ಬೆಂಗಳೂರು: ಕನ್ನಡದ ಪ್ರಖ್ಯಾತ ರಿಯಾಲಿಟಿ ಶೋ ಆಗಿರುವ ಬಿಗ್ ಬಾಸ್ನ 12ನೇ ಆವೃತ್ತಿಯು ಭಾನುವಾರದಿಂದ ಆರಂಭವಾಗುತ್ತಿದೆ. ಕಿರುತೆರೆ ಹಾಗೂ ಬೆಳ್ಳಿತೆರೆ ಸೇರಿದಂತೆ ವಿವಿಧ ರಂಗಗಳಲ್ಲಿ ಇರುವ ಯಾರೆಲ್ಲಾ ಗಣ್ಯರು ಸ್ಪರ್ಧಿಗಳಾಗಿ ಮನೆಯೊಳಗೆ ಬರಲಿದ್ದಾರೆ ಎಂಬ ಕುತೂಹಲ ಗರಿಗೆದರಿದೆ. ಹೇಗಾದರೂ ಮಾಡಿ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಗಳಾಗಲು ಹಲವು ಮಂದಿ ಆಕಾಂಕ್ಷಿಗಳು ಇನ್ನಿಲದ ಕಸರತ್ತಿನಲ್ಲಿ ತೊಡಗಿಸಿಕೊಂಡಿದ್ದಾರೆ.
ಇನ್ನೂ ಕೆಲವರು ಅವಹೇಳನಕಾರಿ ಅಥವಾ ಬೆದರಿಕೆ ರೀತಿ ಹುಚ್ಚು ಹೇಳಿಕೆಗಳನ್ನು ನೀಡಿ ಸಾಮಾಜಿಕ ಜಾಲತಾಣದವಾದ ಇನ್ಸ್ಟ್ರಾಗ್ರಾಮ್ನಲ್ಲಿ ರೀಲ್ಸ್ ಮಾಡುತ್ತಿದ್ಧಾರೆ. ಅದೇ ರೀತಿ ಇಲ್ಲೊಬ್ಬ ಯುವಕ ಅಶೋಕ್ ಎಂಬಾತ ಬಿಗ್ ಬಾಸ್ ಶೋಗೆ ನನ್ನನ್ನ ಕರೆದಿಲ್ಲ ಎಂದರೆ ಬಾಂಬ್ ಇಟ್ಟು ಉಡಾಯಿಸುವುದಾಗಿ ಬೆದರಿಕೆ ಹಾಕಿದ್ದಾನೆ.
ಬಿಗ್ ಬಾಸ್ ಆಕಾಂಕ್ಷಿಗೆ ಎಚ್ಚರಿಕೆ ಕೊಟ್ಟ ಕಳುಹಿಸಿದ ಪೊಲೀಸರು: ಇನ್ಸ್ಟ್ರಾಗ್ರಾಮ್ನಲ್ಲಿ Mummy-Ashok16 ಎಂಬ ಖಾತೆಯಲ್ಲಿ ಯುವಕ ಬೆದರಿಕೆ ರೀಲ್ಸ್ ಮಾಡಿ ಪೋಸ್ಟ್ ಮಾಡಿದ್ದಾನೆ. ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಅಲರ್ಟ್ ಆದ ಕುಂಬಳಗೋಡು ಠಾಣೆ ಪೊಲೀಸರು ಸ್ವಯಂಪ್ರೇರಿತವಾಗಿ ಎನ್ಸಿಆರ್ ದಾಖಲಿಸಿಕೊಂಡಿದ್ಧಾರೆ. ಬಳಿಕ ಐಪಿ ವಿಳಾಸ ಆಧರಿಸಿ ಯುವಕನನ್ನು ಕರೆಯಿಸಿ ಎಚ್ಚರಿಕೆ ನೀಡಿ ಬಿಟ್ಟು ಕಳುಹಿಸಿದ್ಧಾರೆ. ಈ ವಿಡಿಯೋವನ್ನು ಬೆಂಗಳೂರು ನಗರ ಪೊಲೀಸರು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ಧಾರೆ.
ನಿಮ್ಮ ಪೋಸ್ಟ್‌ಗಳು ನಿಮ್ಮನ್ನು ಜೈಲಿಗೆ ಕಳುಹಿಸಬಹುದು: ಪೋಸ್ಟ್ ಜತೆ ಜನತೆಗೆ ಪೊಲೀಸ್ ಇಲಾಖೆ ಸಂದೇಶವನ್ನು ನೀಡಿದ್ದಾರೆ. ಅದೇನೆಂದರೆ “ಬೆಂಗಳೂರಿಗರೇ ಗಮನಿಸಿ: ಆನ್‌ಲೈನ್‌ನಲ್ಲಿ ಮಾಡಿದ ಬೆದರಿಕೆಯನ್ನು ನೇರವಾಗಿ ಮಾಡಿದ ಬೆದರಿಕೆಯಂತೆಯೇ ಗಂಭೀರವಾಗಿ ಪರಿಗಣಿಸಲಾಗುತ್ತದೆ. ಟೈಪ್ ಮಾಡುವ ಮೊದಲು ಯೋಚಿಸಿ — ಏಕೆಂದರೆ ನಿಮ್ಮ ಪೋಸ್ಟ್‌ಗಳು ನಿಮ್ಮನ್ನು ಜೈಲಿಗೆ ಕಳುಹಿಸಬಹುದು” ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ.
ಭಾನುವಾರದಿಂದ ಬಿಗ್ಬಾಸ್ ಶುರು: ಬಿಗ್ ಬಾಸ್ ಸೀಸನ್ 12ರ ಆವೃತ್ತಿ ಸೆ.28 ರಿಂದ ಆರಂಭವಾಗುತ್ತಿದೆ. 18 ಮಂದಿ ಸ್ಪರ್ಧಿಗಳು ಕನ್ನಡ ಬಿಗ್ ಬಾಸ್ ಮನೆಗೆ ಭಾನುವಾರ ಪ್ರವೇಶ ಮಾಡಲಿದ್ದಾರೆ. ಈ ಬಾರಿಯ ಸೀಸನ್ ಅನ್ನೂ ಕಿಚ್ಚ ಸುದೀಪ್ ಅವರೇ ನಿರೂಪಣೆ ಮಾಡಲಿದ್ದು, ಬಿಗ್ಬಾಸ್ ಪ್ರೇಕ್ಷಕರು, ಕಿಚ್ಚನ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಈಗಾಗಲೇ ಬಿಗ್ ಬಾಸ್ ಸೀಸನ್ 12ರ ಪ್ರೋಮೋಗಳು ರಿಲೀಸ್ ಆಗಿವೆ. ಆದರೆ ಸ್ಪರ್ಧಾಳುಗಳು ಯಾರೆಲ್ಲ ಇರಲಿದ್ದಾರೆ ಎಂಬುದು ಇನ್ನೂ ರಿವೀಲ್ ಆಗಿಲ್ಲ. ಇಂದು ಸಂಜೆ 6 ಗಂಟೆಗೆ ಗ್ರ್ಯಾಂಡ್ ಓಪನಿಂಗ್ ಆಗಲಿದೆ.
Laxmi News 24×7