Breaking News

ಮೂರು ದಿನಗಳ ಅದ್ಧೂರಿ ಕಿತ್ತೂರು ಚೆನ್ನಮ್ಮ ಉತ್ಸವ: 5 ಕೋಟಿ ಅನುದಾನ

Spread the love

ಬೆಳಗಾವಿ: “ರಾಣಿ ಚೆನ್ನಮ್ಮನ ಕಿತ್ತೂರು ಉತ್ಸವಕ್ಕೆ ಎಲ್ಲಾ ರೀತಿಯ ಸಿದ್ಧತೆ ಕೈಗೊಳ್ಳಲಾಗಿದೆ. 200ನೇ ವರ್ಷದ ಸಂಭ್ರಮಾಚರಣೆಗೂ ಕಡಿಮೆ ಆಗದಂತೆ ಈ ಬಾರಿಯೂ ಉತ್ಸವ ಅದ್ಧೂರಿಯಾಗಿ ಆಚರಿಸಲಾಗುವುದು” ಎಂದು ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ ತಿಳಿಸಿದರು.

ಕಿತ್ತೂರಿನಲ್ಲಿ ಉತ್ಸವದ ಉಪ ಸಮಿತಿಗಳ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಅ.23, 24 ಮತ್ತು 25 ರಂದು ಮೂರು ದಿನಗಳ ಉತ್ಸವ ನಡೆಯಲಿದೆ. ಮೊದಲ ದಿನ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಸಚಿವರಾದ ಸತೀಶ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್​, ಶಿವರಾಜ ತಂಗಡಗಿ, ಸಂತೋಷ ಲಾಡ್​ ಸೇರಿ ಮತ್ತಿತರರು ಈ ವೇಳೆ ಉಪಸ್ಥಿತರಿರಲಿದ್ದಾರೆ. ಸಮಾರೋಪ ಸಮಾರಂಭಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬರುತ್ತೇನೆ ಅಂತಾ ಹೇಳಿದ್ದಾರೆ” ಎಂದು ತಿಳಿಸಿದರು.

ಉತ್ಸವಕ್ಕೆ ಖ್ಯಾತ ಗಾಯಕಿ ಅನುರಾಧಾ ಭಟ್ ಆಗಮನ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಮಾತನಾಡಿ, “ಈ ವರ್ಷ ಕಿತ್ತೂರು ಉತ್ಸವಕ್ಕೆ 5 ಕೋಟಿ ಪೈಕಿ 3.5 ಕೋಟಿ ಅನುದಾನ ಬಿಡುಗಡೆ ಆಗಿದೆ. ಸದ್ಯಕ್ಕೆ ಯಾವುದೇ ರೀತಿ ಅನುದಾನ ಕೊರತೆ ಇಲ್ಲ. ಹಿಂದಿನ ವರ್ಷದ ಸಣ್ಣಪುಟ್ಟ ಬಾಕಿ ಹಣವನ್ನು ಪಾವತಿಸಲು ಅದು ಸಾಧ್ಯವಾಗಲಿದೆ. 23ರಂದು ಖ್ಯಾತ ಗಾಯಕಿ ಅನುರಾಧಾ ಭಟ್, 24ರಂದು ಸರಿಗಮಪ ತಂಡ, 25ರಂದು ಬಾಲಿವುಡ್ ಖ್ಯಾತ ಗಾಯಕ ನೀತಿ ಮೋಹನ್ ಆಗಮಿಸುತ್ತಿದ್ದಾರೆ. ಜೊತೆಗೆ ಸ್ಥಳೀಯ ಮತ್ತು ಬೇರೆ ಜಿಲ್ಲೆಗಳ ಕಲಾವಿದರಿಗೆ ಆದ್ಯತೆ ನೀಡಲಾಗಿದೆ. ಮುಖ್ಯ ವೇದಿಕೆ ಸೇರಿ ಮೂರು ವೇದಿಕೆಗಳಲ್ಲಿ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಚಟುವಟಿಕೆಗಳು ನಡೆಯಲಿವೆ. ಅದೇ ರೀತಿ ಭವ್ಯ ಮೆರವಣಿಗೆಯನ್ನು ನಾಡಿನ ಜನರು ಕಣ್ತುಂಬಿಕೊಳ್ಳಲಿದ್ದಾರೆ” ಎಂದರು.

