ಮೈಸೂರು : ಸರಸ್ವತಿ ಸನ್ಮಾನ್ ಪ್ರಶಸ್ತಿ ಪುರಸ್ಕೃತ ಎಸ್.ಎಲ್.ಭೈರಪ್ಪ ಅವರ ಅಂತ್ಯಕ್ರಿಯೆ ಸಕಲ ಸರ್ಕಾರ ಗೌರವಗಳೊಂದಿಗೆ ನಾಳೆ (ಶುಕ್ರವಾರ) ಮಧ್ಯಾಹ್ನ ಮೈಸೂರು ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ರುದ್ರ ಭೂಮಿಯಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ಮಾಹಿತಿ ನೀಡಿವೆ. ಬುಧವಾರ ಬೆಂಗಳೂರಿನ ರಾಷ್ಟ್ರೋತ್ಥಾನ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದ ಅವರಿಗೆ 94 ವರ್ಷ ವಯಸ್ಸಾಗಿತ್ತು.
ಮೂಲತಃ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಸಂತೇಶಿವರ ಗ್ರಾಮದವರಾದ ಭೈರಪ್ಪ, ಕೆಳದ 50 ವರ್ಷಗಳಿಂದ ಮೈಸೂರಿನ ಉದಯರವಿ ರಸ್ತೆಯಲ್ಲಿರುವ ಮನೆ ನಂ:1007ರಲ್ಲಿ ಪತ್ನಿ ಸರಸ್ವತಿ ಅವರೊಂದಿಗೆ ವಾಸವಿದ್ದರು. ಇವರಿಗೆ ರವಿಶಂಕರ್ ಹಾಗೂ ಉದಯಶಂಕರ್ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ. ರವಿಶಂಕರ್ ವಿದೇಶದಲ್ಲಿದ್ದರೆ, ಉದಯಶಂಕರ್ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.
ಅಂತಿಮ ದರ್ಶನಕ್ಕೆ ವ್ಯವಸ್ಥೆ: ನಾಳೆ ಅವರ ಅಂತ್ಯಕ್ರಿಯೆ ನಡೆಯಲಿದ್ದು, ಅದಕ್ಕೂ ಮುನ್ನ ಇಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ನಂತರ ಪಾರ್ಥಿವ ಶರೀರವನ್ನು ಮೈಸೂರಿಗೆ ಕೊಂಡೊಯ್ಯಲಾಗುತ್ತದೆ. ಮೈಸೂರಿನ ಕಲಾಮಂದಿರದಲ್ಲಿ ಸಂಜೆವರಗೆ ಸಾರ್ವಜನಿಕರ ದರ್ಶನಕ್ಕೆ ಮಾಡಲಾಗಿದ್ದು, ರಾತ್ರಿ ಮೈಸೂರಿನ ಉದಯರವಿ ರಸ್ತೆಯ ಭೈರಪ್ಪ ನಿವಾಸದಲ್ಲಿ ಭೈರಪ್ಪನವರ ಪಾರ್ಥಿವ ಶರೀರವನ್ನು ತರಲಾಗುವುದು. ಬಳಿಕ ನಾಳೆ ಬೆಳಗ್ಗೆ 8.30ರಿಂದ 11ಗಂಟೆವರಗೆ ಮನೆಯ ಆವರಣದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಬಳಿಕ ರಾಜ್ಯ ಸರ್ಕಾರದ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆಡೆಯಲಿದೆ.

