Home / Uncategorized / ಮಕರ ಸಂಕ್ರಾಂತಿ’ಯು ‘ಉತ್ತರಾಯಣ ಪುಣ್ಯಕಾಲ’ವೇ.? ಇಲ್ಲಿದೆ ನಿಮ್ಮ ಅನುಮಾನಕ್ಕೆ ಉತ್ತರ.!

ಮಕರ ಸಂಕ್ರಾಂತಿ’ಯು ‘ಉತ್ತರಾಯಣ ಪುಣ್ಯಕಾಲ’ವೇ.? ಇಲ್ಲಿದೆ ನಿಮ್ಮ ಅನುಮಾನಕ್ಕೆ ಉತ್ತರ.!

Spread the love

ಈ ಪ್ರಶ್ನೆಗೆ ‘ಅಲ್ಲ’ ಎಂದವರನ್ನು ‘ಅವಿವೇಕಿಗಳು’ ‘ಹುಚ್ಚರು’ ಎಂದು ಕರೆಯುವ ಕಾಲಘಟ್ಟದಲ್ಲಿ ನಾವಿಂದು ಬದುಕುತ್ತಿದ್ದೇವೆ ಎಂಬುದು ಸುಳ್ಳಲ್ಲ. ಆದರೆ ಬಹಳಷ್ಟು ಜನ ‘ಅವಿವೇಕ’ ‘ಹುಚ್ಚು’ ಎಂದ ಮಾತ್ರಕ್ಕೆ ಒಂದು ಸಂಗತಿ ಅವಿವೇಕದ್ದಾಗುವುದಿಲ್ಲ ಮತ್ತು ಅದನ್ನು ಪ್ರತಿಪಾದಿಸುವವನು ಅವಿವೇಕಿ ಆಗುವುದಿಲ್ಲ ಎಂಬುದೂ ಸುಳ್ಳಲ್ಲ. ಮಕರ ಸಂಕ್ರಾಂತಿಯನ್ನು ಉತ್ತರಾಯಣ ಪುಣ್ಯಕಾಲವೆಂದು ಸಂಭ್ರಮಿಸುವ ಘಟನೆಯ ವಿಶ್ಲೇಷಣೆಗೆ ತೊಡಗುವ ಮುನ್ನ ಇಂಥದ್ದೊಂದು ತಿಳಿವಳಿಕೆ ನಮಗಿರಬೇಕೆಂಬ ಕಾರಣದಿಂದ ಈ ಪ್ರಸ್ತಾಪಮಾಡಿದೆನಷ್ಟೆ.

