Breaking News
Home / Uncategorized / ಬಜೆಟ್‍ಗೆ ತಯಾರಿ, ಅಧಿಕಾರಿಗಳ ಜೊತೆ ಸಿಎಂ ಚರ್ಚೆ

ಬಜೆಟ್‍ಗೆ ತಯಾರಿ, ಅಧಿಕಾರಿಗಳ ಜೊತೆ ಸಿಎಂ ಚರ್ಚೆ

Spread the love

ಬೆಂಗಳೂರು,ಜ.1- ಕಳೆದ ಬಜೆಟ್‍ನಲ್ಲಿ ಘೋಷಣೆ ಮಾಡಿದ್ದ ಕಾರ್ಯಕ್ರಮಗಳ ಅನುಷ್ಠಾನ, ಮುಂಬರುವ ಬಜೆಟ್‍ನಲ್ಲಿ ಹೊಸ ಯೋಜನೆಗಳ ಘೋಷಣೆ, ಕೋವಿಡ್ ಹಿನ್ನೆಲೆಯಲ್ಲಿ ರಾಜ್ಯದ ಆರ್ಥಿಕ ಸ್ಥಿತಿಗತಿ ಮತ್ತಿತರ ವಿಷಯಗಳ ಕುರಿತು ಸಿಎಂ ಯಡಿಯೂರಪ್ಪ ಅವರು ಅಧಿಕಾರಿಗಳ ಜೊತೆ ಚರ್ಚೆ ನಡೆಸಿದರು.

ನಗರದ ಹೊರವಲಯದ ಖಾಸಗಿ ರೆಸಾರ್ಟ್‍ನಲ್ಲಿ ನಡೆದ ಸಭೆಯಲ್ಲಿ ಸರ್ಕಾರದ ನೂತನ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ವಿವಿಧ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳು ಸೇರಿದಂತೆ ಮತ್ತಿತರ ಅಧಿಕಾರಿಗಳು ಭಾಗಿಯಾಗಿದ್ದರು.

ಈ ಮೊದಲು ಸಿಎಂ ಅಧಿಕೃತ ಕಚೇರಿ ಕೃಷ್ಣಾದಲ್ಲಿ ಸಭೆ ನಡೆಸಲು ತೀರ್ಮಾನಿಸಲಾಗಿತ್ತು. ಕೊನೆ ಕ್ಷಣದಲ್ಲಿ ತಮ್ಮ ನಿರ್ಧಾರವನ್ನು ಬದಲಾಯಿಸಿದ ಬಿಎಸ್‍ವೈ ನಗರದ ಹೊರವಲಯದಲ್ಲಿರುವ ರೆಸಾರ್ಟ್‍ವೊಂದರಲ್ಲಿ ಸಭೆ ನಡೆಸಿ ಆಡಳಿತ ವರ್ಗಕ್ಕೆ ಚುರುಕು ಮುಟ್ಟಿಸುವ ಪ್ರಯತ್ನ ಮಾಡಿದರು.

ಸುಮಾರು 2 ಗಂಟೆಗೂ ಹೆಚ್ಚು ಕಾಲ ನಡೆದ ಈ ಸಭೆಯಲ್ಲಿ 2020-21ನೇ ಸಾಲಿನ ಬಜೆಟ್‍ನಲ್ಲಿ ಘೋಷಣೆ ಮಾಡಿದ್ದ ಕಾರ್ಯಕ್ರಮಗಳ ಅನುಷ್ಠಾನ, ಪ್ರಸಕ್ತ ರಾಜ್ಯದ ಪರಿಸ್ಥಿತಿ, ಕೋವಿಡ್‍ನಿಂದ ರಾಜ್ಯದ ಆರ್ಥಿಕತೆ ಮೇಲೆ ಉಂಟಾಗಿರುವ ದುಷ್ಪರಿಣಾಮ, ಬಜೆಟ್‍ನಲ್ಲಿ ಘೋಷಣೆಯಾದ ಕಾರ್ಯಕ್ರಮಗಳು ಪರಿಣಾಮಕಾರಿಯಾಗಿ ಅನುಷ್ಠಾನವಾಗಿವೆಯೇ? ಹಾಗೂ ಮುಂದಿನ ಹೊಸ ಬಜೆಟ್‍ನಲ್ಲಿ ಸೇರ್ಪಡೆ ಮಾಡಬೇಕಾದ ಕಾರ್ಯಕ್ರಮಗಳು, ಕೇಂದ್ರದಿಂದ ಬರಬೇಕಾಗಿರುವ ಅನುದಾನ ಸೇರಿದಂತೆ ಮತ್ತಿತರ ವಿಷಯಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು.

