ಮೈಸೂರು: ದಸರಾ ಪುಸ್ತಕ ಮೇಳದಲ್ಲಿ ಬೂಕರ್ ಪ್ರಶಸ್ತಿ ವಿಜೇತೆ, ಹಿರಿಯ ಸಾಹಿತಿ ಬಾನು ಮುಷ್ತಾಕ್ ಅವರು ಬರೆದಿರುವ ಎದೆಯ ಹಣತೆ ಪುಸ್ತಕವು, ಒಂದೇ ವಾರದಲ್ಲಿ ಒಂದೇ ಮಳಿಗೆಯಲ್ಲಿ 260 ಪ್ರತಿ ಮಾರಾಟವಾಗುವ ಮೂಲಕ ದಾಖಲೆ ನಿರ್ಮಿಸಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ಮೈಸೂರು ದಸರಾ ಮಹೋತ್ಸವ ಸಮಿತಿ ವತಿಯಿಂದ ಮೈಸೂರಿನ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ಆಯೋಜಿಸಲಾಗಿರುವ ಕನ್ನಡ ಪುಸ್ತಕ ರಿಯಾಯಿತಿ ಮಾರಾಟ ಮೇಳಕ್ಕೆ ಓದುಗರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ.
ಬಾನು ಮುಷ್ತಾಕ್ ಅವರು ಬರೆದಿರುವ ಎದೆಯ ಹಣತೆ, ಅನುವಾದಗೊಂಡಿರುವ ಹಾರ್ಟ್ ಲ್ಯಾಂಪ್ ಹಾಗೂ ಇತ್ತೀಚಿಗೆ ನಿಧನರಾದ ಹಿರಿಯ ಸಾಹಿತಿ ಡಾ.ಎಸ್.ಎಲ್.ಭೈರಪ್ಪ ಅವರು ಬರೆದಿರುವ ಪುಸ್ತಕಗಳಿಗೆ ಫುಲ್ ಡಿಮ್ಯಾಂಡ್ ಇದೆ. ಕುವೆಂಪು, ತೇಜಸ್ವಿ ಅವರು ಬರೆದಿರುವ ಪುಸ್ತಕಗಳು ಸೇರಿದಂತೆ ಖ್ಯಾತನಾಮರ ಪುಸ್ತಕಗಳನ್ನು ಓದುಗರು ಖರೀದಿಸುತ್ತಿದ್ದಾರೆ.
ಡಿ.ವಿ.ಕೆ.ಮೂರ್ತಿ ದ್ವಾರದಿಂದ ಪುಸ್ತಕ ಮೇಳಕ್ಕೆ ಪ್ರವೇಶ ಮಾಡಿದರೆ, ತ್ರಿವೇಣಿ ದ್ವಾರದಿಂದ ಆಚೆ ಬರುವವರೆಗೂ 94 ಮಳಿಗೆಗಳಿದ್ದು ಆಧ್ಯಾತ್ಮಿಕ, ಧಾರ್ಮಿಕತೆ, ವಿಜ್ಞಾನ, ಮಹಾನ್ ಸಾಧಕರು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ಬರೆದಿರುವ ಪುಸ್ತಕಗಳು, ದಿವಂಗತ ನಟರಾದ ಡಾ.ರಾಜ್‌ಕುಮಾರ್, ಡಾ.ವಿಷ್ಣುವರ್ಧನ್, ಅಂಬರೀಶ್, ಡಾ.ಪುನೀತ್ ರಾಜ್‌ಕುಮಾರ್ ಅವರ ಜೀವನ ಚರಿತ್ರೆಯ ಪುಸ್ತಕಗಳು, ಕನ್ನಡದ ನಟ ನಟಿಯರ ಜೀವನ ಸಾಧನೆ ಕುರಿತಾದ ಪುಸ್ತಕಗಳು ಸಿಗುತ್ತಿವೆ.
ಪ್ರಸಾರಾಂಗ, ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಕುವೆಂಪು ಭಾಷಾ ಭಾರತಿ, ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಕರ್ನಾಟಕ ಯಕ್ಷಗಾನ ಅಕಾಡೆಮಿ, ಕರ್ನಾಟಕ ನಾಟಕ ಅಕಾಡೆಮಿ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ, ಕರ್ನಾಟಕ ಶಿಲ್ಪಕಲಾ ಅಕಾಡೆಮಿ, ಲಲಿತಕಲಾ ಅಕಾಡೆಮಿ, ಕೇಂದ್ರ ಸಾಹಿತ್ಯ ಅಕಾಡೆಮಿ, ಕರಾಮುವಿ ಪ್ರಸಾರಾಂಗ, ಕರ್ಣಾಟಬಲ ಬೆಂಗಳೂರು, ರಾಷ್ಟ್ರೀಯ ಪ್ರಾಕೃತ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆ ಶ್ರವಣಬೆಳಗೊಳ ಸಂಸ್ಥೆಗಳು ತಮ್ಮ ಮಳಿಗೆಯಲ್ಲಿ ಸಂಬಂಧಿಸಿದ ಪುಸ್ತಕಗಳ ಪ್ರದರ್ಶನ ಮಾಡುತ್ತಿವೆ ಹಾಗೂ ಶೇ.40ರವರೆಗೆ ರಿಯಾಯಿತಿ ದರದಲ್ಲಿ ಪುಸ್ತಕಗಳನ್ನು ಮಾರಾಟ ಮಾಡುತ್ತಿವೆ.
Laxmi News 24×7