ಪ್ರತಿವರ್ಷದಂತೆ ಇವತ್ತು ಜನವರಿ ಹದಿನಾಲ್ಕು. ಮಕರ ಸಂಕ್ರಾತಿ ದಿನ. ಇದನ್ನು ‘ಉತ್ತರಾಯಣಪುಣ್ಯಕಾಲ’ವೆಂದು ಅದನ್ನು ಹಬ್ಬವಾಗಿ ಜನ ಆಚರಿಸುತ್ತಿದ್ದಾರೆ. ಬಹಳಷ್ಟು ಜನ ಸಂತೋಷದಿಂದ ಹಬ್ಬವನ್ನು ಆಚರಿಸುತ್ತಿರಬೇಕಾದರೆ ಇಂಥದ್ದೊಂದು ಪ್ರಶ್ನೆಯನ್ನು ಎತ್ತಿದರೆ ಅದು ಅವರಿಗೆ ಕಿಡಿಗೇಡಿ ಪ್ರಶ್ನೆಯಾಗಿ ತೋರುವುದು ತೀರಾ ಸಹಜವಾದದ್ದು. ಏಕೆಂದರೆ ನಮ್ಮದು ಭಾವಜೀವಿಗಳ ದೇಶ. ಇಲ್ಲಿ ಬುದ್ಧಿವಿಕಸನಕ್ಕಾಗಿ ಎತ್ತುವ ಬಹಳಷ್ಟು ಪ್ರಶ್ನೆಗಳು ಅವರಿಗೆ ‘ಭಾವನೆಗಳಿಗೆ ಧಕ್ಕೆ ತರುವ ಅಂಶಗಳಾಗಿಬಿಡುತ್ತವೆ. ಕೆಲವರು ಇವನ್ನು ಅಲಕ್ಷಿಸಿದರೆ ಹಲವರು ಸೀರಿಯಸ್ ಆಗಿ ತೆಗೆದುಕೊಂಡು ವಾಗ್ವಾದಕ್ಕೆ ನಿಲ್ಲುತ್ತಾರೆ. ಈ ಕಾರಣವೇ ಇರಬೇಕು ಇವತ್ತು ನನಗೆ ಮಕರ ಸಂಕ್ರಾಂತಿಯ ಶುಭಾಶಯ ಹೇಳಲು ಫೋನ್ ಮಾಡಿದ ಗೆಳತಿಯೊಬ್ಬಳಿಗೆ, ‘ಇವತ್ತು ಉತ್ತರಾಯಣ ಪುಣ್ಯಕಾಲ ಅಲ್ಲ ಕಣೆ, ನೀನು ಅದನ್ನು ಆಚರಿಸಿದರೆ ಅದರ ತಿಥಿ ಮಾಡಿದಂತೆ ಆಗುತ್ತೆ’ ಎಂದು ಹೇಳಿದ್ದಕ್ಕೆ ಅವಳು, ‘ಸುಮ್ಮನಿರು ಮಾರಾಯಾ, ಇಂಥದ್ದೆಲ್ಲ ಮಾತಾಡಿ ನಮಗೆ ಸಿಗೋ ಒಂದು ರಜಾಕ್ಕೂ ಕಲ್ಲ ಹಾಕ್ಬೇಡ’ ಎಂದಳು.

ಯಾರಾದರೂ ನನ್ನ ಮಾತನ್ನು ಗಂಭೀರವಾಗಿ ತೆಗೆದುಕೊಂಡರೆ, ಅದು ಚರ್ಚೆ ಹುಟ್ಟುಹಾಕಿದರೆ, ಯಾವುದೋ ಹಂತದಲ್ಲಿ ಅದು ಸರಿ ಅನ್ನಿಸಿ ಆಡಳಿತ ಮಾಡುವವರ ಹಂತಕ್ಕೆ ಹೋಗಿಬಿಟ್ಟರೆ ಈ ಸಂಬಂಧ ಕೊಡುತ್ತಿರುವ ಒಂದು ರಜೆಯೂ ಇಲ್ಲವಾಗುತ್ತದೆ ಎಂಬುದು ಅವಳ ಆತಂಕವಾಗಿತ್ತು. ಒಬ್ಬೊಬ್ಬರಿಗೆ ಒಂದೊಂದು ಚಿಂತೆ! ‘ಚಿಂತೆ ಮಾಡ್ಬೇಡ. ಯಾರೂ ಈ ಮಾತುಗಳನ್ನು ಅಷ್ಟು ಸೀರಿಯಸ್ ಆಗಿ ತೆಗೆದುಕೊಳ್ಳುವುದಿಲ್ಲ. ಒಂದು ವೇಳೆ ತೆಗೆದುಕೊಂಡರೂ ರಜೆ ಕ್ಯಾನ್ಸಲ್ ಆಗಲ್ಲ.ಇವತ್ತಿನ ಬದಲು ಇನ್ನೊಂದು ದಿನ ರಜೆ ಸಿಗುತ್ತೆ’ ಎಂದು ಸಮಾಧಾನ ಹೇಳಿದಾಗ ‘ಹಂಗಿದ್ರೆ ಓಕೆ’ ಎಂದು ಸಿಟ್ಟುಮಾಡಿಕೊಳ್ಳದೆ ಫೋನಿಟ್ಟಳು.