ರಾಜ್ಯದಲ್ಲಿ ಈ ಬಾರಿ ಕೋವಿಡ್‍ನಿಂದಾಗಿ ಬಜೆಟ್‍ನಲ್ಲಿ ಘೋಷಣೆ ಮಾಡಿದ್ದ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಸಾಧ್ಯವಾಗಿರಲಿಲ್ಲ. ಕಳೆದ ಮಾರ್ಚ್ ಕೊನೆಯವಾರದಲ್ಲಿ ಲಾಕ್‍ಡೌನ್ ವಿಸ್ತರಣೆಮಾಡಿದ್ದರಿಂದ ಸುಮಾರು 6 ತಿಂಗಳು ಆರ್ಥಿಕ ಚಟುವಟಿಕೆಗಳೇ ಸ್ಥಬ್ಬಗೊಂಡು ಏರುಪೇರಾಗಿತ್ತು.

ಹೀಗಾಗಿ ಬಜೆಟ್‍ನಲ್ಲಿ ಪ್ರಕಟಿಸಿದ್ದ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಲು ಸಾಧ್ಯವಾಗಲಿಲ್ಲ. ಅಲ್ಲದೆ ಈ ಯೋಜನೆಗೆ ಅನುದಾನದ ಕೊರತೆ ಉಂಟಾಗಿದೆ ಎಂದು ಅಧಿಕಾರಿಗಳು ಸಿಎಂ ಗಮನಕ್ಕೆ ತಂದರು. ಬೊಕ್ಕಸಕ್ಕೆ ನಿರೀಕ್ಷಿತ ಪ್ರಮಾಣದಲ್ಲಿ ಆದಾಯ ಬರಲಿಲ್ಲ.

ಮುಖ್ಯವಾಗಿ ಅಬಕಾರಿ, ಸಾರಿಗೆ, ನೋಂದಣಿ ಮತ್ತು ಮುದ್ರಣ ಸೇರಿದಂತೆ ಸರ್ಕಾರದ ಬೊಕ್ಕಸಕ್ಕೆ ಬರಬೇಕಾಗಿದ್ದ ಆದಾಯದಲ್ಲಿ ಸುಮಾರು 30ರಿಂದ 40 ಸಾವಿರ ಕೋಟಿ ಹಿನ್ನಡೆಯಾಗಿದೆ. ಹೀಗಾಗಿ ಬಜೆಟ್‍ನಲ್ಲಿ ಇಲಾಖಾವಾರು ಮೀಸಲಿಟ್ಟಿದ್ದ ಅನುದಾನ ಡಿಸೆಂಬರ್ ಕಳೆದರೂ ಶೇ.70ರಷ್ಟನ್ನು ಖರ್ಚು ಮಾಡಲು ಸಾಧ್ಯವಾಗಲಿಲ್ಲ. ಇದಕ್ಕೆ ಆರ್ಥಿಕ ಬಿಕ್ಕಟ್ಟು ಕಾರಣ ಎಂದು ವಿವರಿಸಿದ್ದಾರೆ.

ಈ ಬಾರಿಯೂ ಬಜೆಟ್‍ನಲ್ಲಿ 25ರಿಂದ 30 ಸಾವಿರ ಕೋಟಿ ಸರ್ಕಾರಕ್ಕೆ ಹೊರೆಯಾಗುವ ಸಾಧ್ಯತೆಗಳಿವೆ. ಹೊಸ ಘೋಷಣೆಗಳನ್ನು ಮಾಡದೆ ಆರ್ಥಿಕ ಇತಿಮಿತಿಗೆ ಒತ್ತು ಕೊಟ್ಟು ಅನುಷ್ಠಾನ ಮಾಡಬಹುದಾದ ಕಾರ್ಯಕ್ರಮಗಳನ್ನು ಮಾತ್ರ ಘೋಷಣೆ ಮಾಡಬೇಕೆಂದು ಹಣಕಾಸು ಖಾತೆಯನ್ನು ಹೊಂದಿರುವ ಬಿಎಸ್‍ವೈ ಅವರಿಗೆ ಅಧಿಕಾರಿಗಳು ಸಲಹೆ ಮಾಡಿದ್ದಾರೆ.

