ಮೀನಿನ ಟ್ರೇಗಳಲ್ಲಿ ಸಾಗಿಸುತ್ತಿದ್ದ 18 ಲಕ್ಷಕ್ಕೂ ಅಧಿಕ ಮೌಲ್ಯದ ಅಕ್ರಮ ಗೋವಾ ಮದ್ಯ, ವಾಹನ ಜಪ್ತಿ
ಕಾರವಾರ:ಮೀನು ಸಾಗಿಸುವ ನೆಪದಲ್ಲಿ ಗೋವಾದಿಂದ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಬೃಹತ್ ಜಾಲವೊಂದನ್ನು ಕಾರವಾರದ ಮಾಜಾಳಿ ಚೆಕ್‌ಪೋಸ್ಟ್‌ನಲ್ಲಿ ಅಬಕಾರಿ ಅಧಿಕಾರಿಗಳು ಯಶಸ್ವಿಯಾಗಿ ಭೇದಿಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಗೋವಾ-ಕರ್ನಾಟಕ ಗಡಿಭಾಗದ ಮಾಜಾಳಿ ತನಿಖಾ ಠಾಣೆ ಬಳಿ ಕಾರ್ಯಾಚರಣೆ ನಡೆಸಿದ ಸಿಬ್ಬಂದಿ, ಗೋವಾದಿಂದ ಕಾರವಾರದ ಕಡೆಗೆ ಬರುತ್ತಿದ್ದ ಮಹೇಂದ್ರ ಬೊಲೆರೋ ಮ್ಯಾಕ್ಸ್ ಪಿಕಪ್ (ಫಿಶ್ ಕಂಟೇನರ್) ವಾಹನವನ್ನು ತಡೆದು ಪರಿಶೀಲಿಸಿದ್ದಾರೆ. ಈ ವೇಳೆ ಮೀನು ಸಾಗಿಸುವ ಪ್ಲಾಸ್ಟಿಕ್ ಟ್ರೇಗಳ ಅಡಿಯಲ್ಲಿ ಅತ್ಯಂತ ಜಾಣ್ಮೆಯಿಂದ ಅಡಗಿಸಿಟ್ಟಿದ್ದ 13 ರಟ್ಟಿನ ಪೆಟ್ಟಿಗೆಗಳು ಪತ್ತೆಯಾಗಿವೆ. ಇದರಲ್ಲಿ 156 ಬಾಟಲಿಗಳಲ್ಲಿದ್ದ ಒಟ್ಟು 117 ಲೀಟರ್ ಗೋವಾ ಮದ್ಯವನ್ನು ಅಕ್ರಮವಾಗಿ ಸಾಗಿಸಲಾಗುತ್ತಿತ್ತು.
ಈ ಕಾರ್ಯಾಚರಣೆಯಲ್ಲಿ ಅಂದಾಜು ₹1,84,800 ಮೌಲ್ಯದ ಗೋವಾ ಮದ್ಯ, ₹16,00,000 ಮೌಲ್ಯದ ಬೊಲೆರೋ ವಾಹನ ಹಾಗೂ ₹23,000 ಮೌಲ್ಯದ 46 ಪ್ಲಾಸ್ಟಿಕ್ ಟ್ರೇಗಳು ಸೇರಿದಂತೆ ಒಟ್ಟು ₹18,07,800 ಮೌಲ್ಯದ ಸೊತ್ತನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಈ ಅಕ್ರಮ ಸಾಗಾಟದ ಹಿನ್ನೆಲೆಯಲ್ಲಿ ವಾಹನದಲ್ಲಿದ್ದ ಓರ್ವನನ್ನು ಬಂಧಿಸಲಾಗಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಮಂಗಳೂರು ವಿಭಾಗದ ಅಬಕಾರಿ ಜಂಟಿ ಆಯುಕ್ತರ ನಿರ್ದೇಶನ ಹಾಗೂ ಉತ್ತರ ಕನ್ನಡ ಜಿಲ್ಲಾ ಅಬಕಾರಿ ಉಪ ಆಯುಕ್ತರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆದಿದೆ. ವಶಪಡಿಸಿಕೊಂಡ ಎಲ್ಲಾ ಮುದ್ದೆಮಾಲುಗಳನ್ನು ಮುಂದಿನ ಕಾನೂನು ಕ್ರಮಕ್ಕಾಗಿ ಕಾರವಾರದ ಅಬಕಾರಿ ಉಪ ಆಯುಕ್ತರ ಕಚೇರಿಯ ಅಬಕಾರಿ ನಿರೀಕ್ಷಕರಿಗೆ ಹಸ್ತಾಂತರಿಸಲಾಗಿದೆ. ಅಕ್ರಮ ಮದ್ಯ ಸಾಗಾಟಗಾರರ ಚಾಣಾಕ್ಷತೆಯನ್ನು ವಿಫಲಗೊಳಿಸಿದ ಅಬಕಾರಿ ಇಲಾಖೆಯ ಕಾರ್ಯಕ್ಷಮತೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
Laxmi News 24×7