ನಾನು ಹೀಗೆ ಹೇಳಲು ಕಾರಣವಾಗಿದ್ದು ಕನ್ನಡದವರೇ ಆದ ಖ್ಯಾತ ವಿಜ್ಞಾನಿ ಜಿ.ಟಿ. ನಾರಾಯಣ ರಾವ್ ಅವರು ಸುಮಾರು ಮೂವತ್ತು ವರ್ಷಗಳ ಹಿಂದೆಯೇ ಅಂದರೆ ಕಳೆದ ಶತಮಾನದ ತೊಂಬತ್ತರ ದಶಕದಲ್ಲಿ ಬರೆದ ಒಂದು ವೈಜ್ಞಾನಿಕ ಲೇಖನ. ಅವರು ತಮ್ಮ ಲೇಖನದಲ್ಲಿ ಸಾವಿರಾರು ವರ್ಷಗಳ ಸೂರ್ಯನ ಚಲವವಲನಗಳನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಿ ಮತ್ತು ತಮಗಿಂತ ಹಿಂದಿನ ಹಿರಿಯ ವಿಜ್ಞಾನಿಗಳ ಮಾಡಿದ ಸಂಶೋಧನೆಗಳ ಅನುಭವವನ್ನು ಬಳಸಿಕೊಂಡು, ಜನವರಿಯಲ್ಲಿ 14 ರಂದು ಬರುವ (ಕೆಲವು ಸಲ 13 ಅಥವಾ 15) ಮಕರ ಸಂಕ್ರಾಂತಿ ಒಂದು ಕಾಲದಲ್ಲಿ ಉತ್ತರಾಯಣ ಪುಣ್ಯಕಾಲವಾಗಿದ್ದು ನಿಜ. ಆದರೆ ಈಗ ಅದು ಹಾಗೆಯೇ ಉಳಿದಿಲ್ಲ.ಈಗ ಉತ್ತರಾಯಣ ಪುಣ್ಯಕಾಲ ಜನವರಿ 14 ಕ್ಕೆ ಬದಲಾಗಿ ಡಿಸೆಂಬರ್ 21ಕ್ಕೆ ಸಂಭವಿಸುತ್ತದೆ. ಹಾಗಾಗಿ ಜನವರಿ 14ನ್ನು ವಿಶೇಷದಿನವಾಗಿ ಹಬ್ಬದಂತೆ ಆಚರಿಸುವುದರಲ್ಲಿ ಯಾವ ಅರ್ಥವೂ ಇಲ್ಲ ಎಂದು ವಾದಿಸಿದ್ದರು.

1970ಕ್ಕಿಂತ ಹಿಂದಿನ ಸರ್ಕಾರದ ವಾರ್ಷಿಕ ಪಟ್ಟಿಯಲ್ಲಿ ‘ಜನವರಿ 14 ಉತ್ತರಾಯಣ ಪುಣ್ಯಕಾಲ’ ಎಂದು ಪ್ರಕಟವಾಗುತ್ತಿತ್ತಂತೆ. ಆದರೆ ನಂತರ ದಿನಗಳಲ್ಲಿ ಇದು ಸ್ವಲ್ಪ ವೇಷ ಬದಲಿಮಾಡಿಕೊಂಡು ‘ಮಕರ ಸಂಕ್ರಾಂತಿ’ ಎಂದು ಪ್ರಕಟವಾಗುತ್ತಿದೆ. ಇದು ವಿಶೇಷ ದಿನ. ಹಬ್ಬ. ಹಾಗಾಗಿ ರಜೆ!

