ಬೆಳಗಾವಿ: ಕಿತ್ತೂರು ಉತ್ಸವ ರಾಜ್ಯಕ್ಕೆ ಸಿಮೀತ ಆಗದೇ ರಾಷ್ಟ್ರೀಯ ಉತ್ಸವವಾಗಿ ಹೊರ ಹೊಮ್ಮಬೇಕು. ಅದೇ ರೀತಿ ಬ್ರಿಟಿಷರ ವಿರುದ್ಧ ಕಿತ್ತೂರು ಸಂಸ್ಥಾನ ದಿಗ್ವಿಜಯ ಸಾಧಿಸಿದ ಅಕ್ಟೋಬರ್ 23ನ್ನು ಕರ್ನಾಟಕದ ಸ್ವಾಭಿಮಾನ ದಿನವನ್ನಾಗಿ ಘೋಷಣೆ ಮಾಡಬೇಕು ಎಂದು ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಕೋರಿದರು.
ಕಿತ್ತೂರಿನ ಕೋಟೆ ಆವರಣದ ಕಿತ್ತೂರು ರಾಣಿ ಚನ್ನಮ್ಮ ವೇದಿಕೆಯಲ್ಲಿ ಗುರುವಾರ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಜರುಗಿದ ಕಿತ್ತೂರು ಉತ್ಸವ ಉದ್ಘಾಟನಾ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಮಹಾತ್ಮಾ ಗಾಂಧೀಜಿ ಜಯಂತಿ ವಿಶ್ವ ಅಹಿಂಸಾ ದಿನ, ಅಂಬೇಡ್ಕರ್ ಜಯಂತಿ ವಿಶ್ವ ಜ್ಞಾನ ದಿನ, ಡಾ. ಅಬ್ದುಲ್ ಕಲಾಂ ಜಯಂತಿ, ವಿಶ್ವ ವಿದ್ಯಾರ್ಥಿ ದಿನ ಹೇಗೆ ಆಚರಿಸಲಾತ್ತಿದೆಯೋ, ಅದೇ ರೀತಿ ಕಿತ್ತೂರು ರಾಣಿ ಚನ್ನಮ್ಮಾಜಿ ನೇತೃತ್ವದಲ್ಲಿ 1824, ಅಕ್ಟೋಬರ್ 23ರಂದು ಬ್ರಿಟಿಷರಿಗೆ ಮೊಟ್ಟ ಮೊದಲ ಸೋಲಿನ ರುಚಿ ತೋರಿಸಿದ ಐತಿಹಾಸಿಕ ಘಟನೆಯನ್ನು ಚಿರಸ್ಥಾಯಿಗೊಳಿಸಲು “ಕರ್ನಾಟಕದ ಸ್ವಾಭಿಮಾನ ದಿನ”ವನ್ನಾಗಿ ಘೋಷಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಗಮನಹರಿಸಬೇಕು ಎಂದರು.
ಮಹಾತ್ಮಾ ಗಾಂಧೀಜಿ, ಭಗತ್ ಸಿಂಗ್, ಝಾನ್ಸಿ ರಾಣಿ ಲಕ್ಷ್ಮೀಬಾಯಿ ಅವರ ಸಮಾಧಿಗಳನ್ನು ರಾಷ್ಟ್ರೀಯ ಸ್ಮಾರಕವಾಗಿ ಘೋಷಿಸಿದಂತೆ ಮುಂದಿನ ಉತ್ಸವದೊಳಗೆ ಬೈಲಹೊಂಗಲದಲ್ಲಿರುವ ಕಿತ್ತೂರು ಚನ್ನಮ್ಮ ಸಮಾಧಿಯನ್ನು ರಾಷ್ಟ್ರೀಯ ಸ್ಮಾರಕವಾಗಿ ಘೋಷಿಸಬೇಕು ಎಂದು ಬಸವಜಯ ಮೃತ್ಯುಂಜಯ ಸ್ವಾಮೀಜಿ ಆಗ್ರಹಿಸಿದರು.
