Breaking News

ಹುಟ್ಟೂರಿನ ಕೆರೆಯಲ್ಲಿ ಎಸ್.ಎಲ್.ಭೈರಪ್ಪನವರ ಅಸ್ಥಿ ವಿಸರ್ಜನೆ

Spread the love

ಹಾಸನ: ಖ್ಯಾತ ಕಾದಂಬರಿಕಾರ, ಚಿಂತಕ ಎಸ್.ಎಲ್.ಭೈರಪ್ಪ ಅವರ ಅಸ್ಥಿಯನ್ನು ಹುಟ್ಟೂರಾದ ಚನ್ನರಾಯಪಟ್ಟಣ ತಾಲೂಕಿನ ಸಂತೇಶಿವರದ ಕೆರೆಯಲ್ಲಿ ಭಾನುವಾರ ವಿಸರ್ಜಿಸಲಾಯಿತು. ಭೈರಪ್ಪ ಅವರ ಪುತ್ರರಾದ ರವಿಶಂಕರ್ ಹಾಗೂ ಉದಯ್‌ ಶಂಕರ್ ವಿಧಿವಿಧಾನಗಳಂತೆ ಪೂಜೆ ಸಲ್ಲಿಸಿ, ಚಿತಾಭಸ್ಮವನ್ನು ವಿಸರ್ಜನೆ ಮಾಡಿದರು.

ಇದಕ್ಕೂ ಮುನ್ನ ಮಂತ್ರೋಚ್ಚಾರಣೆ, ಘೋಷಗಳು ಮೊಳಗುತ್ತಿದ್ದಂತೆ ಗ್ರಾಮದಲ್ಲಿ ಅಸ್ಥಿ ಮೆರವಣಿಗೆ ನಡೆದಿದ್ದು, ನೂರಾರು ಮಂದಿ ಗ್ರಾಮಸ್ಥರು ಮತ್ತು ಅಭಿಮಾನಿಗಳು ಭಾಗಿಯಾಗಿದ್ದರು. ಶಾಸಕ ಸಿ.ಎನ್. ಬಾಲಕೃಷ್ಣ ಹಾಗೂ ಮಾಜಿ ಎಂಎಲ್‌ಸಿ ಎಂ.ಎ.ಗೋಪಾಲಸ್ವಾಮಿ, ಜಿ.ಪಂ.ಮಾಜಿ ಸದಸ್ಯ ಕುಸುಮಾ ಬಾಲಕೃಷ್ಣ, ತೆಪ್ಪದಲ್ಲಿ ತೆರಳಿ ಕುಟುಂಬದೊಂದಿಗೆ ಅಸ್ಥಿಯ ವಿಸರ್ಜನೆಯಲ್ಲಿ ಪಾಲ್ಗೊಂಡರು.

ಕನ್ನಡ ಸಾಹಿತ್ಯಲೋಕದ ಹಿರಿಯ ಸಾಹಿತಿ, ಕಾದಂಬರಿಕಾರ, ತತ್ವಜ್ಞಾನಿ, ಪದ್ಮಭೂಷಣ, ಸರಸ್ವತಿ ಸಮ್ಮಾನ್​ ಪುರಸ್ಕೃತರಾದ ಡಾ.ಎಸ್.ಎಲ್‌.ಭೈರಪ್ಪ ಅವರು ಸೆಪ್ಟೆಂಬರ್​ 24ರಂದು ಇಹಲೋಕ ತ್ಯಜಿಸಿದ್ದರು. ಹೃದಯಸ್ತಂಭನದಿಂದ ಅವರು ಕೊನೆಯುಸಿರೆಳೆದರು ಎಂದು ಬೆಂಗಳೂರಿನ ರಾಷ್ಟ್ರೋತ್ಥಾನ ಆಸ್ಪತ್ರೆಯ ವೈದ್ಯರು ತಿಳಿಸಿದ್ದರು. ಸೆಪ್ಟೆಂಬರ್​ 24 (ಬುಧವಾರ) ಮಧ್ಯಾಹ್ನ 2:38ಕ್ಕೆ ಅವರು ನಿಧನರಾದರು ಎಂದು ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಶೈಲಾ ಹೆಚ್.ಎನ್​ ಅವರು ಮಾಧ್ಯಮ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದರು.

