Breaking News

ಪೇಸ್‌ಮೇಕರ್‌ ಚಿಕಿತ್ಸೆ ಯಶಸ್ವಿ, ಮಲ್ಲಿಕಾರ್ಜುನ ಖರ್ಗೆ ಆಸ್ಪತ್ರೆಯಿಂದ ಬಿಡುಗಡೆ

Spread the love

ಬೆಂಗಳೂರು: ಅನಾರೋಗ್ಯಕ್ಕೊಳಗಾಗಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪೇಸ್​​ ಮೇಕರ್​ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲಾಗಿದ್ದು, ಗುರುವಾರ ಸಂಜೆ ಬೆಂಗಳೂರಿನ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್​ ಮಾಡಿರುವ ಕಾಂಗ್ರೆಸ್​, ಮಲ್ಲಿಕಾರ್ಜುನ ಖರ್ಗೆ ಅವರು ಗುರುವಾರ ಸಂಜೆ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಶೀಘ್ರದಲ್ಲೇ ದೈನಂದಿನ ಕಾರ್ಯಕ್ಕೆ ಮರಳಲಿದ್ದಾರೆ ಎಂದು ತಿಳಿಸಿದೆ.

ಖರ್ಗೆ ಚೇತರಿಕೆ ಕಾಣುತ್ತಿದ್ದಾರೆ. ಅವರಿಗೆ ಶುಭ ಹಾರೈಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು. ಶೀಘ್ರದಲ್ಲೇ ವೈದ್ಯರ ಸಲಹೆಯ ಬಳಿಕ ಅವರು ತಮ್ಮ ಚಟುವಟಿಕೆಗಳಿಗೆ ಮರಳಲಿದ್ದಾರೆ ಎಂದು ತಿಳಿಸಲಾಗಿದೆ.

ಬಿಹಾರ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬಿಡುವಿಲ್ಲದ ಪ್ರಚಾರದಲ್ಲಿ ಭಾಗಿಯಾದ ಖರ್ಗೆ ಅವರು, ತಲೆಸುತ್ತು ಮತ್ತು ಉಸಿರಾಟದ ಸಮಸ್ಯೆಯ ಹಿನ್ನೆಲೆಯಲ್ಲಿ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾಖಲಾಗಿದ್ದರು. ಗುರುವಾರ ಪ್ರಧಾನಿ ನರೇಂದ್ರ ಮೋದಿ ಕರೆ ಮಾಡಿ ಆರೋಗ್ಯ ವಿಚಾರಿಸಿ, ಶೀಘ್ರ ಗುಣಮುಖರಾಗುವಂತೆ ಶುಭ ಹಾರೈಸಿದ್ದರು.

ಈ ಕುರಿತು ಪ್ರಧಾನಿ ಮೋದಿ ಕೂಡ ಎಕ್ಸ್​ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದರು. ಖರ್ಗೆಜಿ ಅವರೊಂದಿಗೆ ಮಾತನಾಡಿ, ಅವರ ಆರೋಗ್ಯ ವಿಚಾರಿಸಿದ್ದೇನೆ. ಶೀಘ್ರ ಚೇತರಿಕೆಗೆ ಪ್ರಾರ್ಥಿಸುತ್ತೇನೆ ಎಂದು ಹಾರೈಸಿದ್ದರು.

ಪೇಸ್​​​ ಮೇಕರ್​ ಅಳವಡಿಕೆ ಶಸ್ತ್ರಚಿಕಿತ್ಸೆಯ ಬಳಿಕ ಖರ್ಗೆ ಅವರು ಶೀಘ್ರದಲ್ಲೇ ಕಾರ್ಯಕ್ಕೆ ಮರಳಲಿದ್ದಾರೆ. ಪೇಸ್​ ಮೇಕರ್​ ಶಸ್ತ್ರಚಿಕಿತ್ಸೆ ಶೀಘ್ರ ಮತ್ತು ಸಣ್ಣ ವೈದ್ಯಕೀಯ ಕ್ರಿಯೆಯಾಗಿದ್ದು, ಇದೀಗ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಖರ್ಗೆ ಅವರ ಕುಟುಂಬ ತಿಳಿಸಿದೆ.

