ಮೈಸೂರು: ಬಿಹಾರ ಚುನಾವಣೆ ಹಿನ್ನೆಲೆ ಜಿಎಸ್ಟಿ ಸರಳೀಕರಣಗೊಳಿಸಿರುವ ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ರಾಜ್ಯಕ್ಕೆ ಅಂದಾಜು 15 ಸಾವಿರ ಕೋಟಿ ರೂ.ಗಳ ನಷ್ಟವಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಮೈಸೂರಿನ ತಮ್ಮ ನಿವಾಸದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ, ಜಿಎಸ್ಟಿ ಉತ್ಸವ ಆಚರಿಸುವಂತೆ ಕೇಂದ್ರ ಸರ್ಕಾರ ತಿಳಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿದರು. 2017 ರಲ್ಲಿ ಕೇಂದ್ರ ಸರ್ಕಾರವೇ ಜಿಎಸ್ಟಿ ಜಾರಿಗೆ ತಂದು ಜಿಎಸ್ಟಿ ದರ ನಿಗದಿಪಡಿಸಿತು. ಕಳೆದ ಎಂಟು ವರ್ಷದಿಂದ ಹೆಚ್ಚಿನ ದರ ಪಡೆದಿರುವ ಕೇಂದ್ರ ಸರ್ಕಾರ, ಆ ಹಣವನ್ನು ಮರಳಿ ನೀಡುವರೇ? ತಾವೇ ಹೆಚ್ಚಿಸಿದ ಜಿಎಸ್ಟಿ ದರವನ್ನು ತಾವೇ ಕಡಿಮೆ ಮಾಡಿ, ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುವ ಕೆಲಸದಲ್ಲಿ ಕೇಂದ್ರ ತೊಡಗಿದೆ. ಬಿಹಾರದ ಚುನಾವಣೆಯಿರುವ ಕಾರಣ, ಜಿಎಸ್ಟಿಯನ್ನು ಸರಳೀಕರಣಗೊಳಿಸಿ, ಕಡಿತಗೊಳಿಸಿದ್ದೇವೆ ಎಂದು ಹೇಳಿಕೊಳ್ಳುವ ಅವಶ್ಯಕತೆಯಿಲ್ಲ ಎಂದು ಟಾಂಗ್ ನೀಡಿದರು.
ರಾಜ್ಯಕ್ಕೆ ಕೇಂದ್ರದ ಸುಮಾರು 17,000 ಕೋಟಿ ಅನುದಾನದಲ್ಲಿ ಖೋತಾ: ಕೇಂದ್ರದಿಂದ ತೆರಿಗೆ ಹಣವಾಗಿ ಕೇವಲ 3200 ಕೋಟಿ ರೂ.ಗಳನ್ನು ರಾಜ್ಯಕ್ಕೆ ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಉತ್ತರಪ್ರದೇಶಕ್ಕೆ ಶೇ.18 ರಷ್ಟು ನೀಡುತ್ತಿದ್ದು, ರಾಜ್ಯಕ್ಕೆ ಕೇವಲ ಶೇ. 3.5 ರಷ್ಟು ನೀಡುತ್ತಿರುವುದು ಅನ್ಯಾಯ. ಕರ್ನಾಟಕ 4.5 ಲಕ್ಷ ಕೋಟಿ ತೆರಿಗೆ ರೂಪದಲ್ಲಿ ಕೇಂದ್ರಕ್ಕೆ ನೀಡಿದರೆ, ನಮಗೆ ರೂಪಾಯಿಗೆ ಕೇವಲ 14 ಪೈಸೆ ಮಾತ್ರ ದೊರೆಯುತ್ತದೆ. 15 ನೇ ಹಣಕಾಸು ಆಯೋಗದಲ್ಲಿ ರಾಜ್ಯಕ್ಕೆ ನೀಡಲಾಗಿದ್ದ ವಿಶೇಷ ಅನುದಾನವನ್ನು ಕೇಂದ್ರ ವಿತ್ತಸಚಿವರು ರದ್ದುಪಡಿಸಿದರು. ಆಯೋಗದ ಶಿಫಾರಸಿನಂತೆ 5,490 ಕೋಟಿ ಹಾಗೂ ಕೆರೆಗಳ ಅಭಿವೃದ್ದಿ 3000 ಕೋಟಿ, ರಸ್ತೆ ನಿರ್ಮಾಣಕ್ಕೆ 3000 ಕೋಟಿ, ಭದ್ರಾ ಮೇಲ್ದಂಡೆ ಯೋಜನೆಗೆ 5000 ಕೊಟಿ ರೂ.ಗಳ ಅನುದಾನವನ್ನು ನಮಗೆ ನೀಡಲಾಗಿಲ್ಲ. ಒಟ್ಟಾರೆ 17,000 ಕೋಟಿ ರೂ. ಬರಬೇಕಾಗಿದ್ದ ಅನುದಾನ ಖೋತಾ ಆಗಿದೆ. ಕಳೆದ ಬಾರಿಯಂತೆ ಈ ಬಾರಿಯೂ ಅಗತ್ಯಬಿದ್ದರೆ ನ್ಯಾಯಾಲಯದ ನೆರವು ಪಡೆದು ಕೇಂದ್ರದ ಅನುದಾನ ಪಡೆಯಲಾಗುವುದು ಎಂದರು.