ರಾಜ್ಯದ ಆರ್ಥಿಕ ಪರಿಸ್ಥಿತಿ ಸುಧಾರಿಸಬೇಕೆಂದರೆ ಇನ್ನೂ ಹಲವು ತಿಂಗಳು ಬೇಕು. ಜನರಿಗೆ ಹೊರಯಾಗದಂತೆ ನಾವು ಹೊಸ ತೆರಿಗೆಯನ್ನು ಹೇರುವಂತಿಲ್ಲ. ಬೊಕ್ಕಸಕ್ಕೆ ವರಮಾನ ಕೊಡುತ್ತಿದ್ದ ಇಲಾಖೆಗಳು ನಿರೀಕ್ಷಿತ ಪ್ರಮಾಣದಲ್ಲಿ ವರಮಾನ ಗಳಿಸಿಲ್ಲ.

ಸಾರಿಗೆ ಇಲಾಖೆ ಈಗಲೂ ನಷ್ಟದಲ್ಲಿದೆ. ಅಬಕಾರಿ ಇಲಾಖೆಗೆ ನೀಡಲಾಗಿದ್ದ ಗುರಿಯನ್ನು ತಲುಪಲು ಸಾಧ್ಯವಾಗುತ್ತಿಲ್ಲ. ವ್ಯಾಪಾರ ವಹಿವಾಟು ಸ್ಥಗಿತಗೊಂಡಿರುವುದರಿಂದ ಮುದ್ರಣ ಮತ್ತು ನೋಂದಣಿಯಿಂದಲೂ ಬೊಕ್ಕಸಕ್ಕೆ ವರಮಾನ ಬರುತ್ತಿಲ್ಲ. ಹೀಗಾಗಿ ಸಮತೋಲನ ಕಾಪಾಡಿಕೊಳ್ಳಬೇಕೆಂದು ಸಲಹೆ ಮಾಡಿದ್ದಾರೆ.

ಕಳೆದ ಬಜೆಟ್‍ನಲ್ಲಿ ಘೋಷಣೆ ಮಾಡಿದ್ದ ಕಾರ್ಯಕ್ರಮಗಳನ್ನು ಆದ್ಯತೆ ಮೇರೆಗೆ ಅನುಷ್ಠಾನ ಮಾಡಬೇಕು. ಮುಖ್ಯವಾಗಿ ನೀರಾವರಿ, ಲೋಕೋಪಯೋಗಿ, ವಿದ್ಯುತ್, ಶಿಕ್ಷಣ, ವಸತಿ ಸೇರಿದಂತೆ ಮತ್ತಿತರ ಪ್ರಮುಖ ಇಲಾಖೆಗಳಲ್ಲಿ ಜನರಿಗೋಸ್ಕರ ಘೋಷಣೆ ಮಾಡಿರುವ ಕಾರ್ಯಕ್ರಮಗಳನ್ನು ಆದಷ್ಟು ಶೀಘ್ರ ಅನುಷ್ಠಾನ ಮಾಡುವಂತೆ ಸಿಎಂ ಸೂಚನೆ ಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ.


Spread the love

About Laxminews 24x7

Check Also

ಕ್ಯಾನ್ಸರ್‌ ರೋಗಿಗಳಿಗೆ ಸಿಹಿಸುದ್ದಿ: 72 ಲಕ್ಷ ರೂ. ನ Cancer ಔಷಧ ಇನ್ಮುಂದೆ 3 ಲಕ್ಷಕ್ಕೆ ಸಿಗುತ್ತೆ

Spread the love ನವದೆಹಲಿ : ಕ್ಯಾನ್ಸರ್‌ ರೋಗಿಗಳಿಗೆ ಝೈಡಸ್‌ ಕಂಪನಿ ಭರ್ಜರಿ ಗುಡ್‌ ನ್ಯೂಸ್‌ ನೀಡಿದೆ. ಹೌದು 72 ಲಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