“ಸ್ಥಳೀಯ ಮಟ್ಟಕ್ಕೆ ಕಿತ್ತೂರು ಉತ್ಸವ ಸಿಮೀತವಾಗುತ್ತಿರುವ ವಿಚಾರಕ್ಕೆ ಖ್ಯಾತ ಕಲಾವಿದರನ್ನು ಆಹ್ವಾನಿಸುತ್ತಿದ್ದೇವೆ. ಹಿಂದಿನ ವರ್ಷ 200ನೇ ವಿಜಯೋತ್ಸವ ಯಾವ ರೀತಿ ಆಚರಿಸಿದ್ದೇವೋ ಅದೇ ರೀತಿ ಈ ಬಾರಿಯೂ ಉತ್ಸವ ಆಚರಿಸಲಾಗುವುದು. ಕಿತ್ತೂರು ಉತ್ಸವವನ್ನು ರಾಷ್ಟ್ರ ಹಬ್ಬವಾಗಿ ಆಚರಿಸಲಾಗುತ್ತಿದೆ. ಹಿಂದಿನ ವರ್ಷ ಮಾನ್ಯ ಮುಖ್ಯಮಂತ್ರಿಗಳು ಸಮಾರೋಪ ಸಮಾರಂಭಕ್ಕೆ ಆಗಮಿಸಿ ರಾಣಿ ಚೆನ್ನಮ್ಮ ಅವರ ಕೊಡುಗೆ ಬಗ್ಗೆ ಬಹಳ ಚೆನ್ನಾಗಿ ಮಾತನಾಡಿದ್ದಾರೆ. ಉತ್ಸವ ಉದ್ಘಾಟಿಸುವವರು, ಗೋಷ್ಠಿಯಲ್ಲಿ ಪಾಲ್ಗೊಳ್ಳುವವರು ಚೆನ್ನಮ್ಮನವರ ಅಭಿಮಾನಿಗಳಾಗಿದ್ದಾರೆ. ಅಂಥವರನ್ನೇ ಈ ಬಾರಿಯೂ ಆಹ್ವಾನಿಸುತ್ತಿದ್ದೇವೆ” ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಹೇಳಿದರು.

ಡ್ರೋನ್ ಶೋಗೆ ನಿರ್ಬಂಧ: “ಉತ್ತರ ಭಾರತ ಕಲಾವಿದರಿಗೆ ಈ ನಾಡಿನ ಇತಿಹಾಸ ತಿಳಿಸುವ ಉದ್ದೇಶದಿಂದ ಅಲ್ಲಿನ ಕಲಾವಿದರನ್ನು ಆಹ್ವಾನಿಸಲಾಗುತ್ತಿದೆ. ಸ್ಯಾಂಡಲವುಡ್​ ಖ್ಯಾತ ಕಲಾವಿದರು ಬರುತ್ತಿದ್ದಾರೆ. ಸುಮಾರು ಕಲಾವಿದರ ಹೆಸರು ಪಟ್ಟಿಯಲ್ಲಿದೆ. ಒಂದೆರಡು ಅಚ್ಚರಿ ಹೆಸರುಗಳಿವೆ. ಅವರು ಆಗಮಿಸಿ ಈ ಭಾಗದ ಜನರಿಗೆ ಮನರಂಜನೆಯ ರಸದೌತಣ ಉಣಬಡಿಸಲಿದ್ದಾರೆ. ಈ ವರ್ಷ ಡ್ರೋನ್ ಶೋ ಸಾಧ್ಯವಾಗುವುದಿಲ್ಲ. ಎರಡು ವರ್ಷದ ಹಿಂದೆ ಕಿತ್ತೂರು ಉತ್ಸವಕ್ಕೆ ಕೇವಲ 1 ಕೋಟಿ ಮಾತ್ರ ಬರುತ್ತಿತ್ತು. ಆದರೆ ಎರಡು ವರ್ಷಗಳಿಂದ 5 ಕೋಟಿ ಅನುದಾನ ಬರುತ್ತಿದೆ. ಮುಂದಿನ ವರ್ಷ ಮಾಸ್ಟರ್ ಪ್ಲಾನ್ ಸಿದ್ಧಪಡಿಸಿ ಇನ್ನೂ ಅದ್ಧೂರಿಯಾಗಿ ಆಚರಿಸಲಾಗುವುದು” ಎಂದು ಪ್ರಶ್ನೆಯೊಂದಕ್ಕೆ ಜಿಲ್ಲಾಧಿಕಾರಿ ಉತ್ತರಿಸಿದರು.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