ಬಿಜೆಪಿ ಸಂಸದರಿಗೆ ರಾಜ್ಯದ ಹಿತ ಬೇಕಾಗಿಲ್ಲ: ಕೇಂದ್ರದ ಕಡಿಮೆ ಅನುದಾನದ ನಡುವೆ ಗ್ಯಾರಂಟಿಗಳ ವೆಚ್ಚವನ್ನು ಭರಿಸುವುದು ಸರ್ಕಾರಕ್ಕೆ ಸವಾಲಾಗಿದ್ದರೂ, ಸವಾಲನ್ನು ದಿಟ್ಟತನದಿಂದ ಎದುರಿಸಲಾಗುವುದು. ಜಿಎಸ್ಟಿ ಸರಳೀಕರಣದಿಂದ ರಾಜ್ಯ ಸರ್ಕಾರಗಳು ಹೆಚ್ಚು ನಷ್ಟ ಎದುರಿಸಲಿವೆ. ಕರ್ನಾಟಕಕ್ಕೆ ಇದರಿಂದ ವಾರ್ಷಿಕ ಅಂದಾಜು 15 ಸಾವಿರ ಕೋಟಿ ನಷ್ಟವಾಗಲಿದೆ. ಕೇಂದ್ರ ಸರ್ಕಾರ , ಎನ್ ಡಿ ಎ ಗೆ ಬರುವ ರಾಜ್ಯಗಳ ಅನುಕೂಲಕ್ಕೆ ತಕ್ಕಂತೆ ಜಿಎಸ್ ಟಿ ಪರಿಹಾರವನ್ನು ನೀಡುತ್ತಿದೆ. ಕರ್ನಾಟಕದ ಬಿಜೆಪಿ ಸಂಸದರಿಗೆ ಮೋದಿ ಅವರನ್ನು ಹೊಗಳುವುದೇ ಕೆಲಸವಾಗಿದ್ದು, ರಾಜ್ಯದ ಹಿತಚಿಂತನೆ ಮಾಡುತ್ತಿಲ್ಲ ಎಂದು ಟೀಕಿಸಿದರು.
ಅಕ್ಟೋಬರ್ 7 ರೊಳಗೆ ಸಮೀಕ್ಷೆ ಪೂರ್ಣಗೊಳ್ಳುವ ಭರವಸೆಯಿದೆ: ರಾಜ್ಯದಲ್ಲಿ ಜಾತಿ ಸಮೀಕ್ಷೆ ಪ್ರಗತಿ ಬಗ್ಗೆ ಪ್ರತಿಕ್ರಿಯೆ ನೀಡಿ, ರಾಜ್ಯದಲ್ಲಿ ಈಗಾಗಲೇ ಸುಮಾರು 80 ಲಕ್ಷ ಮನೆಗಳಿಂದ 3 ಕೋಟಿ ಜನಸಂಖ್ಯೆಯ ಸಮೀಕ್ಷೆ ಪೂರ್ಣಗೊಂಡಿದ್ದು, ಅಕ್ಟೋಬರ್ 7ರೊಳಗೆ ಸಮೀಕ್ಷೆ ಕಾರ್ಯ ಮುಗಿಯುವ ಭರವಸೆಯಿದೆ. 1.80 ಕೋಟಿ ಕುಟುಂಬಗಳ ಸಮೀಕ್ಷೆ ನಡೆಯಬೇಕಿದೆ. ಸಮೀಕ್ಷೆಯ ಪ್ರಗತಿಯನ್ನು ಗಮನಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
Laxmi News 24×7