ಸಿಎಂ ಸ್ಥಾನ ಸಿಗುವ ವಿಚಾರ ನನಗೆ ಮತ್ತು ಭಗವಂತನಿಗೆ ಮಾತ್ರ ಗೊತ್ತಿದೆ: ಡಿ.ಕೆ.ಶಿ
ಹಾಸನ: ನನಗೆ ಸಿಎಂ ಸ್ಥಾನ ಸಿಗುವ ವಿಚಾರ ನನಗೆ ಮತ್ತು ಆ ಭಗವಂತನಿಗೆ ಮಾತ್ರ ಗೊತ್ತಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಇಂದು (ಮಂಗಳವಾರ) ಶ್ರೀ ಹಾಸನಾಂಬ ದೇವಾಲಯಕ್ಕೆ ಕುಟುಂಬಸಮೇತ ಭೇಟಿ ನೀಡಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು.
ಭಕ್ತನಿಗೂ ಭಗವಂತನಿಗೂ ವ್ಯವಹಾರ ನಡೆಯುವ ಸ್ಥಳ ದೇವಾಲಯ. ವರ್ಷಕ್ಕೊಮ್ಮೆ ಮಾತ್ರ ದರ್ಶನ ನೀಡುವ ಇಲ್ಲಿನ ಶಕ್ತಿ ದೇವತೆಯ ಭಾಗ್ಯ ನಮ್ಮಲ್ಲರಿಗೆ ಸಿಕ್ಕಿದೆ ಎಂದು ಡಿಕೆಶಿ ಹೇಳಿದರು.
ದುರ್ಗಿಯ ಸ್ವರೂಪಿ, ಶಾರದೆ ಸ್ವರೂಪಿಯಾದ ತಾಯಿ ಹಾಸನಾಂಬೆಯ ದರ್ಶನ ಭಾಗ್ಯ ನಮ್ಮಲ್ಲರಿಗೂ ಸಿಕ್ಕಿದೆ. ವರ್ಷಕ್ಕೊಮ್ಮೆ ಮಾತ್ರ ದರ್ಶನ ನೀಡುವ ಶಕ್ತಿ ದೇವತೆಯಾಗಿದ್ದು, ಭಕ್ತರ ದುಃಖವನ್ನು ಪರಿಹರಿಸುತ್ತಾಳೆ ಎಂದರು.
ಭಕ್ತರು ತಮಗೆ ನೆಮ್ಮದಿ, ಶಾಂತಿಯ ಬದುಕನ್ನು ಕೊಡು ಎಂದು ತಾಯಿಯಲ್ಲಿ ಬೇಡಿಕೊಳ್ಳುತ್ತಾರೆ. ಭಕ್ತನಿಗೂ ಭಗವಂತನಿಗೂ ವ್ಯವಹಾರ ನಡೆಯುವ ಸ್ಥಳ ದೇವಾಲಯ. ಎಲ್ಲ ಜನರು ವಿಶೇಷವಾದ ದರ್ಶನ ಪಡೆಯುತ್ತಿದ್ದಾರೆ. ನಾನು ಪ್ರತೀ ವರ್ಷವೂ ದೇವಿಯ ದರ್ಶನ ಪಡೆಯಲು ಬರುತ್ತಿದ್ದೇನೆ. ಅಂತೆಯೇ ಇಂದು ನಾನು, ನನ್ನ ಪತ್ನಿಯ ಕುಟುಂಬಸ್ಥರು ದೇವಿಯ ದರ್ಶನ ಪಡೆದಿದ್ದೇವೆ ಎಂದು ಹೇಳಿದರು.
ಈ ಬಾರಿ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಅವರ ನೇತೃತ್ವದಲ್ಲಿ ಜಿಲ್ಲಾಡಳಿತ ಬಹಳ ಚೆನ್ನಾಗಿ ವ್ಯವಸ್ಥೆ ಮಾಡಿದ್ದಾರೆ. ಕೆಲವು ರಾಜಕಾರಣಿಗಳಿಗೆ ತೊಂದರೆ ಆಗಿರಬಹುದು. ಹೀಗಾಗಿ ಎಲ್ಲರಿಗೂ ನಾನು ಧನ್ಯವಾದ ಅರ್ಪಿಸುತ್ತೇನೆ. ನಾನು ಆ ತಾಯಿಯ ಭಕ್ತ. ಇಂದು ದರ್ಶನ ಭಾಗ್ಯ ಒದಗಿಸಿಕೊಟ್ಟಿದ್ದಾರೆ. ಈ ಜಿಲ್ಲೆಯಲ್ಲಿ ಶಾಂತಿ, ನೆಮ್ಮದಿಯಿಂದ ನಡೆಯುತ್ತಿದೆ ಎಂದು ಹೇಳಿದರು.
ಇದೇ ವೇಳೆ, ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಭೈರೇಗೌಡ, ಸಂಸದ ಶ್ರೇಯಸ್ ಎಂ.ಪಟೇಲ್, ಶಾಸಕ ಕೆ.ಎಂ.ಶಿವಲಿಂಗೇಗೌಡ ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ಮುಂತಾದವರಿದ್ದರು.
Laxmi News 24×7