ಉಸಿರಾಟದ ತೊಂದರೆ ಹಾಗೂ ಜ್ವರ ಕಾಣಿಸಿಕೊಂಡ ಕಾರಣ ಮಂಗಳವಾರ ಸಂಜೆ ಖರ್ಗೆ ಅವರನ್ನು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಿಗೆ ಹೃದಯ ನಿಯಂತ್ರಕ (Pacemaker) ಅಳವಡಿಸಬೇಕಿದೆ ಎಂದು ಪುತ್ರ ಹಾಗು ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ ನೀಡಿದ್ದರು.

ಸಿಎಂ ಸಿದ್ದರಾಮಯ್ಯನವರು ಬುಧವಾರ ಆಸ್ಪತ್ರೆಗೆ ಭೇಟಿ ನೀಡಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದರು. ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ್ದರು. ಈ ವೇಳೆ, ಅವರು ಬಳಲಿಕೆಯಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ರುಟಿನ್ ಚೆಕ್​ಅಪ್​ ಮಾಡಿಸಿಕೊಂಡಿದ್ದಾರೆ. ಅವರ ಆರೋಗ್ಯ ಚೆನ್ನಾಗಿದೆ. ಅವರು ನಮ್ಮ ಜೊತೆ ಚೆನ್ನಾಗಿನೇ ಮಾತನಾಡಿದ್ದಾರೆ. ಅವರ ಆರೋಗ್ಯ ಸಹಜವಾಗಿದೆ ಎಂದು ಹೇಳಿದ್ದರು.

ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಆರ್‌.ಪಾಟೀಲ್ ಪ್ರಕಟಣೆ ಹೊರಡಿಸಿ, ಖರ್ಗೆ ಅವರಿಗೆ ಉಸಿರಾಟ ಸಮಸ್ಯೆ ಕಾಣಿಸಿಕೊಂಡಿತ್ತು. ವೈದ್ಯರು ನಿರಂತರ ನಿಗಾ ವಹಿಸಿ ಚಿಕಿತ್ಸೆ ನೀಡಿದ್ದರಿಂದ ಈಗ ಚೇತರಿಸಿಕೊಂಡಿದ್ದಾರೆ. ಯಾವುದೇ ಆತಂಕಪಡುವ ಅಗತ್ಯವಿಲ್ಲ ಎಂದು ತಿಳಿಸಿದ್ದರು.

ಏನಿದು ಪೇಸ್​ ಮೇಕರ್?​: ಪೇಸ್ ಮೇಕರ್ ಒಂದು ಸಣ್ಣ ಎಲೆಕ್ಟ್ರಾನಿಕ್ ಸಾಧನ. ಶಸ್ತ್ರಚಿಕಿತ್ಸೆಯ ಮೂಲಕ ಇದನ್ನು ಅಳವಡಿಸಲಾಗುತ್ತದೆ. ನಿಯಮಿತವಾಗಿ ಹೃದಯ ಬಡಿತವನ್ನು ನಿರ್ವಹಿಸಲು ಇದು ಸಹಾಯ ಮಾಡುತ್ತದೆ. ಹೃದಯ ಬಡಿತ ತುಂಬಾ ನಿಧಾನವಾಗಿದ್ದಾಗ ಅಥವಾ ಅನಿಯಮಿತವಾಗಿದ್ದಾಗ ಈ ಸಾಧನ ಹೃದಯಕ್ಕೆ ವಿದ್ಯುತ್ ಸಂಕೇತಗಳನ್ನು ಕಳುಹಿಸುತ್ತದೆ. ಪೇಸ್‌ಮೇಕರ್ ಹೃದಯ ಬಡಿತವನ್ನು ನಿಯಂತ್ರಿಸುತ್ತದೆ ಹಾಗು ಹೃದಯ ಸರಿಯಾದ ಲಯದಲ್ಲಿ ಬಡಿಯಲು ನೆರವಾಗುತ್ತದೆ.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