ಮೈಸೂರು: ಆಯುಧ ಪೂಜೆಯ ದಿನವಾದ ನಿನ್ನೆ(ಬುಧವಾರ) 14 ದಸರಾ ಆನೆಗಳ ತೂಕ ಹಾಕಲಾಯಿತು. ಭೀಮ ಆನೆಯ ತೂಕ 440 ಕೆ.ಜಿ ಹೆಚ್ಚಳವಾಗಿದ್ದು ಕಂಡುಬಂದಿದ್ದು, ಗಜಪಡೆಯಲ್ಲಿ ಇವನೇ ಬಲಶಾಲಿಯಾಗಿದ್ದಾನೆ.
ಶಿಬಿರಗಳಿಂದ ಅರಮನೆಗೆ ಬಂದಾಗ ಯಾವ ಆನೆ ಎಷ್ಟು ತೂಕವಿತ್ತು, ಈಗ ಎಷ್ಟು ತೂಕವಿದೆ ಎಂಬ ಮಾಹಿತಿ ಪಡೆಯಲು ಆನೆಗಳನ್ನು ತೂಕ ಹಾಕಲಾಗುತ್ತದೆ.
| ಆನೆಗಳು | ಅರಮನೆಗೆ ಬಂದಾಗ(ಕೆ.ಜಿ) | ಹೆಚ್ಚಳವಾದ ತೂಕ(ಕೆ.ಜಿ) | ಒಟ್ಟು ತೂಕ(ಕೆ.ಜಿ) |
|---|---|---|---|
| ಅಭಿಮನ್ಯು | 5635 | 275 | 5910 |
| ಲಕ್ಷ್ಮಿ | 3940 | 210 | 4150 |
| ಮಹೇಂದ್ರ | 5365 | 245 | 5590 |
| ಕಂಜನ್ | 522 | 345 | 5570 |
| ಶ್ರೀಕಂಠ | 5860 | 320 | 6180 |
| ಏಕಲವ್ಯ | 5695 | 390 | 6085 |
| ಭೀಮ | 5905 | 440 | 6345 |
| ಧನಂಜಯ | 5650 | 340 | 5990 |
| ಕಾವೇರಿ | 3235 | 225 | 3460 |
| ಗೋಪಿ | 5245 | 255 | 5500 |
| ಹೇಮಾವತಿ | 2675 | 235 | 2910 |
| ಸುಗ್ರೀವ | 5895 | 350 | 6245 |
| ರೂಪ | 3360 | 40 | 3400 |
| ಪ್ರಶಾಂತ | 5160 | 50 | 5210 |
ಲೋಕಾಯುಕ್ತ ಕಚೇರಿ ರಸ್ತೆಯಲ್ಲಿರುವ ದರ್ಗಾದಲ್ಲಿ ಎಲ್ಲ ಆನೆಗಳಿಗೂ ಪೂಜೆ ಮಾಡಿ ಶುಭ ಹಾರೈಸಿ ಕಳುಹಿಸುವ ಸಂಪ್ರದಾಯ ನಡೆದುಕೊಂಡು ಬಂದಿದ್ದು, ಇಂದಿಗೂ ಮುಂದುವರೆದಿದೆ.
ಇಂದು ಸಂಜೆ ದಸರಾ ಗಜಪಡೆಯ ನಾಯಕ ಅಭಿಮನ್ಯು 750 ಕೆ.ಜಿ ತೂಕದ ಚಿನ್ನದ ಅಂಬಾರಿಯಲ್ಲಿ ಅಧಿದೇವತೆ ಶ್ರೀ ಚಾಮುಂಡೇಶ್ವರಿ ದೇವಿಯನ್ನು ಹೊತ್ತು ಸಾಗುವ ಅಪರೂಪದ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಕೋಟ್ಯಂತರ ಜನರು ಕಾತರದಿಂದ ಕಾಯುತ್ತಿದ್ದಾರೆ.
