Breaking News

ರಾಜ್ಯದ ಭೂಸ್ವಾಧೀನ ಪ್ರಕ್ರಿಯೆಗಳಲ್ಲಿ ಪಾರದರ್ಶಕತೆ ಮತ್ತು ದಕ್ಷತೆಗೆ ಏಕೀಕೃತ ಡಿಜಿಟಲ್ ವ್ಯವಸ್ಥೆ

Spread the love

ರಾಜ್ಯದ ಭೂಸ್ವಾಧೀನ ಪ್ರಕ್ರಿಯೆಗಳಲ್ಲಿ ಪಾರದರ್ಶಕತೆ ಮತ್ತು ದಕ್ಷತೆಗೆ ಏಕೀಕೃತ ಡಿಜಿಟಲ್ ವ್ಯವಸ್ಥೆ

 

ಬೆಂಗಳೂರು: ರಾಜ್ಯಾದ್ಯಂತ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಪಾರದರ್ಶಕತೆ, ದಕ್ಷತೆ ಮತ್ತು ನ್ಯಾಯಸಮ್ಮತೆಯನ್ನು ತರುವ ನಿಟ್ಟಿನಲ್ಲಿ ಸರ್ಕಾರ ಏಕೀಕೃತ ಭೂಸ್ವಾಧೀನ ವ್ಯವಸ್ಥೆ ದತ್ತಾಂಶ ಮಾಡ್ಯೂಲ್ ಅನ್ನು ಜಾರಿಗೊಳಿಸಿದೆ. ಇದು ದೇಶದಲ್ಲಿಯೇ ಭೂಸ್ವಾಧೀನ ಪ್ರಕ್ರಿಯೆಯನ್ನು ಆನ್‌ಲೈನ್ ಮೂಲಕ ವ್ಯವಹರಿಸುವ ಏಕಮಾತ್ರ ವ್ಯವಸ್ಥೆಯಾಗಿದ್ದು ಕರ್ನಾಟಕ ರಾಜ್ಯದಲ್ಲಿ ಮಾತ್ರ ಅನುಷ್ಠಾನಗೊಳಿಸಿ ಜಾರಿಗೆ ತರಲಾಗಿರುತ್ತದೆ.

ಈ ಸಂಬಂಧ ಕಂದಾಯ ಸಚಿವ ಕೃಷ್ಣ ಬೈರೇಗೌಡ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿ, ಕರ್ನಾಟಕ ಏಕೀಕೃತ ಭೂಸ್ವಾಧೀನ ವ್ಯವಸ್ಥೆ ರಾಜ್ಯಾದ್ಯಂತ ಭೂಸ್ವಾಧೀನ ಪ್ರಕ್ರಿಯೆಯನ್ನು ಸಮನ್ವಯಗೊಳಿಸಲು ಮತ್ತು ಪ್ರಸ್ತುತ ಕೈಗೊಳ್ಳಲಾಗುತ್ತಿರುವ ಭೂಸ್ವಾಧೀನ ಪ್ರಕ್ರಿಯೆಗಳು ಮತ್ತು ಹಿಂದಿನ ಭೂಸ್ವಾಧೀನ ಪ್ರಕರಣಗಳಲ್ಲಿನ ಮೊಕದ್ದಮೆಗಳನ್ನು ಗುರುತಿಸುವ ಏಕೀಕೃತ ಡಿಜಿಟಲ್ ವೇದಿಕೆಯಾಗಿದೆ. ಈ ಮಾಡ್ಯೂಲ್ ಎಲ್ಲಾ ಭೂಸ್ವಾಧೀನಪಡಿಸುವ ಇಲಾಖೆಗಳು- ಕಂದಾಯ, ಜಲಸಂಪನ್ಮೂಲ, ನಗರಾಭಿವೃದ್ಧಿ ಮೂಲಸೌಲಭ್ಯ ಅಭಿವೃದ್ಧಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಗೃಹ ಮಂಡಳಿ, ಲೋಕೋಪಯೋಗಿ ಇಲಾಖೆ, ಕಶಿಪ್, ಕ-ರಡ್, ಮೆಟ್ರೋ ಮತ್ತು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಮುಂತಾದ ಇಲಾಖೆಗಳು ಭೂಸ್ವಾಧೀನ ಪ್ರಕ್ರಿಯೆಯ ವಿವಿಧ ಇಲಾಖೆಗಳೊಂದಿಗೆ ಕೊಂಡಿಯಾಗಿ ಸಂಪೂರ್ಣ ವಿವರಗಳನ್ನು ನಮೂದಿಸಲು ಅನುವು ಮಾಡಿಕೊಡುತ್ತದೆ. ಇದು ಎಲ್ಲಾ ಭೂಸ್ವಾಧೀನ ಪ್ರಸ್ತಾವನೆಗಳು, ಅದರ ಸ್ಥಿತಿಗತಿಗಳ ಕುರಿತು ನೈಜ ಸಮಯದ ಮಾಹಿತಿಯನ್ನು ಪಾಲುದಾರರು ಮತ್ತು ತೀರ್ಮಾನ ಕೈಗೊಳ್ಳುವ ಸಂಸ್ಥೆಗಳಿಗೆ ಕ್ರೋಢೀಕೃತ ಡ್ಯಾಶ್‌ ಬೋರ್ಡ್‌ ಮೂಲಕ ತಲುಪಿಸಲು ಅನುವು ಮಾಡಿಕೊಡುತ್ತದೆ ಎಂದರು.

