರಿ ನಗರ ಅಭಿವೃದ್ಧಿಗೆ ಶ್ರಮಿಸಲಾಗುವದು – ಸಚಿವ ಸತೀಶ ಜಾರಕಿಹೋಳಿ ಹುಕ್ಕೇರಿ ನಗರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