ಕಾವೇರಿ ಆರತಿ ನೆರವೇರಿಸಿದ ಪಂಡಿತರಿಗೆ ಸನ್ಮಾನ: ವಾರದಲ್ಲಿ ಮೂರು ದಿನ ಕಾವೇರಿ ಆರತಿ: ಡಿಸಿಎಂ ಡಿ.ಕೆ. ಶಿವಕುಮಾರ್
ಬೆಂಗಳೂರು: ವಾರಣಾಸಿಯ ಗಂಗಾ ಆರತಿ ಮಾದರಿಯಲ್ಲಿ ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಮಂಡ್ಯ ಜಿಲ್ಲೆ ಕೆಆರ್ಎಸ್ನಲ್ಲಿ ಐತಿಹಾಸಿಕ ಕಾವೇರಿ ಆರತಿಯನ್ನು ಅಭೂತಪೂರ್ಣವಾಗಿ ನೆರವೇರಿಸಿದ ಪಂಡಿತ, ಪುರೋಹಿತರಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಸನ್ಮಾನಿಸಿದರು.
ಮಂಡ್ಯ ಜಿಲ್ಲೆ ಕೆಆರ್ಎಸ್ನ ಬೃಂದಾವನ ಉದ್ಯಾನದಲ್ಲಿ ಸತತ 5 ದಿನಗಳ ಕಾಲ ಕಾವೇರಿ ಆರತಿಯಲ್ಲಿ ಪಾಲ್ಗೊಂಡ 55 ಮಂದಿ ಅರ್ಚಕರನ್ನು ಶಿವಕುಮಾರ್ ಅವರು ಕುಮಾರಪಾರ್ಕ್ ಗಾಂಧಿ ಭವನ ರಸ್ತೆಯಲ್ಲಿರುವ ಸರ್ಕಾರಿ ನಿವಾಸದಲ್ಲಿ ಶುಕ್ರವಾರ ಫಲ, ತಾಂಬೂಲ, ವಸ್ತ್ರ ನೀಡಿ ಸಾಂಪ್ರದಾಯಿಕವಾಗಿ ಅಭಿನಂದಿಸಿದರು.
ಕಾವೇರಿ ಆರತಿ ನಿಲ್ಲುವುದಿಲ್ಲ: ಈ ಸಂದರ್ಭದಲ್ಲಿ ಮಾತನಾಡಿದ ಡಿಸಿಎಂ ಅವರು,”ಕಾವೇರಿ ಆರತಿಯನ್ನು ನಿಲ್ಲಿಸುವುದಿಲ್ಲ, ಮುಂದುವರೆಸುತ್ತೇವೆ. ಪ್ರಯತ್ನಕ್ಕೆ ಸೋಲಾಗಬಹುದು ಪ್ರಾರ್ಥನೆಗೆ ಸೋಲಾಗುವುದಿಲ್ಲ. ನಾವೆಲ್ಲರೂ ಸೇರಿ ಪ್ರಾರ್ಥನೆ ಸಲ್ಲಿಸೋಣ. ಆರತಿಗಾಗಿ ಸ್ಟೇಡಿಯಂ ಮಾದರಿ ಮಂಟಪ ನಿರ್ಮಾಣ ಮಾಡೋಣ ಎಂದರು.
ಪ್ರತಿ ಶುಕ್ರವಾರ, ಶನಿವಾರ, ಭಾನುವಾರ ಕಾವೇರಿ ಆರತಿ ನಡೆಯಲಿದೆ. ಇದರಿಂದ ಪುರೋಹಿತರಿಗೆ, ಸ್ಥಳೀಯರಿಗೆ ಉದ್ಯೋಗ ದೊರೆಯಬೇಕು. ನಾನು ಅಥವಾ ಇನ್ಯಾರೋ ಪುರೋಹಿತರಾಗಲು ಸಾಧ್ಯವಿಲ್ಲ. ನೀವೇ ಆ ಕೆಲಸವನ್ನು ನಿರ್ವಹಿಸಬೇಕಾಗುತ್ತದೆ. ಬೆಳಗ್ಗೆ ಹೊತ್ತು ಭಕ್ತಾಧಿಗಳು ಕಾವೇರಿಗೆ ಪೂಜೆ ಸಲ್ಲಿಸುವ ರೀತಿಯಲ್ಲೂ ವ್ಯವಸ್ಥೆ ಮಾಡಲಾಗುವುದು. ವಾರ ಪೂರ್ತಿ ಆರತಿ ಕಾರ್ಯಕ್ರಮ ನಡೆಯಬೇಕು ಎಂಬುದು ನನ್ನ ಆಸೆಯಾಗಿದೆ ಎಂದು ತಿಳಿಸಿದರು.
ಕಾವೇರಿ ಆರತಿ ಮೂಲಕ ರಾಜ್ಯದಲ್ಲಿ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಲಾಗಿದೆ. ಜೀವನದಿ ಕಾವೇರಿಗೆ ಪೂಜೆ ಸಲ್ಲಿಸುವ ಭಾಗ್ಯ ನಮಗೆ ಹಾಗೂ ನಿಮಗೆ ಸಿಕ್ಕಿದೆ. ಕಾವೇರಿ ಮಾತೆಗೆ ಪ್ರಾರ್ಥನೆ ಸಲ್ಲಿಸಲು ಕೆಲವರು ಅಡಚಣೆ ಮಾಡುತ್ತಿದ್ದಾರೆ. ಅಡಚಣೆ ಮಾಡುವವರಿಗೆ ನಾವು ಏನೂ ಮಾಡಲು ಆಗುವುದಿಲ್ಲ ಎಂದರು
Laxmi News 24×7