ಬೆಂಗಳೂರು, (ಅಕ್ಟೋಬರ್ 14): ಹಿರಿಯ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ (IPS Alok Kumar) ವಿರುದ್ಧದ ಫೋನ್ ಟ್ಯಾಪಿಂಗ್ ಪ್ರಕರಣಕ್ಕೆ (Phone Tapping Case) ಸಂಬಂಧಿಸಿದಂತೆ ರಾಜ್ಯ ಸರ್ಕಾರ ಆದೇಶಿಸಿದ್ದ ಇಲಾಖಾ ತನಿಖೆಯನ್ನು ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿ (CAT) ರದ್ದುಗೊಳಿಸಿದೆ. ಅಲ್ಲದೇ ತಡೆಹಿಡಿಯಲಾಗಿದ್ದ ಅವರ ಬಡ್ತಿ ಮತ್ತು ಇತರ ಸೌಲಭ್ಯಗಳನ್ನು ನೀಡುವಂತೆ ಆದೇಶಿಸಿದೆ. ಸರ್ಕಾರದ ಇಲಾಖಾ ತನಿಖೆ ಆದೇಶ ಪ್ರಶ್ನಿಸಿ ಅಲೋಕ್ ಕುಮಾರ್ ಸಿಎಟಿ ಮೊರೆ ಹೋಗಿದ್ದರು. ಆದ್ರೆ, ಇಬ್ಬರು ನ್ಯಾಯಮೂರ್ತಿಗಳ ನಡುವೆ ವಿಭಿನ್ನ ತೀರ್ಪು ಹಿನ್ನೆಲೆಯಲ್ಲಿ ಸಿಎಟಿ ಮುಖ್ಯಸ್ಥ ನ್ಯಾಯಮೂರ್ತಿ ರಣ್‌ಜೀತ್ ಬಳಿ ಹೋಗಿದ್ದು, ಎರಡೂ ಕಡೆಯ ವಾದ ಪ್ರತಿವಾದ ಆಲಿಸಿ ಇಂದು (ಅಕ್ಟೋಬರ್ 14) ಈ ತೀರ್ಪು ನೀಡಿದ್ದಾರೆ. ಇದರೊಂದಿಗೆ ರಾಜ್ಯ ಸರ್ಕಾರಕ್ಕೆ ಹಿನ್ನೆಡೆಯಾದಂತಾಗಿದೆ.
ಏನಿದು ಪ್ರಕರಣ?
2019ರಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಆಡಳಿತದಲ್ಲಿದ್ದಾಗ ಫೋನ್ ಟ್ಯಾಪಿಂಗ್ ಹಗರಣವು ಭಾರೀ ಸದ್ದು ಮಾಡಿತ್ತು. ಈ ಪ್ರಕರಣದಲ್ಲಿ ಅಂದಿನ ಗೃಹ ಇಲಾಖೆಯ ಕೆಲವು ಅಧಿಕಾರಿಗಳ ಪಾತ್ರದ ಕುರಿತು ತನಿಖೆ ನಡೆದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ, ಅಲೋಕ್ ಕುಮಾರ್ ಸೇರಿದಂತೆ ಕೆಲವು ಅಧಿಕಾರಿಗಳ ವಿರುದ್ಧ ಇಲಾಖಾ ತನಿಖೆಗೆ ರಾಜ್ಯ ಸರ್ಕಾರ ಆದೇಶಿಸಿತ್ತು. ಸರ್ಕಾರದ ಈ ಆದೇಶವನ್ನು ಪ್ರಶ್ನಿಸಿ ಅಲೋಕ್ ಕುಮಾರ್ ಅವರು ಸಿಎಟಿ ಮೊರೆ ಹೋಗಿದ್ದರು.
ಅಲೋಕ್ ಕುಮಾರ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ, ಸಿಎಟಿಯ ಇಬ್ಬರು ನ್ಯಾಯಾಧೀಶರ ನಡುವೆ ವಿಭಿನ್ನ ತೀರ್ಪುಗಳು ಹೊರಬಂದಿದ್ದವು. ಒಬ್ಬ ನ್ಯಾಯಾಧೀಶರು ಸರ್ಕಾರದ ಆದೇಶವನ್ನು ಎತ್ತಿಹಿಡಿದರೆ, ಇನ್ನೊಬ್ಬರು ರದ್ದುಗೊಳಿಸಬೇಕೆಂದು ಅಭಿಪ್ರಾಯಪಟ್ಟಿದ್ದರು. ಈ ಭಿನ್ನಾಭಿಪ್ರಾಯದ ಕಾರಣದಿಂದ ಪ್ರಕರಣವನ್ನು ಸಿಎಟಿ ಮುಖ್ಯಸ್ಥರಾದ ನ್ಯಾಯಮೂರ್ತಿ ರಣ್‌ಜೀತ್ ಸಿಂಗ್ ಅವರ ಬಳಿಗೆ ಕಳುಹಿಸಲಾಗಿತ್ತು.
Laxmi News 24×7