ದೇಶದಲ್ಲಿ ಎಲ್ಲಿಯೂ ಈ ರೀತಿ ಮಾಡಿಲ್ಲ. ನಾವು ಮೊದಲು ಇದಕ್ಕೆ ಕೈಹಾಕಿದ್ದೇವೆ. ಕಾನೂನು ಇದ್ದರೂ ಗೊಂದಲ ಮಾಡ್ತಿದ್ದಾರೆ. ಕಾನೂನು ಬಿಟ್ಟು ಅಧಿಕಾರಿಗಳು ಕೆಲಸ ಮಾಡ್ತಿದ್ದಾರೆ. ಪೇಪರ್ ನಲ್ಲಿ ಏನು ಬೇಕಾದರು ಮಾಡಬಹುದು. ಆನ್ಲೈನ್ ವ್ಯವಸ್ಥೆಯನ್ನು ಅದಕ್ಕಾಗಿ ತರುತ್ತಿದ್ದೇವೆ. ಇಲ್ಲಿಯವರೆಗೆ ಇಷ್ಟ ಬಂದಂತೆ ಮಾಡ್ತಿದ್ರು. ಈಗ ಆರೀತಿ ಮಾಡೋಕೆ ಆಗಲ್ಲ. ಕಾನೂನಿನಲ್ಲಿ ಅವಕಾಶ ಇಲ್ಲದಿದ್ರೆ ಬ್ಲಾಕ್ ಆಗಲಿದೆ. ಕಾನೂನಿಗೆ ವಿರುದ್ಧವಾಗಿ ನಡೆಯುತ್ತಿದ್ರು. ಉದ್ದೇಶಪೂರಕವಾಗಿಯೇ ನಡೆಯುತ್ತಿದೆ. ಸಾವಿರಾರು ಕೇಸ್ ನಲ್ಲಿ ಡಬಲ್ ಪೇಮೆಂಟ್ ಆಗಿವೆ ಎಂದರು.

ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ನ್ಯಾಯೋಚಿತ ಪರಿಹಾರ, ಪುನರ್ವಸತಿ ಹಾಗೂ ಪುನರ್ ವ್ಯವಸ್ಥೆ ಹಕ್ಕು ಅಧಿನಿಯಮ 2013 ಅನುಗುಣವಾಗಿ ಹೊಸ ಪ್ರಸ್ತಾವನೆಗಳಿಗೆ ಪ್ರಕ್ರಿಯೆ ಆಧಾರಿತ ಕಾರ್ಯ ಹರಿವನ್ನು ಒದಗಿಸಲು ಈ ಭೂಸ್ವಾಧೀನ ವ್ಯವಸ್ಥೆಯನ್ನು ಹೆಚ್ಚಿಸಲಾಗಿದೆ. ಪ್ರಸ್ತಾವನೆ ಸಲ್ಲಿಕೆಯಿಂದ ಹಿಡಿದು ಐತೀರ್ಪು ರಚನೆ, ಪರಿಹಾರ ವಿತರಣೆ ಮತ್ತು ಪುನರ್ವಸತಿವರೆಗಿನ ಭೂಸ್ವಾಧೀನದ ಸಂಪೂರ್ಣ ಪ್ರಕ್ರಿಯೆಯನ್ನು ನಿರ್ವಹಿಸಲು ಈ ವ್ಯವಸ್ಥೆಯು ಏಕಮಾತ್ರ ಡಿಜಿಟಲ್ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ತಿಳಿಸಿದ್ದಾರೆ.

ಕಂದಾಯ ಇಲಾಖೆಯ ಭೂಮಿ ತಂತ್ರಾಂಶ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಇ-ಸ್ವತ್ತು ತಂತ್ರಾಂಶ. ನಗರಾಭಿವೃದ್ಧಿ ಇಲಾಖೆಯ ಇ-ಆಸ್ತಿ ತಂತ್ರಾಂಶ, ಯುಎಲ್ಎಂಎಸ್ ಇ-ಖಾತಾ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕಾವೇರಿ 2.0 ತಂತ್ರಾಂಶ ಮತ್ತು ಕೆಜಿಐಎಎಸ್ ನಂತಹ ಎಲ್ಲಾ ವ್ಯವಸ್ಥೆಗಳೊಂದಿಗೆ ಜೋಡಣೆಗೊಂಡಿರುವ ಏಕೀಕೃತ ವ್ಯವಸ್ಥೆ ನೈಜ ದತ್ತಾಂಶವನ್ನು ಒದಗಿಸಲಿದೆ. ಜೊತೆಗೆ ಆರ್ಥಿಕ ಇಲಾಖೆಯ ಖಜಾನೆ-2 ತಂತ್ರಾಂಶದೊಂದಿಗಿನ ಜೋಡಣೆಯು ಸದರಿ ಪ್ರಕ್ರಿಯೆಯ ಸಮಗ್ರ ಡಿಜಿಟಲೀಕರಣವನ್ನು ಮತ್ತಷ್ಟು ಇಮ್ಮಡಿಗೊಳಿಸಲಿದೆ ಎಂದು ವಿವರಿಸಿದರು.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