ಪ್ರತಿವರ್ಷವೂ ಜನವರಿಯಲ್ಲಿ ಬರುವ ಈ ಮಕರ ಸಂಕ್ರಮಣ ಇಷ್ಟು ಮಹತ್ವ ಪಡೆದುದರ ಕಾರಣವೇನು? ಭಾರತೀಯರಾದ ನಾವು ಭೂಮಿಯ ಉತ್ತರಾರ್ಧಗೋಳದ ನಿವಾಸಿಗಳು. ನಮ್ಮ ಪೂರ್ವಜ ಆದಿಮಾನವನಿಗೆ ಸೂರ್ಯ ಕಂಡ ದೃಶ್ಯವನ್ನು ವೈಜ್ಞಾನಿಕ ವಾಗಿ ಪಟ್ಟಿ ಮತ್ತು ನಕ್ಷೆಗಳ ಮೂಲಕ ಜಿಟಿ ನಾರಾಯಣ ರಾವ್ ನಿರೂಪಿಸಿದ್ದಾರೆ. (ಜೊತೆಗೆ ಇರುವ ಪಟ್ಟಿ, ಅದರ ವಿವರಣೆ, ಮತ್ತು ನಕ್ಷೆಗಳನ್ನು ಗಮನಿಸಿ)

ಅದರ ಪ್ರಕಾರ ಪ್ರಮುಖವಾದ ನಾಲ್ಕು ಸಂಕ್ರಮಣಗಳು ಸಂಭವಿಸುವಿಕೆಯ ಮುಖ್ಯಾಂಶಗಳು ಹೀಗಿವೆ

1. ಸಾವಿರಾರು ವರ್ಷಗಳ ಹಿಂದೆ ಜನವರಿ 14 ರಂದು ಸಂಭವಿಸುತ್ತಿದ್ದ ಮಕರ ಸಂಕ್ರಮಣವು ಇಂದು ಡಿಸೆಂಬರ್ 21 ರಂದು ಸಂಭವಿಸುತ್ತಿದೆ.
2. ಸಾವಿರಾರು ವರ್ಷಗಳ ಹಿಂದೆ ಜನವರಿ 14 ರಂದು ಸಂಭವಿಸುತ್ತಿದ್ದ ಮೇಷ ಸಂಕ್ರಮಣವು ಈಗ ಮಾರ್ಚ್ 21 ರಂದು ಸಂಭವಿಸುತ್ತಿದೆ.
3. ಸಾವಿರಾರು ವರ್ಷಗಳ ಹಿಂದೆ ಜನವರಿ 14 ರಂದು ಸಂಭವಿಸುತ್ತಿದ್ದ ಕರ್ಕಟಕ ಸಂಕ್ರಮಣವು ಈಗ ಜೂನ್ 22 ರಂದು ಸಂಭವಿಸುತ್ತಿದೆ.
4. ಸಾವಿರಾರು ವರ್ಷಗಳ ಹಿಂದೆ ಜನವರಿ 14 ರಂದು ಸಂಭವಿಸುತ್ತಿದ್ದ ತುಲಾ ಸಂಕ್ರಮಣವು ಈಗ ಸೆಪ್ಟಂಬರ್ 23 ರಂದು ಸಂಭವಿಸುತ್ತಿದೆ.

ಜನವರಿ 14 ಮಕರ ಸಂಕ್ರಮಣ. ಇದು ಉತ್ತರಾಯಣಾರಂಭವನ್ನು ಪ್ರತ್ಯೇಕಿಸುತ್ತದೆ. ಸಂತೋಷ ಸಂಭ್ರಮಗಳ ಆಗಮನದ ಹರಿಕಾರ. ಎಂದೇ ಪುಣ್ಯಕಾಲ.
ಜುಲೈ 14 ಕರ್ಕಾಟಕ ಸಂಕ್ರಮಣ. ಇದು ದಕ್ಷಿಣಾಯಣಾರಂಭವನ್ನು ಪ್ರತ್ಯೇಕಿಸುತ್ತದೆ. ಹಬ್ಬ ಹರಿದಿನಗಳು ಮುಗಿದು ಕಷ್ಟಕೋಟಲೆಗಳು ಆರಂಭವಾಗುವುದರ ಸೂಚನೆ. ಎಂದೇ ಪ್ರಶಸ್ತ ದಿನವಲ್ಲ.

