ಕಾಂಗ್ರೆಸ್ನಲ್ಲಿ ಈ ತಿಂಗಳು ಕ್ರಾಂತಿಯಾಗುವ ಲಕ್ಷಣಗಳು ಕಂಡುಬಂದಿವೆ: ಆರ್.ಅಶೋಕ್
ಬೆಂಗಳೂರು: ಕಾಂಗ್ರೆಸ್ನಲ್ಲಿ ಅಕ್ಟೋಬರ್ ಕ್ರಾಂತಿಯಾಗುವ ಲಕ್ಷಣಗಳು ಕಂಡುಬಂದಿದ್ದು, ಆ ನಂತರ ಸಿಎಂ ಬದಲಾವಣೆಯಾಗುವ ಸಾಧ್ಯತೆ ಇದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸರ್ಕಾರ ಅಸ್ಥಿರಗೊಂಡು ಬಿದ್ದುಹೋದರೆ ಚುನಾವಣೆ ಮಾಡುವುದು ಸೂಕ್ತ. ನಾವು ಕಾಂಗ್ರೆಸ್ನಂತೆ ಸರ್ಕಾರ ಬೀಳಿಸಲು ಹೋಗಲ್ಲ. ಎರಡೂವರೆ ವರ್ಷಗಳಲ್ಲಿ ಸರ್ಕಾರ ಟೇಕಾಫ್ ಆಗಿಲ್ಲ. ಕಾಂಗ್ರೆಸ್ ಶಾಸಕರು ಹಾಗೂ ಸಚಿವರು ಅಭಿವೃದ್ಧಿ ಆಗಿಲ್ಲ ಎನ್ನುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಚುನಾವಣೆ ನಡೆಯುವುದು ಸೂಕ್ತ ಎಂದರು.
ಅನಗತ್ಯ ಮಾಹಿತಿ ಸಂಗ್ರಹ: ಜಾತಿ ಸಮೀಕ್ಷೆಯಲ್ಲಿ ಸರ್ಕಾರ ಅನಗತ್ಯವಾದ ಮಾಹಿತಿಗಳನ್ನು ಸಂಗ್ರಹಿಸುತ್ತಿದೆ. ಜಾತಿ ಸಮೀಕ್ಷೆಯಲ್ಲಿ ತೀರಾ ವೈಯಕ್ತಿಕ ವಿಷಯ ಕೇಳಿದರೆ ಜನರು ಮಾಹಿತಿ ನೀಡದೇ ಇರಬಹುದು. ಇದು ಜನರಿಗೆ ಬಿಟ್ಟ ವಿಚಾರ ಎಂದು ಕೋರ್ಟ್ ಕೂಡ ಹೇಳಿದೆ. ಕೇಂದ್ರ ಸರ್ಕಾರ ಸಂವಿಧಾನದ ಪ್ರಕಾರ ತನ್ನ ಅಧಿಕಾರ ಚಲಾಯಿಸಿ ಜಾತಿ ಗಣತಿ, ಜನ ಗಣತಿ ಮಾಡುತ್ತಿದೆ. ರಾಜ್ಯ ಸರ್ಕಾರಕ್ಕೆ ಸಮೀಕ್ಷೆಯ ಅಧಿಕಾರವೇ ಇಲ್ಲ ಎಂದು ತಿಳಿಸಿದರು.
ಸಮೀಕ್ಷೆ ಮಾಡುವವರಿಗೆ ತರಬೇತಿ ನೀಡಿಲ್ಲ. ಸಮೀಕ್ಷೆ ಮಾಡದ ಸಿಬ್ಬಂದಿಯನ್ನು ಅಮಾನತು ಮಾಡುತ್ತೇವೆಂದು ಬೆದರಿಕೆ ಒಡ್ಡಲಾಗಿದೆ. ರಾಜ್ಯ ಸರ್ಕಾರದಿಂದ ಸಮೀಕ್ಷೆ ಅಗತ್ಯವೇ ಇರಲಿಲ್ಲ. ಎರಡು ಕೋಟಿ ಮನೆಗಳ ಹಣೆಬರಹವನ್ನು ಎರಡೇ ದಿನಗಳಲ್ಲಿ ಬರೆಯಲು ಮುಂದಾಗಿದ್ದಾರೆ. ಜಾತಿ ಸಮೀಕ್ಷೆಯ ಕಾಲಂಗಳಲ್ಲಿ ಕೇವಲ ಜಾತಿ/ಧರ್ಮಕ್ಕೆ ಆದ್ಯತೆ ನೀಡಲಾಗಿದೆ. ಇದರಲ್ಲಿ ಸಾಮಾಜಿಕ-ಶೈಕ್ಷಣಿಕದ ಅಂಶಗಳಿಲ್ಲ. ಸಮೀಕ್ಷೆ ಮುಗಿದ ನಂತರ ವರದಿಯನ್ನು ಕಸದ ಬುಟ್ಟಿಗೆ ಹಾಕುತ್ತಾರೆ. ಜಾತಿ ಸಮೀಕ್ಷೆಗೆ ನಮ್ಮ ವಿರೋಧವಿಲ್ಲ. ಆದರೆ, ಜಾತಿ/ಧರ್ಮ ಒಡೆಯುವ ಅಜೆಂಡಾಗೆ ನಮ್ಮ ವಿರೋಧವಿದೆ. ಸಿಎಂ ಸಿದ್ದರಾಮಯ್ಯ ಹಿಂದೂ ವಿರೋಧಿಯಾಗಿದ್ದು, ಆ ನಡೆಯನ್ನೇ ಇಲ್ಲಿ ತೋರಿದ್ದಾರೆ. ಸಂವಿಧಾನದ ಅಡಿಯಲ್ಲಿ ಯಾವುದೇ ಜಾತಿಗೆ ಪರಿಶಿಷ್ಟ ಪಂಗಡದ ಸ್ಥಾನ ನೀಡಲು ನಮ್ಮ ಅಭ್ಯಂತರವಿಲ್ಲ ಎಂದರು.
Laxmi News 24×7