ಎಸ್​.ಎಲ್​​. ಭೈರಪ್ಪ (94) ಅವರ ಅಂತ್ಯಕ್ರಿಯೆಯನ್ನು ಕಳೆದ ಶುಕ್ರವಾರ ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ರುದ್ರ ಭೂಮಿಯಲ್ಲಿ ಸರ್ಕಾರದ ಸಕಲ ಗೌರವದೊಂದಿಗೆ ನೆರವೇರಿಸಲಾಯಿತು. ಈ ಸಂರ್ಭದಲ್ಲಿ ಭೈರಪ್ಪ ಅವರ ಹಿರಿಯ ಮಗ ರವಿಶಂಕರ್, ಕಿರಿಯ ಮಗ ಉದಯಶಂಕರ್ ಹಾಗೂ ಲೇಖಕಿ ಸಹನಾ ವಿಜಯಕುಮಾರ ಇದ್ದರು.

ಇದಕ್ಕೂ ಮುನ್ನ ಬೆಂಗಳೂರಿನಿಂದ ಮೈಸೂರಿಗೆ ತರಲಾಗಿದ್ದ ಎಸ್​.ಎಲ್​. ಭೈರಪ್ಪ ಅವರ ಪಾರ್ಥಿವ ಶರೀರವನ್ನು ಮೈಸೂರಿನ ಕಲಾಮಂದಿರದ ಆವರಣದಲ್ಲಿ ಇಡಲಾಗಿತ್ತು. ಅಲ್ಲಿ ಗಣ್ಯರಾದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಸಚಿವರಾದ ಹೆಚ್​.ಸಿ. ಮಹದೇವಪ್ಪ ಸೇರಿದಂತೆ ಹಲವರು ಅಂತಿಮ ದರ್ಶನ ಪಡೆದಿದ್ದರು.

ಭೈರಪ್ಪ ಅವರು ತಮ್ಮ ಜನಪ್ರಿಯ ಕಾದಂಬರಿಗಳಾದ ‘ವಂಶವೃಕ್ಷ’, ‘ದಾಟು’, ‘ಪರ್ವ’, ‘ಮಂದಾರ’ ಸೇರಿದಂತೆ ಇನ್ನಿತರ ಸಾಹಿತ್ಯದ ಕೃಷಿಯಿಂದ ಕನ್ನಡ ಸಾಹಿತ್ಯಲೋಕದ ದಂತಕತೆಯಾಗಿದ್ದಾರೆ. ಅವರ ಹೆಚ್ಚಿನ ಕೃತಿಗಳು ಇಂಗ್ಲಿಷ್ ಮತ್ತು ಇತರ ಭಾಷೆಗಳಿಗೆ ಅನುವಾದವಾಗಿವೆ. ಭೈರಪ್ಪ ಅವರು ಪದ್ಮಭೂಷಣ, ಪದ್ಮಶ್ರೀ, ಸರಸ್ವತಿ ಸಮ್ಮಾನ್, ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದರು. ಭೈರಪ್ಪ ಅವರ ‘ನಾಯಿ-ನೆರಳು’, ‘ವಂಶವೃಕ್ಷ’, ‘ತಬ್ಬಲಿಯು ನೀನಾದೆ ಮಗನೆ’ ಮುಂತಾದ ಕೃತಿಗಳು ಚಲನಚಿತ್ರಗಳಾಗಿ ಮತ್ತು ‘ಗೃಹಭಂಗ’ ಮತ್ತು ‘ದಾಟು’ ಟಿವಿ ಧಾರಾವಾಹಿಗಳಾಗಿ ಪ್ರಸಾರವಾಗಿದ್ದು ಅವರ ಸಾಹಿತ್ಯ ಹಿರಿಮೆಗೆ ಸಾಕ್ಷಿಯಾಗಿವೆ.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