ನಾರಾಯಣ ರಾವ್ ಅವರು ಹೇಳುವ ಪ್ರಕಾರ ಆಗಿನ ಕಾಲದಲ್ಲಿ ಉತ್ತರಾಯಣ ಪುಣ್ಯಕಾಲವು ಮಕರ ಸಂಕ್ರಮಣದ ದಿನದಂದು ಸಂಭವಿಸುತ್ತಿದ್ದುದು ನಿಜ. ಆಗ ಅದನ್ನು ಹಬ್ಬದಂತೆ ಆಚರಿಸತೊಡಗಿದ್ದೂ ತಪ್ಪಲ್ಲ. ಆದರೆ ಉತ್ತರಾಯಣ ಪುಣ್ಯಕಾಲ ಈಗ ಹಿಂದಿನಂತೆ ಮಕರ ಸಂಕ್ರಮಣ ದಿನದಂದು ಸಂಭವಿಸುತ್ತಿಲ್ಲ. ಹಾಗಾಗಿ ಈಗಲೂ ಅದನ್ನು ಹಬ್ಬದಂತೆ ಆಚರಿಸುವುದರಲ್ಲಿ ಅರ್ಥವಿಲ್ಲ. ಅವರು ಅದನ್ನು ರೂಪಕದ ಮೂಲಕ ವಿವರಿಸುತ್ತಾರೆ. ‘ಸೂರ್ಯರಾಜ ಹಳೆಯ ಸಿಂಹಾಸನವನ್ನು (ಜನವರಿ 14) ಬಿಟ್ಟು ಹೊಸ ಸಿಂಹಾಸನಕ್ಕೆ (ಡಿಸೆಂಬರ್ 21)ಹೋಗಿ ಕುಳಿತರೂ ನಮ್ಮ ಜನ ಹಳೆಯ ಸಿಂಹಾಸಕ್ಕೆ ನಮಸ್ಕಾರ ಮಾಡುತ್ತಿದ್ದಾರೆ!’

ನಾರಾಯಣರಾಯರು ತಮ್ಮ ಲೇಖನವನ್ನು ಮುಗಿಸುವುದು ಈ ಮಾತುಗಳಿಂದ: ‘ ;ನಮ್ಮ ಜೀವನ ವರ್ತಮಾನ ಕಾಲದಲ್ಲಿ ಅರ್ಥಪೂರ್ಣವಾಗಿ ಕ್ರಿಯಾಶೀಲವಾಗಿರಬೇಕಾದರೆ ನಾವು ಅನುಸರಿಸಬಹುದಾದ ಮಾರ್ಗ ಒಂದೇ. ಜಡ್ಡುಗಟ್ಟಿದ ಪರಂಪರೆಯನ್ನೂ ಕಿಲುಬುಹಿಡಿದ ಸಂಪ್ರದಾಯವನ್ನೂ ತಿರಸ್ಕರಿಸಿ ವಾಸ್ತವತೆಗೆ ಶರಣಾಗಿ ಡಿಸೆಂಬರ್ 21ನ್ನು ಉತ್ತರಾಯಣಾರಂಭವನ್ನು, ಬೇಕಾದರೆ ಪುಣ್ಯಕಾಲವೆಂಬ ಕಾರಣಕ್ಕಾಗಿ ಹಬ್ಬವೆಂದು ಕೂಡ, ಆಚರಿಸತಕ್ಕದ್ದು. ಮತ್ತು ಮಕರ ಸಂಕ್ರಮಣದ ಕೃತಕ ಪ್ರತಿಷ್ಠೆಯನ್ನು ನಿವಾರಿಸಿ ಅದನ್ನು ಇತರ ಹನ್ನೊಂದು ಸಂಕ್ರಮಣಗಳಂತೆ ಅದರ ಪಾಡಿಗೆ ಅದನ್ನು ಸ್ವಸ್ಥವಾಗಿ ಇರಲು ಬಿಡತಕ್ಕದ್ದು, ಅರಸ ತೊರೆದ ಆಸನಕ್ಕೆ ನಜರು ಒಪ್ಪಿಸುವುದಲ್ಲ! ‘ಉಣ್ಣದ ಲಿಂಗಕ್ಕೆ ಬೋನ ಹಿಡಿ ಎಂಬರಯ್ಯ.’