ಭೈರಪ್ಪನವರನ್ನು ನೆನೆದ ಮನೆ ಕೆಲಸದವರು: ಕಳೆದ 35 ವರ್ಷದಿಂದ ಮೈಸೂರಿನಲ್ಲಿರುವ ಭೈರಪ್ಪನವರ ಮನೆಯ ಕೆಲಸ ಮಾಡುತ್ತಿದ್ದ ಚಿನ್ನಪ್ಪ ಮಾತನಾಡಿ, ಭೈರಪ್ಪನವರು ತುಂಬಾ ಒಳ್ಳೆಯವರು. ಅವರ ಮನೆಯಲ್ಲಿ ನನ್ನ ಹೆಂಡತಿ ಹಲವು ವರ್ಷಗಳ ಕಾಲ ಮನೆಕೆಲಸ ಮಾಡುತ್ತಿದಳು. ಕೊರೊನಾ ವೇಳೆ ಆಕೆ ಮೃತಪಟ್ಟಾಗ ಅವರು ತುಂಬಾ ಸಹಾಯ ಮಾಡಿದರು. ನಾವು ಭೈರಪ್ಪನವರ ಋಣ ತೀರಿಸಲು ಆಗುವುದಿಲ್ಲ. ನಾನು ಅವರ ಮನೆಯ ಫೋನ್ ಬಿಲ್, ಕರೆಂಟ್ ಬಿಲ್, ಕೇಬಲ್ ಬಿಲ್ ಕಟ್ಟಿ, ಅವರ ಮನೆಯ ಗಾರ್ಡನ್ ಕೆಲಸ ಮಾಡುತ್ತಿದ್ದೆ. ತಮಗೆ ಪ್ರಶಸ್ತಿಗಳ ಸಂದರ್ಭದಲ್ಲಿ ಸಾಮಗ್ರಿಗಳನ್ನು ಶಾಲಾ ಮಕ್ಕಳಿಗೆ ಕೊಡುತ್ತಿದ್ದರೆಂದು ಭೈರಪ್ಪನವರನ್ನು ನೆನೆದು ಭಾವುಕರಾದರು.
ಭೈರಪ್ಪನವರ ಮನೆಯ ಕೆಲಸ ಮಾಡುತ್ತಿದ್ದ ಮಹಾದೇವಿ ಮಾತನಾಡಿ, ನಾನು ಕಳೆದೊಂದು ವರ್ಷದಿಂದ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದೆ. ಅವರ ಸಾವಿನ ಸುದ್ದಿಯನ್ನು ಟಿವಿಯಲ್ಲಿ ನೋಡಿದೆ. ನಾನು ಪ್ರತಿದಿನ ಬೆಳಗ್ಗೆ ಮನೆಯ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ತಮ್ಮ ಸ್ನೇಹಿತರೊಂದಿಗೆ ವಾಕ್ ಮುಗಿಸಿಕೊಂಡು ಬಂದು ಪೇಪರ್ ಓದಿ, ಪುಸ್ತಕ ಬರೆಯುತ್ತಿದ್ದರು. ಹೆಚ್ಚಿಗೆ ಮಾತನಾಡುತ್ತಿರಲಿಲ್ಲ. ಮನೆಯಲ್ಲಿ ಅವರ ಧರ್ಮಪತ್ನಿ ಸರಸ್ವತಿ ಅವರಿಗೆ ತಿಂಡಿ ಹಾಗೂ ಅಡುಗೆ ಮಾಡುತ್ತಿದ್ದರು. ನಾನು ಸಹಾಯ ಮಾತ್ರ ಮಾಡುತ್ತಿದ್ದೆ. ಭೈರಪ್ಪನವರು ಬೆಂಗಳೂರಿಗೆ ಹೋಗಿದ್ದಾಗ ಮನೆಯಲ್ಲಿ ಸರಸ್ವತಿ ಅಮ್ಮನವರು ಬಿದ್ದು ಆಸ್ಪತ್ರೆಗೆ ಸೇರಿದ್ದರು. ನಾವೇ ಅವರನ್ನು ಆಸ್ಪತ್ರೆಗೆ ಸೇರಿಸಿದ್ದೆವು. ಅಲ್ಲಿಂದ ಹುಷಾರಾದ ಬಳಿಕ ಅವರ ಮಗ ಬಂದು ಮೊನ್ನೆಯಷ್ಟೇ ಅವರನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದರು ಎಂದು ಭೈರಪ್ಪನವರ ನಿಧನಕ್ಕೆ ಬೇಸರ ವ್ಯಕ್ತಪಡಿಸಿದರು.
Laxmi News 24×7