ಶಿವಮೊಗ್ಗ: ರಾಜ್ಯದ ಪ್ರಮುಖ ಆನೆ ಬಿಡಾರಗಳಲ್ಲಿ ಒಂದಾದ ಸಕ್ರೆಬೈಲು ಆನೆ ಬಿಡಾರದ ನಾಲ್ಕು ಗಂಡಾನೆಗಳು ತೀವ್ರ ಅನಾರೋಗ್ಯಕ್ಕೆ ತುತ್ತಾಗಿವೆ. ಇದರಲ್ಲಿ ಆನೆ ಬಿಡಾರದ ಆನೆಗಳಾದ ಸಾಗರ್, ಬಾಲಣ್ಣ ಹಾಗೂ ಸೆರೆ ಹಿಡಿದು ತಂದಿರುವ ವಿಕ್ರಾಂತ್ ಹಾಗೂ ಅಡಕಬಡಕ ಆನೆಗಳು ಅನಾರೋಗ್ಯದಿಂದ ಬಳಲುತ್ತಿವೆ.
ಬಾಲಣ್ಣ ಆನೆಯ ಬಲಗಡೆಯ ಕಿವಿಗೆ ಗಂಭೀರವಾದ ಗಾಯವಾಗಿದೆ. ಗಾಯದಿಂದ ಕೀವು ಉಂಟಾಗಿದ್ದು, ಇದೀಗ ಕಿವಿ ತುಂಡಾಗಿ ಬೀಳುವಂತಾಗಿದೆ. ಇದಕ್ಕೆ ಚಿಕಿತ್ಸೆ ಮುಂದುವರೆಸಲಾಗಿದೆ. ಬಾಲಣ್ಣ ಆನೆ ಶಿವಮೊಗ್ಗ ದಸರಾದಲ್ಲಿ ಭಾಗಿಯಾಗಲು ಬರುವ ಮುನ್ನ ಕಾಲಿಗೆ ನೋವು ಮಾಡಿಕೊಂಡಿದ್ದ. ಇದಕ್ಕಾಗಿ ಆತನ ಕಿವಿಗೆ ಇಂಜೆಕ್ಷನ್ ನೀಡಲಾಗಿತ್ತು. ಈ ಇಂಜೆಕ್ಷನ್ ರಿಯಾಕ್ಷನ್ ಆಗಿ ಆನೆಯ ಕಿವಿ ಉದುರುವಂತಾಗಿದೆ.
ಇನ್ನೊಂದು ಸಾಗರ ಆನೆಯೂ ಸಹ ದಸರಾದಲ್ಲಿ ಭಾಗಿಯಾಗಿ ವಾಪಸ್ ಹೋದ ನಂತರ ಅಜೀರ್ಣ ಉಂಟಾಗಿ, ಅದು ಅನಾರೋಗ್ಯಕ್ಕೆ ತುತ್ತಾಗಿತ್ತು. ಹೀಗಾಗಿ, ಅದರ ಹೊಟ್ಟೆ ಬಳಿ ಇಂಜೆಕ್ಷನ್ ನೀಡಿದ್ದಕ್ಕೆ ಅದಕ್ಕೂ ಗಾಯವಾಗಿ ಕೀವು ಉಂಟಾಗಿತ್ತು.
ಇದಲ್ಲದೆ, ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ಬಳಿ ಸೆರೆ ಹಿಡಿದು ತಂದಿದ್ದ ವಿಕ್ರಾಂತ್ ಎಂಬ ಆನೆಯನ್ನು ತರಬೇತಿಗಾಗಿ ಕ್ರಾಲ್ನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಇದರ ಹಿಂಬದಿಯ ಬಲಗಾಲಿನಲ್ಲಿ ಗಾಯವಾಗಿ, ಹುಣ್ಣಾಗಿ ಹುಳಗಳಾಗಿವೆ. ಇದೂ ಸಹ ಓಡಾಡಲು ಕಷ್ಟಪಡುವಂತಹ ಸ್ಥಿತಿಯಲ್ಲಿದೆ. ಇದಕ್ಕೆ ಸದ್ಯ ಕ್ರಾಲ್ನಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ.
ಕೊಲ್ಲೂರು ಬಳಿಯ ಸಿದ್ದಾಪುರದಲ್ಲಿ ಸೆರೆಯಾಗಿದ್ದ ಅಡಕಬಡಕ ಆನೆಯನ್ನು ಕ್ರಾಲ್ನಲ್ಲಿಟ್ಟು ತರಬೇತಿ ನೀಡಲಾಗುತ್ತಿದೆ. ತರಬೇತಿ ವೇಳೆ ಇನ್ನೊಂದು ಆನೆ ತಳ್ಳಿದ ಪರಿಣಾಮ ಮುಗ್ಗರಿಸಿ ಬಿದ್ದು, ಅದರ ಎಡಗಾಲಿಗೆ ಗಾಯವಾಗಿದೆ. ಸದ್ಯ ಆನೆಗಳಿಗೆ ಹುಲಿ ಮತ್ತು ಸಿಂಹಧಾಮದ ವೈದ್ಯ ಡಾ. ಮುರುಳಿ ಅವರು ಚಿಕಿತ್ಸೆ ನೀಡುತ್ತಿದ್ದಾರೆ. ಸಕ್ರೆಬೈಲಿನಲ್ಲಿ ಒಟ್ಟು 25 ಆನೆಗಳಿವೆ. ಇದರಲ್ಲಿ ಈಗ ನಾಲ್ಕು ಆನೆಗಳಿಗೆ ಅನಾರೋಗ್ಯವಾಗಿರುವುದರಿಂದಾಗಿ ಪ್ರಾಣಿ ಪ್ರಿಯರಿಗೆ ನೋವುಂಟಾಗಿದೆ.
Laxmi News 24×7