**
ನಾರಾಯಣ ರಾಯರ ಲೇಖನದ ಕೊನೆಯ ಪ್ಯಾರಾವೇ ನಾನು ಹೇಳಬೇಕಾದ ಬಹಳಷ್ಟು ಅಂಶಗಳನ್ನು ಹೇಳಿಬಿಟ್ಟಿದೆ. ಇತ್ತೀಚೆಗೆ ಬಿಡುಗಡೆಯಾದ ಪ್ರಪಂಚದ ವಿಜ್ಞಾನ ಸಾಧಕ ದೇಶಗಳ ಪಟ್ಟಿಯೊಂದನ್ನು ಗಮನಿಸಿದೆ. ಭಾರತದಂತಹ ಒಂದು ದೊಡ್ಡ ದೇಶ ಪ್ರಪಂಚನ ಗ್ಲೋಬನ್ನು ತಿರುಗಿಸಿದರೆ ಕಣ್ಣಿಗೇ ಕಾಣದಷ್ಟು ಚಿಕ್ಕವಿರುವ ಅನೇಕ ರಾಷ್ಟ್ರಗಳಿಗಿಂತ ಕೆಳಗಿದೆ. ಕಾರಣವೂ ಸ್ಪಷ್ಟವಿದೆ. ನಮ್ಮ ಸಂಶೋಧನೆಗಳು ಗೋಮೂತ್ರ, ಆಕಳ ಸಗಣಿ ಇಲ್ಲಿಯೇ ಗಿರಿಕಿಹೊಡೆಯುತ್ತಿವೆ. ಇಲ್ಲಿಯೇ ಎಲ್ಲದೂ ಇದೆ. ನಮ್ಮ ಪ್ರಾಚೀನರಿಗೆ ‘ಎಲ್ಲವೂ’ ಗೊತ್ತಿತ್ತು. ನಾವು ಯಾವ ದೇಶದಿಂದಲೂ ಏನನ್ನೂ ಕಲಿಯುವ ಅವಶ್ಯಕತೆಯಿಲ್ಲ. ಎಂಬ ಸ್ವಪ್ರತಿಷ್ಠೆಯಿಂದ ನೆಲಕೆದರುವಲ್ಲಿಯೇ ನಿಂತಿವೆ. ಪ್ರಪಂಚದ ಯಾರೂ ಹೇಳದಿದ್ದರೂ ನಮ್ಮ ದೇಶವು ವಿಶ್ವಗುರು ಆಗುತ್ತದೆ ಎಂದು ನಮ್ಮ ಬೆನ್ನನ್ನು ನಾವೇ ತಟ್ಟಿಕೊಳ್ಳುತ್ತಿದ್ದೇವೆ. ಈ ದೃಷ್ಟಿಕೋನ ಬದಲಾಗದಿದ್ದರೆ ಆಗುವ ನಷ್ಟ ವಿಜ್ಞಾನಕ್ಕಲ್ಲ. ನಮ್ಮ ದೇಶಕ್ಕೆ.

