ಬೆಂಗಳೂರು: ಪೊಲೀಸ್ ಇಲಾಖೆಯ ನೇಮಕಾತಿಗೆ ಶಾಶ್ವತ ವಯೋಮಿತಿ ಸಡಿಲಿಕೆಗೆ ಮುಂದಾಗಿದ್ದು, ಸದ್ಯದಲ್ಲೇ ವಯೋಮಿತಿ ಸಡಿಲಿಕೆ ಪ್ರಕಟಿಸುತ್ತೇವೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದರು.
ಸದಾಶಿವನಗರ ನಿವಾಸದ ಬಳಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸರ್ಕಾರಿ ನೌಕರರ ವಯೋಮಿತಿ ಸಡಿಲಿಕೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಒಂದು ಸಲಕ್ಕೆ ಅನ್ವಯ ಆಗುವಂತೆ ಸಡಿಲಿಕೆ ಮಾಡಲಾಗಿದೆ. 2027ರವರೆಗೆ ವಯೋಮಿತಿ ಸಡಿಲಿಸಿದ್ದೇವೆ. ನಮ್ಮ ಪೊಲೀಸ್ ಇಲಾಖೆಯಲ್ಲಿ ಶಾಶ್ವತ ವಯೋಮಿತಿ ಸಡಿಲಿಕೆಗೆ ಮುಂದಾಗಿದ್ದೇವೆ. ಕಾನ್ಸ್ಟೇಬಲ್, ಪಿಎಸ್ಐ, ಎಸ್ಐ ಹುದ್ದೆಗಳ ನೇಮಕಾತಿಯಲ್ಲಿ ಅಭ್ಯರ್ಥಿಗಳ ವಯೋಮಿತಿ ಸಡಿಲಿಕೆ ಬಗ್ಗೆ ಪರಿಶೀಲನೆ ನಡೆದಿದೆ. ಯಾವ್ಯಾವ ರಾಜ್ಯಗಳಲ್ಲಿ ಎಷ್ಟು ವಯೋಮಿತಿ ಇದೆ ಎಂಬ ಮಾಹಿತಿ ತರಿಸಿಕೊಂಡಿದ್ದೇವೆ. ಸದ್ಯದಲ್ಲೇ ವಯೋಮಿತಿ ಸಡಿಲಿಕೆ ಆದೇಶ ಪ್ರಕಟಿಸುತ್ತೇವೆ ಎಂದರು.
ಬಂಧನಕ್ಕೆ ಕಾನೂನು ತೊಡಕು: ಧರ್ಮಸ್ಥಳ ತಲೆಬುರಡೆ ಪ್ರಕರಣದ ತನಿಖೆ ವಿಳಂಬ, ಷಡ್ಯಂತ್ರ ಮಾಡಿದವರನ್ನು ಬಂಧಿಸದ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಅವರ ಬಂಧನಕ್ಕೆ ಕಾನೂನು ತೊಡಕುಗಳಿವೆ. ಅವುಗಳ ಬಗ್ಗೆ ಇನ್ನೂ ಚರ್ಚೆ ಮಾಡಿಲ್ಲ. ಎಫ್ಎಸ್ಎಲ್ ವರದಿ ಇನ್ನೂ ಬಂದಿಲ್ಲ. ಎಸ್ಐಟಿಯವರು ಅವರ ಕೆಲಸ ಮಾಡ್ತಿದ್ದಾರೆ. ಇತ್ತೀಚಿನ ಸಾಕ್ಷ್ಯಗಳನ್ನು ಎಫ್ಎಸ್ಎಲ್ಗೆ ಕಳಿಸಲಾಗಿದೆ. ಎಲ್ಲವನ್ನೂ ಅಂತಿಮಗೊಳಿಸಬೇಕು. ಆಮೇಲೆ ಎಸ್ಐಟಿ ವರದಿ ನೀಡಲಿದೆ. ತನಿಖೆ ಬೇಗ ಮುಗಿಸುವಂತೆ ಸೂಚಿಸಿದ್ದೇವೆ. ಬಂದವರೆಲ್ಲ ದೂರು, ಅರ್ಜಿ ಕೊಡೋದು ಆಗ್ತಿದೆ. ಇದಕ್ಕೆಲ್ಲ ಅಂತ್ಯ ಹಾಡಲು ಬಯಸಿದ್ದೇವೆ ಎಂದರು.
ಮಹೇಶ್ ಶೆಟ್ಟಿ ತಿಮರೋಡಿ ನಾಪತ್ತೆ ವಿಚಾರವಾಗಿ ಮಾತನಾಡಿ, ನಾವು ಕಾನೂನು ಚೌಕಟ್ಟಿನಲ್ಲೇ ಮಾಡಬೇಕು. ಗಡಿಪಾರು ವಿಚಾರವನ್ನು ಕೋರ್ಟಿನಲ್ಲಿ ಪ್ರಶ್ನಿಸಿದ್ದಾರೆ. ಅದೇನಾಗಲಿದೆ ಮೊದಲು ನೋಡಬೇಕು. ತಿಮರೋಡಿ ಬಂಧನ, ಕ್ರಮಕ್ಕೆ ಕಾನೂನು ಚೌಕಟ್ಟಿದೆ. ಅದರ ಪ್ರಕಾರವೇ ಎಲ್ಲವನ್ನೂ ಮಾಡಬೇಕು. ಇದರ ಬಗ್ಗೆ ಸರ್ಕಾರ ಎಸ್ಐಟಿಗೆ ಸೂಚನೆ ನೀಡಲಾಗುವುದಿಲ್ಲ. ಅಂತಿಮ ತೀರ್ಮಾನ ಎಸ್ಐಟಿಯವರದ್ದು. ತನಿಖೆ ನಾಳೆಯೇ ಮುಗಿಸಿ ಅಂತ ಹೇಳಲಾಗುವುದಿಲ್ಲ. ಎಲ್ಲವನ್ನೂ ನೋಡಿ ಎಸ್ಐಟಿ ತೀರ್ಮಾನಿಸುತ್ತದೆ ಎಂದರು.
Laxmi News 24×7