ಹುಬ್ಬಳ್ಳಿ : ಪ್ರಿಯಾಂಕ್ ಖರ್ಗೆ ಅವರು ಇವತ್ತು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಅವರ ವಿರುದ್ದ ಯಾರೇ ಮಾತನಾಡಿದ್ರೂ ಅವರನ್ನು ಜೈಲಿಗೆ ಹಾಕಿಸುತ್ತಾರೆ. ಅವರಿಗೆ ತೊಂದರೆ ಮಾಡುತ್ತಿದ್ದಾರೆ. ಆರ್ಎಸ್ಎಸ್ ಬೆಂಬಲಿಸುವವರ ಮೇಲೆ ಕ್ರಮ ಕೈಗೊಳ್ಳುತ್ತಿದ್ದಾರೆ. ಮುಂದಕ್ಕೆ ಈ ರಾಜ್ಯದ ಉಪಮುಖ್ಯಮಂತ್ರಿಗಳಾಗಬೇಕು ಎಂಬ ಕನಸಿಟ್ಟುಕೊಂಡು ಈ ರೀತಿಯ ಕೆಲಸ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಆರೋಪಿಸಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಸಮ್ಮುಖದಲ್ಲಿ ಆದ ಒಪ್ಪಂದದಂತೆ ಸಿದ್ದರಾಮಯ್ಯ ಸಿಎಂ ಆಗಿ ಮುಂದುವರೆಯಲಿದ್ದಾರೆ. ಖರ್ಗೆ ಪುತ್ರ ಪ್ರಿಯಾಂಕ್ ಉಪಮುಖ್ಯಮಂತ್ರಿಯನ್ನಾಗಿ ಮಾಡುವ ಮಾತುಕತೆ ಆಗಿದೆ. ಹೀಗಾಗಿಯೇ, ರಾಜ್ಯದಲ್ಲಿ ಭಾರತ ಮಾತಾ ಕೀ ಜೈ, ಆರ್ಎಸ್ಎಸ್ ಬೆಂಬಲಿಸುವ ಜನರನ್ನು ಜೈಲಿಗಟ್ಟುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ನವೆಂಬರ್ ಕ್ರಾಂತಿ ಎಂದು ತುಮಕೂರು ಕ್ಷೇತ್ರದ ಶಾಸಕ ರಾಜಣ್ಣ ಹೇಳುತ್ತಲೇ ಕಾಂಗ್ರೆಸ್ ನಾಯಕರು ಅವರಿಂದ ರಾಜೀನಾಮೆ ಪಡೆದರು. ಅದೇ ರೀತಿ ಪಾಕಿಸ್ತಾನ ಪರ ಘೋಷಣೆ ಕೂಗಿದವರನ್ನು ರಾಜ್ಯಸಭಾ ನಾಯಕರನ್ನಾಗಿ ಕಾಂಗ್ರೆಸ್ ಮಾಡುತ್ತಿದೆ ಎಂದು ಹರಿಹಾಯ್ದಿದ್ದಾರೆ.
ಸತೀಶ್ ಜಾರಕಿಹೊಳಿ ಸಿಎಂ ಆದರೆ ನಮ್ಮ ಬೆಂಬಲವಿದೆ : ಇವತ್ತು ಮುಖ್ಯಮಂತ್ರಿ ಮಗ ಯತೀಂದ್ರ ಅವರು ಮುಂದಿನ ದಿನಗಳಲ್ಲಿ ಸತೀಶ್ ಜಾರಕಿಹೊಳಿ ಅವರಿಗೆ ಸಿಎಂ ಸ್ಥಾನಕ್ಕೆ ಅವಕಾಶ ಮಾಡಿಕೊಡುತ್ತೇವೆ ಎಂಬ ಅರ್ಥದಲ್ಲಿ ಮಾತನಾಡಿದ್ದಾರೆ. ವಾಲ್ಮೀಕಿ ಸಮುದಾಯಕ್ಕೆ ಸೇರಿದ ಸತೀಶ್ ಜಾರಕಿಹೊಳಿ ಸಿಎಂ ಆದರೆ ನಮ್ಮ ಬೆಂಬಲವಿದೆ. ಪಕ್ಷದಲ್ಲಿ ಅವರು ದುಡಿದಿದ್ದಾರೆ. ಅವಕಾಶ ಸಿಕ್ಕಲ್ಲಿ ಸಿಎಂ ಆದರೆ ನಮಗೆ ಸಂತೋಷವಿದೆ ಎಂದರು.
ಸರ್ಕಾರ ಅಘೋಷಿತ ತುರ್ತು ಪರಿಸ್ಥಿತಿ ಜಾರಿಮಾಡಿದೆ : ರಾಜ್ಯದಲ್ಲಿ ಅಘೋಷಿತ ತುರ್ತುಪರಿಸ್ಥಿತಿ ನಿರ್ಮಾಣವಾಗಿದೆ. 1975ರಲ್ಲಿ ಇಂದಿರಾಗಾಂಧಿ ತಮ್ಮ ವಿರುದ್ಧ ಯಾರಾದರೂ ಮಾತನಾಡಿದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದರು. ಅದೇ ರೀತಿಯಲ್ಲಿ ಇಂದು ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಘೋಷಿತ ತುರ್ತು ಪರಿಸ್ಥಿತಿ ಜಾರಿಮಾಡಿದೆ. ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ.
ಇದೀಗ ರಾಜ್ಯದಲ್ಲಿ ವಿಧಾನ ಪರಿಷತ್ ಸದಸ್ಯರ ಅವಧಿ ಮುಗಿದಿದ್ದು, ಐದು ಸದಸ್ಯರ ನೇಮಕಾತಿ ನಡೆಯಬೇಕಿದೆ. ಹೀಗಾಗಿ ಈ ಕುರಿತಂತೆ ಬಿಜೆಪಿ ನಾಯಕರು ಸಭೆ ನಡೆಸುತ್ತಿದ್ದಾರೆ. ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದ್ದು, ಈ ಬಗ್ಗೆ ಬಿಜೆಪಿ ನಾಯಕರು ಸಭೆ ನಡೆಸಿ ವರದಿಯನ್ನು ರಾಜಾಧ್ಯಕ್ಷರು ಹಾಗೂ ಕೇಂದ್ರದ ನಾಯಕರಿಗೆ ಸಲ್ಲಿಸಲಿದ್ದಾರೆ. ಅವರು ಅಂತಿಮ ಪಟ್ಟಿ ಸಿದ್ದಪಡಿಸಲಿದ್ದಾರೆ ಎಂದು ಹೇಳಿದ್ದಾರೆ.
Laxmi News 24×7