ರಾಷ್ಟ್ರೀಯ ಉತ್ಸವ ಘೋಷಿಸಿ: ಬೈಲೂರಿನ ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ ಮಾತನಾಡಿ, ಕರ್ನಾಟಕ ಸರ್ಕಾರ ರಾಜ್ಯಮಟ್ಟದ ಕಿತ್ತೂರು ಉತ್ಸವ ಮಾಡುತ್ತಿದೆ. ರಾಜ್ಯ ಸರ್ಕಾರ ಕೇಂದ್ರಕ್ಕೆ ಪತ್ರ ಬರೆದು ರಾಷ್ಟ್ರೀಯ ಉತ್ಸವವಾಗಿ ಘೋಷಿಸುವಂತೆ ಮಾಡಬೇಕು. ರಾಣಿ ಚನ್ನಮ್ಮ ದೇಶದ ಮೊಟ್ಟ ಮೊದಲ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿ ಎಂದು ಕೇಂದ್ರ ಸರ್ಕಾರ ಘೋಷಿಸಬೇಕು. ಕಿತ್ತೂರಿನಲ್ಲಿ ರಾಣಿ ಚನ್ನಮ್ಮನ ಹೆಸರಿನಲ್ಲಿ ಗ್ರಾಮೀಣ ಹೆಣ್ಣುಮಕ್ಕಳಿಗೆ ಎಂಜಿನಿಯರಿಂಗ್, ಮೆಡಿಕಲ್ ಕಾಲೇಜು ಆರಂಭಿಸಬೇಕು. ಇನ್ನು ರಾಜ್ಯದಲ್ಲಿ ನಡೆಯುವ ಎಲ್ಲಾ ಸಾಂಸ್ಕೃತಿ ಉತ್ಸವ, ಕಾರ್ಯಕ್ರಮಗಳಲ್ಲಿ ಬಸವಣ್ಣನವರ ಭಾವಚಿತ್ರ ಅಳವಡಿಸಬೇಕು ಎಂದು ಹೇಳಿದರು.
ಕಿತ್ತೂರು ಉತ್ಸವ ಸಂಭ್ರಮ ದಿಲ್ಲಿಗೆ ಕೇಳುತ್ತಿದೆ: ಉತ್ಸವ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಬಂಗಾರಪ್ಪನವರ ಕಾಲದಲ್ಲಿ ಚಿಕ್ಕದಾಗಿ ಆರಂಭವಾದ ಕಿತ್ತೂರು ಉತ್ಸವ ಈಗ ನಾಡಿನ ಗಮನ ಸೆಳೆಯುತ್ತಿದೆ. ಚನ್ನಮ್ಮನ ಹೋರಾಟ ಆದರ್ಶಗಳನ್ನು ಅಳವಡಿಸಿಕೊಂಡು, ಚನ್ನಮ್ಮನ ಹೋರಾಟ ದಿಲ್ಲಿಯವರೆಗೆ ಕೇಳುವಂತೆ ಉತ್ಸವ ಮಾಡುತ್ತಿದ್ದೇವೆ. ಉತ್ಸವದ ಜೊತೆಗೆ ಅಭಿವೃದ್ಧಿ ಕಾರ್ಯಗಳು ಆಗಬೇಕು. ನಮ್ಮ ಸರ್ಕಾರ ಬಂದ ಮೇಲೆ ಕಿತ್ತೂರು ಭಾಗದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಆಗುತ್ತಿವೆ. ಲೊಕೋಪಯೋಗಿ ಇಲಾಖೆಯಿಂದ ಪ್ರತಿ ವರ್ಷ ಕಿತ್ತೂರಿನ ಅಭಿವೃದ್ಧಿ ಕೆಲಸಗಳಿಗೆ ಐದು ಕೋಟಿ ರೂ. ಅನುದಾನ ನೀಡಲಾಗುತ್ತಿದೆ. ಮೂರನೇ ವರ್ಷವೂ ಐದು ಕೋಟಿ ಅನುದಾನ ನೀಡಲಾಗುವುದು. ಕಿತ್ತೂರಿನ ಅಭಿವೃದ್ಧಿಗೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದರು.
Laxmi News 24×7