ಸಂಕ್ರಮಣದಂತಹ ಒಂದು ಘಟನೆ ಸ್ಪಷ್ಟವಾಗಿ ವಿಜ್ಞಾನಕ್ಕೆ ಅದರಲ್ಲಿಯೂ ಖಗೋಲ ವಿಜ್ಞಾನಕ್ಕೆ ಸಂಬಂಧಿಸಿದ ಘಟನೆಯಾದರೂ ನಮ್ಮ ಜನ ಈ ವಿಷಯದಲ್ಲಿ ವಿಜ್ಞಾನಿಗಳ ಮಾತನ್ನು ಕೇಳುವುದಕ್ಕಿಂತ ಧರ್ಮಗುರುಗಳು, ‘ಪಂಚಾಂಗಪುರುಷರ’ ಮಾತನ್ನು ಕೇಳುವುದೇ ಹೆಚ್ಚು. ಅದರಲ್ಲಿಯೂ ದೇಶದ ಜನತೆಯಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸಬೇಕಾದ ಗುರುತರ ಜವಾಬ್ದಾರಿಯನ್ನು ಹೊತ್ತಿರುವ ವಿಜ್ಞಾನಿಗಳು, ಸಂಶೋಧಕರು, ವಿಜ್ಞಾನವನ್ನು ಶಾಲಾ ಕಾಲೋಜುಗಳಲ್ಲಿ ಬೋಧಿಸುತ್ತಿರುವ ಶಿಕ್ಷಕರು ಇವರೆಲ್ಲರೂ ದೇವರು ಧರ್ಮಗಳ ವಿಷಯದಲ್ಲಿ ಧರ್ಮಗುರುಗಳ ಮಾತುಗಳಲ್ಲಿ ತೋರುತ್ತಿರುವ ‘ಪ್ರಶ್ನಾತೀತ ಶ್ರದ್ಧೆ’ ವಿಜ್ಞಾನದ ಬಗ್ಗೆ ಅವರಿಗಿರಬೇಕಾಗಿದ್ದ ‘ಪ್ರಶ್ನಾರ್ಹ ಭರವಸೆ’ ಗಿಂತ ತೀವ್ರಗೊಳ್ಳುತ್ತಿರುವುದು ದೇಶದ ವೈಜ್ಞಾನಿಕ ಭವಿಷ್ಯವನ್ನು ಮತ್ತಷ್ಟು ಕಳವಳಕಾರಿಗೊಳಿಸಿವೆ.

ಹೀಗಾಗಿ ನಮ್ಮ ಯುವ ಜನತೆಗೆ ಈ ವಿಷಯದಲ್ಲಿ ಸರಿಯಾದ ಮಾರ್ಗದರ್ಶನ ಮಾಡುವವರ ಕೊರತೆ ಉಂಟಾಗಿದೆ. ಇಂತಹ ಹೊತ್ತಿನಲ್ಲಿ ನಮ್ಮ ಯುವ ಜನತೆ ತಮ್ಮ ಸ್ವಯಂ ಅಧ್ಯಯನದಿಂದಲಾದರೂ, ಇಂತಹ ವೈಜ್ಞಾನಿಕ ಸಂಗತಿಗಳನ್ನು ಅವೈಜ್ಞಾನಿಕವಾಗಿ ನಂಬದೇ ವೈಜ್ಞಾನಿಕವಾಗಿಯೇ ಅಭ್ಯಾಸಮಾಡಿ ತಮ್ಮ ಅರಿವನ್ನು ವಿಸ್ತರಿಸಿಕೊಳ್ಳುವತ್ತ ಗಮನ ಹರಿಸಿದರೆ ಮಾತ್ರ ಈ ದೇಶ ಮೌಢ್ಯಕ್ಕೆ ಬೆನ್ನುಮಾಡಬಹುದು. ಅದೇ ನನ್ನಂಥವರಿಗೆ ಇರುವ ಭರವಸೆಯ ಬೆಳಕು.

ಲೇಖನ : ಡಾ. ರಾಜೇಂದ್ರ ಬುರಡಿಕಟ್ಟಿ


Spread the love

About Laxminews 24x7

Check Also

ಮತದಾನಕ್ಕೆ ಮೂರೇ ದಿನ ಬಾಕಿ: ಬೆಂಗಳೂರಿನಲ್ಲಿ ನಾಳೆ ಸಂಜೆಯಿಂದ ನಿಷೇಧಾಜ್ಞೆ

Spread the loveಲೋಕಸಭಾ ಚುನಾವಣೆ ಮತದಾನಕ್ಕೆ ಮೂರೇ ದಿನ ಬಾಕಿ: ಬೆಂಗಳೂರಿನಲ್ಲಿ ನಾಳೆ ಸಂಜೆಯಿಂದ ನಿಷೇಧಾಜ್ಞೆ ಜಾರಿ ಬೆಂಗಳೂರು: ಲೋಕಸಭಾ ಚುನಾವಣೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