ಸಿಎಂ ಸಿದ್ದರಾಮಯ್ಯ ಸೇರಿದಂತೆ ಗಣ್ಯರು ಪುಷ್ಪಾರ್ಚನೆ ಮಾಡುವ ಮೂಲಕ ಜಂಬೂ ಸವಾರಿಗೆ ಚಾಲನೆ ನೀಡುವರು. ಬಳಿಕ ಅಭಿಮನ್ಯು ಆನೆ ಅರಮನೆ ಬಳಿಯಿಂದ ಚಿನ್ನದ ಅಂಬಾರಿ ಹೊತ್ತು ಕೆ.ಆರ್.ವೃತ್ತ, ಸಯ್ಯಾಜಿರಾವ್ ರಸ್ತೆ, ಆಯುರ್ವೇದಿಕ್ ವೃತ್ತ, ಬಂಬೂ ಬಜಾರ್ ಮೂಲಕ ಬನ್ನಿಮಂಟಪದವರೆಗೆ ಸುಮಾರು 5 ಕಿ.ಮೀ. ದೂರ ಸಾಗಲಿದೆ. ಆಕರ್ಷಕ ಸ್ತಬ್ಧ ಚಿತ್ರಗಳು, ಕಲಾತಂಡಗಳು ಜಂಬೂ ಸವಾರಿ ಮೆರವಣಿಗೆಯ ಮೆರುಗು ಹೆಚ್ಚಿಸಲಿವೆ.
ಅರಮನೆಯಲ್ಲಿ ಆಸನದ ವ್ಯವಸ್ಥೆ: ಜಂಬೂ ಸವಾರಿ ವೀಕ್ಷಣೆಗೆ ಅಂಬಾವಿಲಾಸ ಅರಮನೆ ಮುಂಭಾಗ ಮೈಸೂರು ಜಿಲ್ಲಾಡಳಿತ ಸುಮಾರು 45 ಸಾವಿರ ಮಂದಿಗೆ ಆಸನದ ವ್ಯವಸ್ಥೆ ಮಾಡಿದೆ. ಅಂಬಾರಿ ಸಾಗುವ ಮಾರ್ಗದುದ್ದಕ್ಕೂ ರಸ್ತೆಯ ಎರಡೂ ಬದಿಗಳಲ್ಲಿ ಜನರು ಕುಳಿತುಕೊಳ್ಳಲು ವ್ಯವಸ್ಥೆ ಕಲ್ಪಿಸಲಾಗಿದೆ. ರಾತ್ರಿ 7 ಗಂಟೆಗೆ ಬನ್ನಿಮಂಪಟದಲ್ಲಿ ಪಂಜಿನ ಕವಾಯತು ನಡೆಯಲಿದೆ. ಇದರೊಂದಿಗೆ ದಸರಾ ಆಚರಣೆ ಸಮಾಪನಗೊಳ್ಳಲಿದೆ.
ಪೊಲೀಸ್ ಭದ್ರತೆ: ಜಂಬೂ ಸವಾರಿ ಸಾಗುವ ಮಾರ್ಗದುದ್ದಕ್ಕೂ ಹಾಗೂ ಮೈಸೂರು ನಗರದಲ್ಲಿ ಎರಡನೇ ಹಂತದ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ನಗರದಲ್ಲಿ ಭದ್ರತೆಗೆ ಸುಮಾರು 6,384 ಪೊಲೀಸರನ್ನು ನಿಯೋಜಿಸಲಾಗಿದ್ದು, 30 ಸಾವಿರಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಜಂಬೂ ಸವಾರಿಯ ಸುತ್ತಲೂ ಕಮಾಂಡೋಗಳ ಕಾವಲು ಇರಲಿದೆ. ಯಾವುದೇ ಜನಸಂದಣಿ ಉಂಟಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಪಾಸ್ ಇಲ್ಲದವರಿಗೆ ಪ್ರವೇಶ ಇರುವುದಿಲ್ಲ: ಜಂಬೂ ಸವಾರಿಯು ಸುಗಮ ಹಾಗೂ ಸುರಕ್ಷಿತವಾಗಿ ಸಾಗಲು ಪೊಲೀಸರು ಹಾಗೂ ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. 10 ಕಡೆಗಳಲ್ಲಿ ಸಹಾಯವಾಣಿ ಕೇಂದ್ರಗಳನ್ನು ತೆರೆಯಲಾಗಿದೆ. ನೂಕುನುಗ್ಗಲು, ಅವಘಡ ತಪ್ಪಿಸಲು ಎಚ್ಚರಿಕಾ ಫಲಕಗಳನ್ನು ಹಾಕಲಾಗಿದೆ. ತುರ್ತು ಪರಿಸ್ಥಿತಿ ಎದುರಿಸಲು ಆಂಬ್ಯುಲೆನ್ಸ್ಗಳನ್ನು ನಿಯೋಜಿಸಲಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದೆ
Laxmi News 24×7